ಏಷ್ಯಾದ ಶ್ರೀಮಂತ ಮಹಿಳೆಗೆ ಹೊಡೆತ ನೀಡಿದ ಚೀನಾದ ರಿಯಲ್ ಎಸ್ಟೇಟ್ ಬಿಕ್ಕಟ್ಟು; ಕರಗಿತು ಅರ್ಧಕ್ಕಿಂತಲೂ ಹೆಚ್ಚಿನ ಸಂಪತ್ತು
*ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಚೀನಾದ ರಿಯಲ್ ಎಸ್ಟೇಟ್ ಉದ್ಯಮ
*ಏಷ್ಯಾದ ಶ್ರೀಮಂತ ಮಹಿಳೆ ಯಾಂಗ್ ಹುಯಿಯಾನ್ ಸಂಪತ್ತಿನಲ್ಲಿ ಭಾರೀ ಇಳಿಕೆ
*ಹುಯಿಯಾನ್ ಸಂಪತ್ತು 24 ಬಿಲಿಯನ್ ಡಾಲರ್ ನಿಂದ 11 ಬಿಲಿಯನ್ ಡಾಲರ್ ಗೆ ಇಳಿಕೆ
ಬೀಜಿಂಗ್ (ಜು.29): ಚೀನಾದ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಏಷ್ಯಾದ ಶ್ರೀಮಂತ ಮಹಿಳೆ ಯಾಂಗ್ ಹುಯಿಯಾನ್ ಅರ್ಧಕ್ಕಿಂತ ಹೆಚ್ಚಿನ ಸಂಪತ್ತು ಕಳೆದುಕೊಂಡಿದ್ದಾರೆ. ಹುಯಿಯಾನ್ ಸಂಪತ್ತು 24 ಬಿಲಿಯನ್ ಡಾಲರ್ ನಿಂದ 11 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ ಎಂದು ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕ ತಿಳಿಸಿದೆ. 41 ವರ್ಷದ ಯಾಂಗ್ ಚೀನಾದ ಅತೀದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್ಸ್ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ ಮುಖ್ಯಸ್ಥೆಯಾಗಿದ್ದು, ಆಕೆಯ ಬಹುತೇಕ ಸಂಪತ್ತು ತಂದೆಯಿಂದ ವರ್ಗಾವಣೆಗೊಂಡು ಬಂದಿರೋದಾಗಿದೆ. ಯಾಂಗ್ ತಂದೆ ಯಂಗ್ ಗುವೊಕಿಯಂಗ್ ಗುಅಂಗ್ ಡಾಂಗ್ ಪ್ರಾಂತ್ಯದ ಫೋಶನ್ ನಲ್ಲಿ 1992ರಲ್ಲಿ ಕಂಪನಿ ಸ್ಥಾಪಿಸಿದರು. ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ ಷೇರುಗಳು ಈ ವರ್ಷ ಅರ್ಧಕ್ಕಿಂತಲೂ ಹೆಚ್ಚಿನ ಮೌಲ್ಯ ಕಳೆದುಕೊಂಡಿವೆ. ಮನೆಗಳ ಬೆಲೆಯಲ್ಲಿ ಇಳಿಕೆ, ಬೇಡಿಕೆ ಕುಸಿತ ಹಾಗೂ ಸಾಲದ ಬೇಪಾವತಿಯಿಂದ ಚೀನಾದ ರಿಯಲ್ ಎಸ್ಟೇಟ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಪರಿಣಾಮ ಕಳೆದ ವರ್ಷದಿಂದ ಚೀನಾದ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ.
ಈಗಲೂ ಹುಯಿಯಾನ್ ಏಷ್ಯಾದ ಶ್ರೀಮಂತ ಮಹಿಳೆ
ಅರ್ಧಕ್ಕಿಂತಲೂ ಹೆಚ್ಚಿನ ಸಂಪತ್ತು ಕರಗಿದ್ದರೂ ಈಗಲೂ ಯಾಂಗ್ ಹುಯಿಯಾನ್ ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆಯಾಗಿಯೇ ಉಳಿದಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕ ತಿಳಿಸಿದೆ.ಆದ್ರೆ, ಹುಯಿಯಾನ್ ನಿವ್ವಳ ಸಂಪತ್ತಿನಲ್ಲಿ ಇಳಿಕೆಯಾಗಿರುವ ಕಾರಣ ಆಕೆ ಹಾಗೂ ಚೀನಾದ ಅವಳ ಸಹವರ್ತಿ ಮಹಿಳಾ ಬಿಲಿಯನರ್ ಗಳ ನಡುವಿನ ಸಂಪತ್ತಿನ ಅಂತರ ತಗ್ಗಿದೆ. ಹುಯಿಯಾನ್ ಈಗ ಸಂಪತ್ತಿನಲ್ಲಿ ಫ್ಯಾನ್ ಹಾಂಗ್ ವೆ ಅವರಿಗಿಂತ ಕೇವಲ 100 ಮಿಲಿಯನ್ ಡಾಲರ್ ಮುಂದಿದ್ದಾರೆ. ಹಾಂಗ್ ವೆ ಕೆಮಿಕಲ್ ಫೈಬರ್ ಉತ್ಪಾದನೆಯ ಹೆಂಗ್ಲಿ ಪೆಟ್ರೋಕೆಮಿಕಲ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.
Dollar Vs Rupee:ಡಾಲರ್ ಎದುರು ಚೇತರಿಸಿದ ರೂಪಾಯಿ; ಎರಡು ತಿಂಗಳಲ್ಲೇ ಗರಿಷ್ಠ ಗಳಿಕೆ
ಚೀನಾದಲ್ಲಿ ನೆಲಕಚ್ಚಿದ ರಿಯಲ್ ಎಸ್ಟೇಟ್ ಉದ್ಯಮ
ಕಳೆದ ವರ್ಷದ ಡಿಸೆಂಬರ್ ನಲ್ಲಿ ಹಣಕಾಸಿನ ಕೊರತೆಯಿಂದ ಚೀನಾದ (China) ಅತ್ಯಂತ ಹೆಚ್ಚಿನ ಸಾಲ ಹೊಂದಿದ್ದ ಎವರ್ ಗ್ರ್ಯಾಂಡೆ ಸಂಸ್ಥೆ ದಿವಾಳಿಯಾಗಿತ್ತು. ಇದರ ಬೆನ್ನಲ್ಲೇ ಕೈಸ ಹಾಗೂ ಶಿಮವೋ ಗ್ರೂಪ್ ಸೇರಿದಂತೆ ಅನೇಕ ಇತರ ಪ್ರಮುಖ ಡೆವಲಪರ್ಸ್ ಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದವು. ಇನ್ನು ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಬಾಕಿ ಹಣ ಪಾವತಿಸೋದಿಲ್ಲ ಎಂದು ಕೆಲವು ಮನೆ ಖರೀದಿದಾರರು ಕೂಡ ಹಟ ಹಿಡಿದ ಪರಿಣಾಮ ರಿಯಲ್ ಎಸ್ಟೇಟ್ ಬಿಕ್ಕಟ್ಟು ಹೆಚ್ಚಿತು.
ನಗದು ಕೊರತೆ ಎದುರಿಸುತ್ತಿರುವ ಕಂಟ್ರಿ ಗಾರ್ಡನ್
ಹುಯಿಯಾನ್ ಅವರ ಕಂಟ್ರಿ ಗಾರ್ಡನ್ (Country Garden) ಕೂಡ ತೀವ್ರ ನಗದು ( liquidity) ಕೊರತೆ ಎದುರಿಸುತ್ತಿದೆ. ಈ ಕಂಪನಿ 361 ಬಿಲಿಯನ್ ಡಾಲರ್ ಸಂಗ್ರಹಿಸಲು ತನ್ನ ಷೇರುಗಳನ್ನು ಶೇ.13ರಷ್ಟು ಡಿಸ್ಕೌಂಟ್ (Discount) ದರದಲ್ಲಿ ಮಾರಾಟ ಮಾಡೋದಾಗಿ ಜುಲೈ 27ರಂದು ಘೋಷಿಸಿತ್ತು.
ಐಟಿಆರ್ ಸಲ್ಲಿಕೆಗೆ ಎರಡೇ ದಿನ ಅವಕಾಶ: ಡೆಡ್‌ಲೈನ್ ವಿಸ್ತರಣೆ ಅಸಂಭವ ಎಂದ ಕೇಂದ್ರ ಸರ್ಕಾರ
ಚೀನಾದ 50 ಕ್ಕೂ ಹೆಚ್ಚು ನಗರಗಳಲ್ಲಿ ಮನೆ ಖರೀದಿದಾರರು ಕನಿಷ್ಠ 100 ಯೋಜನೆಗಳಲ್ಲಿ ಸಾಲ ಮರುಪಾವತಿ (Loan repayment) ನಿಲ್ಲಿಸಿದ್ದಾರೆ. ಇದು ಚೀನಾದ (China) ರಿಯಲ್ ಎಸ್ಟೇಟ್ (Real Estate) ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಅಷ್ಟೇ ಅಲ್ಲ, ಚೀನಾದ ಬ್ಯಾಂಕುಗಳು (Banks) ಕೂಡ ಈಗ ಸಂಕಷ್ಟಕ್ಕೆ ಸಿಲುಕಿವೆ. ಮನೆ ಖರೀದಿದಾರರು ಸಾಲ ಮರುಪಾವತಿ ನಿಲ್ಲಿಸಿದರೆ, ಬ್ಯಾಂಕುಗಳು ಡೀಫಾಲ್ಟ್ (Default) ಆಗಬೇಕಾದಂತಹ ಸ್ಥಿತಿಯಿದೆ.