ನೀವು ತಿಂಗಳ ಸ್ಯಾಲರಿ ಪಡೆಯುತ್ತಿರುವ ಉದ್ಯೋಗಿಯಾ? ಹಾಗಾದರೆ ವಾರದಲ್ಲಿ ಇನ್ನು ಕನಿಷ್ಠ 80 ಗಂಟೆ ಕೆಲಸ ಅನಿವಾರ್ಯವಾಗುವ ಸಾಧ್ಯತೆಗಳು ಕಾಣುತ್ತಿದೆ. ನಾರಾಯಣ ಮೂರ್ತಿ, ಎನ್ಎಸ್ ಸುಬ್ರಹ್ಮಣ್ಯನ್ ಬಳಿಕ ಇದೀಗ ನೀತಿ ಆಯೋಗದ ಮಾಜಿ ಸಿಇಒ 80 ಗಂಟೆ ಕೆಲಸದ ಮಾತನಾಡಿದ್ದಾರೆ.

ನವದೆಹಲಿ(ಮಾ.01) ಇನ್ಫೋಸಿಸ್ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದರೆ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎನ್ಎಸ್ ಸುಬ್ರಹ್ಮಣ್ಯನ್ ವಾರದಲ್ಲಿ 90 ಗಂಟೆ ಕೆಲಸ ಅನಿವಾರ್ಯ ಎಂದಿದ್ದರು. ಈ ಹೇಳಿಕೆಗಳು ಭಾರಿ ಚರ್ಚೆಯಾಗಿ ಇದೀಗ ತಣ್ಣಗಾಗಿದೆ. ಆದರೆ ಇದರ ನಡುವೆ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ 80 ಗಂಟೆ ಕೆಲಸ ಅನಿವಾರ್ಯ ಎಂದಿದ್ದಾರೆ. ಇದರೊಂದಿಗೆ ಭಾರತದಲ್ಲಿ ಪ್ರತಿ ದಿನ 8 ಗಂಟೆ ಅಥವಾ 9 ಗಂಟೆ ಕೆಲಸದ ಸಮಯ ಇನ್ನು ಮುಂದೆ 11 ರಿಂದ 12 ಗಂಟೆಗೆ ಏರಿಕೆಯಾಗುವ ಸಾಧ್ಯತೆ ಕುರಿತು ಚರ್ಚೆ ಶುರುವಾಗಿದೆ.

ಭಾರತದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಭಾರಿ ಚರ್ಚೆಯಾಗುತ್ತಿದೆ. ಕಾರಣ ಭಾರತದಲ್ಲಿ ವಾರದ ಕೆಲಸದ ಸಮಯ ಹೆಚ್ಚಿಸಬೇಕು. ಸರ್ಕಾರ ಈಗಿರುವ ಸಮಯವನ್ನು ಹೆಚ್ಚಿಸಬೇಕು ಎಂದು ಸತತವಾಗಿ ಪ್ರಮುಖ ದಿಗ್ಗಜರು ಹೇಳುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರದ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ನೀಡಿರುವ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತ ಸರ್ಕಾರವೇ ಪ್ರತಿ ದಿನ ಕೆಲಸದ ಸಮಯ ಹೆಚ್ಚಸುತ್ತಾ ಅನ್ನೋ ಆತಂಕಗಳು ಮನೆ ಮಾಡಿದೆ.

ವರ್ಕ್ ಫ್ರಮ್ ಕಾರ್, ಡ್ರೈವಿಂಗ್ ಜೊತೆ ಕೆಲಸ ಮಾಡಿದ ಬೆಂಗಳೂರು ಮಹಿಳೆಗೆ ಪೊಲೀಸರ ಉಡುಗೊರೆ

ಖಾಸಗಿ ಕಾರ್ಯಕ್ರಮದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಕುರತು ಮಾತನಾಡಿದ ಅಮಿತಾಬ್ ಕಾಂತ್, ಈಗ ಎಲ್ಲವೂ ಫ್ಯಾಶನ್ ಆಗಿದೆ. ಆದರೆ ಯಾರೂ ಕಠಿಣ ಪರಿಶ್ರಮಕ್ಕೆ ತಯಾರಿಲ್ಲ. ಭಾರತೀಯರು ಮತ್ತಷ್ಟು ಕಠಿಣ ಪರಿಶ್ರಮ ಪಡಬೇಕಿದೆ. ಸದ್ಯ ಮಾಡುತ್ತಿರುವ ಪರಿಶ್ರಮ ವಿಶ್ವದ ಮುಂದೆ ಸ್ಪರ್ಧೆ ನಡಸಲು ಸಾಧ್ಯವಾಗುವುದಿಲ್ಲ. ಭಾರತ 4 ಟ್ರಿಲಿಯನ್ ಎಕಾನಾಮಿಯಿಂದ 30 ಟ್ರಿಲಿಯನ್ ಎಕಾನಮಿಗೆ ಏರಬೇಕಾದರೆ ವಾರದಲ್ಲಿ ಕನಿಷ್ಠ 80 ಗಂಟೆ ಅಥವಾ 90 ಗಂಟೆ ಕೆಲಸ ಮಾಡಬೇಕು. ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು. ಹಾಗಂತ ಕಾಟಾಚಾರಕ್ಕಲ್ಲ, ಅತ್ಯುತ್ತಮ ಗುಣಮಟ್ಟದಲ್ಲಿ ಕೆಲಸ ಪೂರೈಸಲು ಹೆಚ್ಚಿನ ಸಮಯ ಬೇಕು. ಇದಕ್ಕಾಗಿ ವರ್ಷಾನುಗಟ್ಟಲೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪ್ರತಿ ದಿನ ಕೆಲಸದ ಸಮಯ ಹೆಚ್ಚಿಸಬೇಕು ಎಂದು ಅಮಿತಾಬ್ ಕಾಂತ್ ಸಲಹೆ ನೀಡಿದ್ದಾರೆ.

ಭಾರತದಲ್ಲಿ ಸದ್ಯ ಕೆಲಸದ ಸಮಯ ಅತೀ ಕಡಿಮೆ. ಇದು ನಿಯಮ. ಆದರೆ ದೇಶದ ಅಭಿವೃದ್ಧಿ ಹಾಗೂ ಆರ್ಥಿಕತೆ ಪ್ರಗತಿಯಾಗಬೇಕಾದರೆ ಈ ಕೆಲಸದ ಸಮಯ ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ಅಮಿತಾಬ್ ಕಾಂತ್ ಹೇಳಿದ್ದರೆ. ಅಮಿತಾಬ್ ಕಾಂತ್ ಹೇಳಿಕೆ ಇದೀಗ ಭಾರತದ ಕೆಲಸದ ಸಮಯದ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದೆ. ಕಾರಣ ಇನ್ಪೋಸಿಸ್ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಸೂಚಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಪರ ವಿರೋಧಗಳು ವ್ಯಕ್ತವಾಗಿತ್ತು. ಇದಾದ ಬಳಿಕ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎನ್ಎಸ್ ಸುಬ್ರಹ್ಮಣ್ಯನ್ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಭಾನುವಾರ ಹೆಂಡತಿ ಮುಖ ನೋಡುತ್ತಾ ಮನೆಯಲ್ಲಿ ಎಷ್ಟು ಹೊತ್ತು ಕುಳಿತುಕೊಳ್ಳುತ್ತೀರಿ. ಕಚೇರಿಗೆ ಬಂದು ಕೆಲಸ ಮಾಡಿ ಎಂದು ಸೂಚಿಸಿದ್ದರು. ಇದಾದ ಬಳಿಕ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಾರದಲ್ಲಿ 120 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಇದೀಗ ಅಮಿತಾಬ್ ಕಾಂತ್ ಸರದಿ. ಈ ಚರ್ಚೆಗಳಿಂದ ಭಾರತದಲ್ಲಿ ಕೆಲಸದ ಸಮಯ ಹೆಚ್ಚಿಸುವ ನಿರ್ಧಾರ ಸರ್ಕಾರ ತೆಗೆದುಕೊಳ್ಳುತ್ತಾ ಅನ್ನೋದು ಜನಸಾಮಾನ್ಯರ ಆತಂಕವಾಗಿದೆ.

ಇತ್ತೀಚೆಗೆ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ. ಸದ್ಯ ಕೆಲಸದ ಸಮಯ ಹೆಚ್ಚಿಸುವ ಯಾವುದೇ ಪ್ರಸ್ತಾವನೇ ಇಲ್ಲ ಎಂದಿದೆ. 

ನೌಕರರಿಗೆ ವೀಕೆಂಡ್‌ನಲ್ಲಿ ಕೆಲಸ, ಬಾಸ್‌ಗೆ ಮಾತ್ರ ಟಿ20 ಕಿಕ್, ಮತ್ತೆ ನಾರಾಯಣ ಮೂರ್ತಿ ಟ್ರೋಲ್