Asianet Suvarna News Asianet Suvarna News

ಏಷ್ಯಾದ ಶ್ರೀಮಂತ ಪುರುಷ ಮಾತ್ರವಲ್ಲ, ಮಹಿಳೆ ಕೂಡ ಭಾರತೀಯರೆ;ಹುಯಿಯಾನ್ ಹಿಂದಿಕ್ಕಿದ ಸಾವಿತ್ರಿ ಜಿಂದಾಲ್

ಭಾರತದ ಉದ್ಯಮಿ ಗೌತಮ್‌ ಅದಾನಿ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತು. ಈಗ ಏಷ್ಯಾದ ಶ್ರೀಮಂತ ಮಹಿಳೆ ಪಟ್ಟ ಕೂಡ ಭಾರತೀಯರ ಪಾಲಾಗಿದೆ. ಭಾರತದ ಉದ್ಯಮಿ, ಒ.ಪಿ. ಜಿಂದಾಲ್ ಗ್ರೂಪ್ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಈಗ ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ತನಕ ಆ ಸ್ಥಾನದಲ್ಲಿದ್ದ ಚೀನಾದ ಉದ್ಯಮಿ ಯಾಂಗ್ ಹುಯಿಯಾನ್ ಚೀನಾದ ರಿಯಲ್ ಎಸ್ಟೇಟ್ ಉದ್ಯಮ ರಂಗದಲ್ಲಿನ ಬಿಕ್ಕಟ್ಟಿನಿಂದ ತನ್ನ ಅರ್ಧಕ್ಕಿಂತ ಹೆಚ್ಚಿನ ಸಂಪತ್ತು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಜಾರಿದ್ದಾರೆ.  

Savitri Jindal replaces Chinas Yang Huiyan as the richest woman in Asia
Author
Bangalore, First Published Jul 30, 2022, 8:51 PM IST

ನವದೆಹಲಿ (ಜು.30): ಭಾರತದ ಅತ್ಯಂತ ಶ್ರೀಮಂತ ಮಹಿಳೆ ಜಿಂದಾಲ್ ಗ್ರೂಪ್ ನ ಸಾವಿತ್ರಿ ಜಿಂದಾಲ್ ಈಗ ಏಷ್ಯಾದ ನಂ.1 ಶ್ರೀಮಂತ ಮಹಿಳೆ ಪಟ್ಟ ಅಲಂಕರಿಸಿದ್ದಾರೆ. ಈ ತನಕ ಏಷ್ಯಾದ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿದ್ದ ಯಾಂಗ್ ಹುಯಿಯಾನ್  ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಚೀನಾದ ರಿಯಲ್ ಎಸ್ಟೇಟ್ ಉದ್ಯಮ ರಂಗದಲ್ಲಿನ ಬಿಕ್ಕಟ್ಟಿನಿಂದ ಹುಯಿಯಾನ್ತನ್ನ ಅರ್ಧಕ್ಕಿಂತ ಹೆಚ್ಚಿನ ಸಂಪತ್ತು ಕಳೆದುಕೊಂಡಿದ್ದರು. ಹುಯಿಯಾನ್  ಒಡೆತನದ ಕಂಟ್ರಿ ಗಾರ್ಡನ್ ಸೇರಿದಂತೆ ಚೀನಾದ ರಿಯಲ್ ಎಸ್ಟೇಟ್ ಕಂಪನಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮ ಈ ತನಕ ಏಷ್ಯಾದ ನಂ.1 ಮಹಿಳೆ ಎಂಬ ಪಟ್ಟ ಅಲಂಕರಿಸಿದ್ದ ಹುಯಿಯಾನ್ ಸ್ಥಾನ ಸಾವಿತ್ರಿ ಜಿಂದಾಲ್ ಅವರ ಪಾಲಾಗಿದೆ ಎಂದು ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕ ತಿಳಿಸಿದೆ. 41 ವರ್ಷದ ಯಾಂಗ್ ಚೀನಾದ ಅತೀದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್ಸ್ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ ಮುಖ್ಯಸ್ಥೆಯಾಗಿದ್ದು, ಆಕೆಯ ಬಹುತೇಕ ಸಂಪತ್ತು ತಂದೆಯಿಂದ ವರ್ಗಾವಣೆಗೊಂಡು ಬಂದಿರೋದಾಗಿದೆ. ಹುಯಿಯಾನ್ ಸಂಪತ್ತು ಈ ವರ್ಷ 24 ಬಿಲಿಯನ್ ಡಾಲರ್ ನಿಂದ 11 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಇನ್ನು ಚೀನಾದ ಸಹವರ್ತಿಯಾದ ಫ್ಯಾನ್ ಹಾಂಗ್ ವೆ ಅವರಿಗಿಂತ ಕೂಡ ಹುಯಿಯಾನ್  ಹಿಂದೆ ಬಿದ್ದಿದ್ದಾರೆ. ಹಾಂಗ್ ವೆ ಕೆಮಿಕಲ್ ಫೈಬರ್ ಉತ್ಪಾದನೆಯ ಹೆಂಗ್ಲಿ ಪೆಟ್ರೋಕೆಮಿಕಲ್ ಕಂಪನಿ ಮುಖ್ಯಸ್ಥೆಯಾಗಿದ್ದಾರೆ.

ಇಬ್ಬರಿಗೂ ಇದೆ 2005ರ ನಂಟು 
2005ರಲ್ಲಿ ಯಾಂಗ್ ಹುಯಿಯಾನ್ ತಂದೆಯ ರಿಯಲ್ ಎಸ್ಟೇಟ್ ಉದ್ಯಮದ ಚುಕ್ಕಾಣಿ ಹಿಡಿದು ಆ ಮೂಲಕ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎಂಬ ಹೆಗ್ಗಳಿಕೆ ಗಳಿಸಿದ್ದರು. ಇನ್ನು ಅದೇ ವರ್ಷ  ಪತಿಯ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಜಿಂದಾಲ್ ಗ್ರೂಪ್ ಮುನ್ನಡೆಸುವ ಹೊಣೆ ಸಾವಿತ್ರಿ ಜಿಂದಾಲ್ ಅವರ ಹೆಗಲಿಗೆ ಬಿದ್ದಿತ್ತು. ಜಿಂದಾಲ್ ಗ್ರೂಪ್ ಸಂಸ್ಥಾಪಕ ಸಾವಿತ್ರಿ ಜಿಂದಾಲ್ ಅವರ ಪತಿ ಒ.ಪಿ.ಜಿಂದಾಲ್ 2005ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು. ಆಗ ಸಾವಿತ್ರಿ ಜಿಂದಾಲ್ ಅವರ ವಯಸ್ಸು 55 ವರ್ಷ. ಇಂದು ಸಾವಿತ್ರಿ ಜಿಂದಾಲ್ ಒ.ಪಿ. ಜಿಂದಾಲ್ ಗ್ರೂಪ್ ಮುಖ್ಯಸ್ಥೆ. ಕಾಲೇಜು ಮೆಟ್ಟಿಲೇರದ ಸಾವಿತ್ರಿ ಜಿಂದಾಲ್  ನಾಯಕತ್ವದಲ್ಲಿ ಸಂಸ್ಥೆ ಆದಾಯ ನಾಲ್ಕು ಪಟ್ಟು ಹೆಚ್ಚಾಗಿದೆ.  

ITR Filing:ತೆರಿಗೆದಾರರೇ ಗಮನಿಸಿ, ಐಟಿಆರ್ ಸಲ್ಲಿಕೆಗೆ ನಾಳೆ ಕೊನೆಯ ದಿನ; ತಪ್ಪಿದ್ರೆ ಬೀಳುತ್ತೆ 5000ರೂ. ದಂಡ 

ಸಾವಿತ್ರಿ ಜಿಂದಾಲ್ ಸಂಪತ್ತಿನಲ್ಲಿ ಭಾರೀ ಏರಿಕೆ
72 ವರ್ಷದ ಸಾವಿತ್ರಿ ಜಿಂದಾಲ್ ಅವರು ಒಟ್ಟು 18 ಶತಕೋಟಿ ಡಾಲರ್ ನಿವ್ವಳ ಸಂಪತ್ತು ಹೊಂದಿದ್ದು, ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಅಲ್ಲದೆ,  ಫೋರ್ಬ್ಸ್ 2021ರ ಶ್ರೀಮಂತ ಭಾರತೀಯರ ಟಾಪ್  10ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ ಕೂಡ ಹೌದು.  ಕಳೆದ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅವರ ನಿವ್ವಳ ಸಂಪತ್ತಿನಲ್ಲಿ ಸುಮಾರು 12 ಶತಕೋಟಿ  ಡಾಲರ್ ಏರಿಕೆಯಾಗಿದೆ. 2020ರಲ್ಲಿ 4.8 ಶತಕೋಟಿ ಡಾಲರ್ ಇದ್ದ ಸಾವಿತ್ರಿ ಜಿಂದಾಲ್ ಅವರ ಸಂಪತ್ತು, 2022ರಲ್ಲಿ 17.7 ಶತಕೋಟಿ ಡಾಲರ್ ಗೆ ಏರಿಕೆಯಾಗಿತ್ತು. 

ಏಷ್ಯಾದ ಶ್ರೀಮಂತ ಮಹಿಳೆಗೆ ಹೊಡೆತ ನೀಡಿದ ಚೀನಾದ ರಿಯಲ್ ಎಸ್ಟೇಟ್ ಬಿಕ್ಕಟ್ಟು; ಕರಗಿತು ಅರ್ಧಕ್ಕಿಂತಲೂ ಹೆಚ್ಚಿನ ಸಂಪತ್ತು

ಸಾರ್ವಜನಿಕ ಜೀವನ
ಯಾಂಗ್ ಹುಯಿಯಾನ್ ಏಷ್ಯಾದ ಶ್ರೀಮಂತ ಮಹಿಳೆಯಾಗಿದ್ದರೂ ಕೂಡ ಸಾರ್ವಜನಿಕ ಜೀವನದಿಂದ ಅಂತರ ಕಾಯ್ದುಕೊಂಡಿದ್ದರು. ಇಂಟರ್ನೆಟ್ ನಲ್ಲಿ ಕೂಡ ಹುಡುಕಿದರೆ ಅವರ ಹೆಚ್ಚು ಫೋಟೋಗಳು ಕಾಣಸಿಗೋದಿಲ್ಲ. ಇನ್ನೊಂದು ಕಡೆ ಸಾವಿತ್ರಿ ಜಿಂದಾಲ್ ಸಾರ್ವಜನಿಕ ಜೀವನದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.  ಈ ಹಿಂದೆ ಹರಿಯಾಣದಲ್ಲಿ (Haryana) ಭೂಪಿಂದರ್ ಸಿಂಗ್ ಸರ್ಕಾರದಲ್ಲಿ ಸಾವಿತ್ರಿ ಜಿಂದಾಲ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 

Follow Us:
Download App:
  • android
  • ios