ಭಾರತದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ₹78,213 ಕೋಟಿ ಹಣವಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿಜವಾದ ಮಾಲೀಕರಿಗೆ ಹಣ ಹಿಂದಿರುಗಿಸಲು ಬ್ಯಾಂಕಿಂಗ್ ನಿಯಂತ್ರಕರಿಗೆ ಸೂಚಿಸಿದ್ದಾರೆ.

ನವದೆಹಲಿ: ಭಾರತದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ ಹಣವಿದೆ. ಈ ಹಣ ನಮ್ಮದು ಎಂದು ಯಾವ ಗ್ರಾಹಕರು ಮುಂದಾಗಿಲ್ಲ. ಈ ಸಂಬಂಧ ಮಂಗಳವಾರ ಸಭೆ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯಾರು ಕ್ಲೈಮ್ ಮಾಡದ ಹಣವನ್ನು ನಿಜವಾದ ಮಾಲೀಕರಿಗೆ ಹಿಂದಿರುಗಿಸುವಂತೆ ಬ್ಯಾಂಕಿಂಗ್ ನಿಯಂತ್ರಕರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ .

ಹೆಚ್ಚುತ್ತಿರುವ ವಾರಸುದಾರರಿಲ್ಲದ ಹಣ

ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಹಣದ ಮೊತ್ತ ಏರಿಕೆಯಾಗುತ್ತಿದೆ. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ (FSDC) 29 ನೇ ಸಭೆ ಮಂಗಳವಾರ ನಡೆದಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಮಾತನಾಡಿದ ಸಚಿವರು, ಬ್ಯಾಂಕಿಂಗ್ ಕ್ಷೇತ್ರ ಪಾರದರ್ಶಕತೆ ಹೊಂದಿರಬೇಕು. ಸಾಮಾನ್ಯ ಜನರು ಸಹ ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸಲು ಸರಳವಾದ ಡಿಜಿಟಲ್‌ ಮಾರ್ಗವನ್ನು ಸರಳೀಕರಣಗೊಳಿಸಬೇಕು. ಹಾಗೆಯೇ ಎನ್‌ಆರ್‌ಐ ಸೇರಿದಂತೆ ಎಲ್ಲಾ ಜನರಿಗೆ ಕೆವೈಸಿ ಪ್ರಕ್ರಿಯೆ ಸುಲಭಗೊಳಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ದತ್ತಾಂಶದ ಪ್ರಕಾರ, ಮಾರ್ಚ್ 2024 ರವರೆಗೆ ಬ್ಯಾಂಕುಗಳಲ್ಲಿ ಉಳಿದಿರುವ ಕ್ಲೈಮ್ ಮಾಡದ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 26 ರಷ್ಟು ಏರಿಕೆಯಾಗಿದೆ. ಸದ್ಯ ಬ್ಯಾಂಕ್‌ಗಳಲ್ಲಿ 78,213 ಕೋಟಿ ರೂ. ಕ್ಲೈಮ್ ಮಾಡದ ಹಣವಿದೆ. ಮಾರ್ಚ್ 2023 ರ ಅಂತ್ಯದ ವೇಳೆಗೆ, ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯ ಅಡಿಯಲ್ಲಿ ಮಾತ್ರ 62,225 ಕೋಟಿ ರೂ.ಗಳನ್ನು ಠೇವಣಿ ಮಾಡಲಾಗಿದೆ. ಕ್ಲೈಮ್ ಮಾಡದ ಹಣವು ಬ್ಯಾಂಕ್‌ಗಳಲ್ಲಿನ ಠೇವಣಿಗಳು ಹಾಗೂ ಕ್ಲೈಮ್ ಮಾಡದ ಷೇರುಗಳು ಮತ್ತು ಲಾಭಾಂಶಗಳು ಮತ್ತು ಕ್ಲೈಮ್ ಮಾಡದ ವಿಮೆ ಮತ್ತು ಪಿಂಚಣಿ ನಿಧಿಗಳನ್ನು ಒಳಗೊಂಡಿದೆ.

ವಿಶೇಷ ಶಿಬಿರ ಆಯೋಜನೆಗೆ ಸೂಚನೆ

ಏರಿಕೆಯಾಗುತ್ತಿರುವ ಕ್ಲೈಮ್ ಮಾಡದ ಹಣದ ಮೊತ್ತವನ್ನು ಗಮನದಲ್ಲಿರಿಸಿಕೊಂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಆರ್‌ಬಿಐ, ಸೆಬಿ, ಎಂಸಿಎ, ಪಿಎಫ್‌ಆರ್‌ಡಿಎ ಮತ್ತು ಐಆರ್‌ಡಿಎಯಂತಹ ಹಣಕಾಸು ನಿಯಂತ್ರಕರಿಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ನಿರ್ದೇಶಿಸಿದ್ದಾರೆ. ಈ ವಿಶೇಷ ಶಿಬಿರಗಳ ಮೂಲಕ ನಿಜವಾದ ಮಾಲೀಕರಿಗೆ ಕ್ಲೈಮ್ ಮಾಡದ ಹಣ ಹಿಂದಿರುಗಿಸಲು ಸೂಚಿಸಲಾಗಿದೆ.

ಮಂಗಳವಾರ ನಡೆದ ಸಭೆಯಲ್ಲಿ ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ಸೆಬಿ ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಮತ್ತು ಐಎಫ್‌ಎಸ್‌ಸಿಎ ಅಧ್ಯಕ್ಷ ಕೆ ರಾಜಾರಾಮನ್ ಸೇರಿದಂತೆ ಐಆರ್‌ಡಿಎಐ, ಪಿಎಫ್‌ಆರ್‌ಡಿಎ, ಐಬಿಬಿಐ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಕ್ಲೈಮ್ ಮಾಡದ ಮೊತ್ತವನ್ನು ಕಂಡುಹಿಡಿಯುವುದು ಹೇಗೆ?

  • ಮೊದಲು ನೀವು RBI ನ UDGAM ಪೋರ್ಟಲ್ udgam.rbi.org.in ಗೆ ಭೇಟಿ ನೀಡಬೇಕು.
  • ಇಲ್ಲಿ ನೀವು "ರಿಜಿಸ್ಟರ್" ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಸೂಚಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
  • ನಂತರ ಪಾಸ್‌ವರ್ಡ್ ಹೊಂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಬೇಕು. ಇದೀಗ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
  • ಈಗ OTP ಅನ್ನು ನಮೂದಿಸಿ.
  • ನೋಂದಣಿ ಮುಗಿದ ನಂತರ, ಮತ್ತೊಮ್ಮೆ UDGAM ಪೋರ್ಟಲ್‌ಗೆ ಹೋಗಿ ಮತ್ತು ಈಗಲೇ ಲಾಗಿನ್ ಮಾಡಿ.
  • ಖಾತೆದಾರರ ಹೆಸರನ್ನು ನಮೂದಿಸಿ ಮತ್ತು ಪಟ್ಟಿಯಲ್ಲಿ ನೀಡಲಾದ ಬ್ಯಾಂಕ್‌ಗಳಲ್ಲಿ ಒಂದನ್ನು ಆಯ್ಕೆಮಾಡಿ.
  • ಈಗ ಖಾತೆದಾರರ ಪ್ಯಾನ್ ಕಾರ್ಡ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಪರವಾನಗಿ ಸಂಖ್ಯೆಯನ್ನು ನಮೂದಿಸಿ.
  • ಇದರ ನಂತರ ಹುಡುಕಾಟ ಬಟನ್ ಮೇಲೆ ಕ್ಲಿಕ್ ಮಾಡಿ.
  • ಬ್ಯಾಂಕಿನಲ್ಲಿ ನಿಮ್ಮ ಹೆಸರಿನಲ್ಲಿ ಯಾವುದೇ ಕ್ಲೈಮ್ ಮಾಡದ ಠೇವಣಿ ಇದ್ದರೆ, ಅದರ ಮಾಹಿತಿಯನ್ನು ಪರದೆಯ ಮೇಲೆ ನಿಮಗೆ ನೀಡಲಾಗುತ್ತದೆ.