ಡಾಲರ್ ಎದುರು ರುಪಾಯಿ ಮೌಲ್ಯ ದಾಖಲೆ ಪ್ರಮಾಣದಲ್ಲಿ ಕುಸಿತ

First Published 29, Jun 2018, 9:48 AM IST
Rupee at lifetime low of 69 against US dollar
Highlights

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಾಲರ್‌ ವಿರುದ್ಧ ರುಪಾಯಿ ಮೌಲ್ಯ ಗುರುವಾರ ಐತಿಹಾಸಿಕ ಕುಸಿತ ದಾಖಲಿಸಿದೆ.

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಾಲರ್‌ ವಿರುದ್ಧ ರುಪಾಯಿ ಮೌಲ್ಯ ಗುರುವಾರ ಐತಿಹಾಸಿಕ ಕುಸಿತ ದಾಖಲಿಸಿ, 69 ರು. ಗಡಿ ದಾಟಿದ ಘಟನೆ ನಡೆದಿದೆ. ಆದರೆ ದಿನದಂತ್ಯಕ್ಕೆ ಚೇತರಿಸಿಕೊಂಡ ರುಪಾಯಿ, ಡಾಲರ್‌ ವಿರುದ್ಧ ಬುಧವಾರಕ್ಕಿಂತ 13 ಪೈಸೆ ಹೆಚ್ಚಳಗೊಂಡು 68.79 ರು.ನಲ್ಲಿ ವಹಿವಾಟು ಕೊನೆಗೊಳಿಸಿದೆ.

ನವೆಂಬರ್‌ನೊಳಗೆ ತನ್ನ ಎಲ್ಲ ಮಿತ್ರ ದೇಶಗಳೂ ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ಸೂಚನೆ ಹಾಗೂ ಲಿಬಿಯಾ ಮತ್ತು ಕೆನಡಾದಲ್ಲಿ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಏರುಗತಿಯಲ್ಲಿದೆ. ಈ ಬೆಳವಣಿಗೆಯಿಂದ ಭೀತಿಗೆ ಒಳಗಾದಂತಿರುವ ರುಪಾಯಿ, ಗುರುವಾರ ವಹಿವಾಟು ಆರಂಭವಾಗುತ್ತಿದ್ದಂತೆ 49 ಪೈಸೆಯಷ್ಟುಇಳಿಕೆ ಕಂಡಿತು. ತನ್ಮೂಲಕ ಸಾರ್ವಕಾಲಿಕ ದಾಖಲೆ ಮಟ್ಟವಾದ 69.10 ರು.ಗೆ ಜಾರಿತು. 2016ರ ನ.24ರಂದು ರುಪಾಯಿ ಮೌಲ್ಯ 68.8650 ರು.ಗೆ ಇಳಿಕೆ ಕಂಡಿತ್ತು. ಅದುವೇ ಈವರೆಗಿನ ಸಾರ್ವಕಾಲಿಕ ಮಟ್ಟವಾಗಿತ್ತು.

ಏನು ಪರಿಣಾಮ?:  ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತಗೊಂಡರೆ ದೇಶದ ನಾಗರಿಕರಿಗೆ ಹಲವು ಪರಿಣಾಮಗಳು ಉಂಟಾಗುತ್ತವೆ. ಕಚ್ಚಾತೈಲ, ರಸಗೊಬ್ಬರ, ಔಷಧ, ಕಬ್ಬಿಣದ ಅದಿರು, ಖಾದ್ಯತೈಲದಂತಹ ಭಾರತ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳು ದುಬಾರಿಯಾಗಲಿವೆ. ಈಗಾಗಲೇ ದುಬಾರಿಯಾಗಿರುವ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಮತ್ತಷ್ಟು ತುಟ್ಟಿಯಾಗಲಿವೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ವಿದೇಶ ಪ್ರವಾಸಕ್ಕೆ ಹೋಗುವವರು ಭಾರಿ ಹಣ ತೆರಬೇಕಾಗುತ್ತದೆ.

loader