ನವದೆಹಲಿ(ಆ.8): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ನೇಮಕಗೊಂಡಿದ್ದಾರೆ.

ಆರ್‌ಬಿಐ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ನೇಮಕಕ್ಕೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಗುರುಮೂರ್ತಿ ತಮಿಳು ನಿಯತಕಾಲಿಕೆ ‘ತುಘಲಕ್’ ನ ಸಂಪಾದಕರು ಮಾತ್ರವಲ್ಲದೆ ಚಾರ್ಟರ್ಡ್ ಅಕೌಂಟೆಂಟ್, ಹಾಗೂ ಆರ್ಥಿಕ ಮತ್ತು ರಾಜಕೀಯ ಅಂಕಣಕಾರರೂ ಆಗಿದ್ದಾರೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಈ ನೇಮಕಾತಿಗಳ ಪ್ರಸ್ತಾವನೆ ಬಂದಿತ್ತು. ಈ ಪ್ರಸ್ತಾವನೆಗೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

15 ಸದಸ್ಯರನ್ನು ಒಳಗೊಂಡಿರುವ  ಕೇಂದ್ರ ಬ್ಯಾಂಕ್ ನ ಉನ್ನತ ನಿರ್ದೇಶಕರ ಸಮಿತಿಗೆ ಇದೀಗ ಇಬ್ಬರು ಹೊಸ ನಿರ್ದೇಶಕರು ನೇಮಕವಾಗಿದ್ದು, ಒಟ್ಟು ನಾಲ್ಕು ವರ್ಷಗಳ ಕಾಲ ಇಬ್ಬರೂ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.