ಹೊಸ 100 ರೂ. ಗೆ 100 ಕೋಟಿ ರೂ. ಖರ್ಚುಎಟಿಎಂ ಮೇಲ್ದರ್ಜೆಗೇರಿಸಲು 100 ಕೋಟಿ ರೂಕ್ಯಾಟಿ ನಿರ್ದೇಶಕ ವಿ.ಬಾಲಸುಬ್ರಮಣಿಯನ್ ಮಾಹಿತಿಎಟಿಎಂ ಮೇಲ್ದರ್ಜೆಗೇರಿಸುವ ತಂತ್ರಜ್ಞಾನಕ್ಕೆ ವೆಚ್ಚ  

ಮುಂಬೈ(ಜು.21): 100ರೂ. ಮುಖಬೆಲೆಯ ನೋಟುಗಳು ಎಟಿಎಂಗಳಲ್ಲಿ ತುಂಬಿಸಲು ಸುಮಾರು 100 ಕೋಟಿ ರೂ. ವೆಚ್ಚ ಮಾಡಬೇಕು ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕಾನ್ಫಿಡೆರೇಷನ್ ಆಫ್ ಎಟಿಎಂ ಇಂಡಸ್ಟ್ರಿ (ಕ್ಯಾಟಿ) ನಿರ್ದೇಶಕ ವಿ.ಬಾಲಸುಬ್ರಮಣಿಯನ್‌, ಪ್ರಸ್ತುತ ಇರುವ ಎಟಿಎಂ ಯಂತ್ರಗಳಿಗೆ 100 ರೂ.ಮುಖಬೆಲೆಯ ನೋಟುಗಳನ್ನು ತುಂಬಲು ಸುಮಾರು 100 ಕೋಟಿ ರೂ.ಹಣವನ್ನು ಹೂಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಒಟ್ಟು ಸುಮಾರು 2.4 ಲಕ್ಷ ಎಟಿಎಂಗಳಿದ್ದು, ಇವುಗಳಲ್ಲಿ 100 ರೂ.ಗಳ ಹೊಸ ನೋಟು ತುಂಬಿಸುವುದಕ್ಕೂ ಮೊದಲು ಅವುಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಅದಕ್ಕಾಗಿ 100 ಕೋಟಿ ರೂ. ಹೂಡಿಕೆ ಮಾಡಬೇಕಾಗುತ್ತದೆ ಎಂದು ವಿ.ಬಾಲಸುಬ್ರಮಣಿಯನ್‌ ಮಾಹಿತಿ ನೀಡಿದರು. 

ಹೊಸದಾಗಿ ಜಾರಿ ಮಾಡಲಾಗಿರುವ 200 ರೂ. ನೋಟುಗಳನ್ನು ವಿತರಿಸುವ ದೃಷ್ಟಿಯಿಂದ ಈಗಷ್ಟೇ ಎಲ್ಲಾ ಎಟಿಎಂಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಮುಕ್ತಾಯವಾಗಿದೆ. ಈಗ ಮತ್ತೆ 100 ರೂಯ ಮುಖಬೆಲೆಯ ನೋಟುಗಳು ಎಟಿಎಂನಲ್ಲಿ ಲಭ್ಯವಾಗುವಂತೆ ಮಾಡಬೇಕಾದರೆ ಇದಕ್ಕಾಗಿ ಮತ್ತೆ ಹೆಚ್ಚುವರಿ ಹಣ ವ್ಯಯವಾಗುತ್ತದೆ.

100 ರೂ. ಮುಖಬೆಲೆಯ ಹಳೆಯ ಮತ್ತು ಹೊಸ ಎರಡೂ ಬಗೆಯ ನೋಟುಗಳು ಎಟಿಎಂಗಳಲ್ಲಿ ಲಭ್ಯವಾಗಲಿವೆ. ಎಟಿಎಂಗಳಲ್ಲಿ ಹಳೆಯ ನೋಟುಗಳ ಮುಂದುವರಿಕೆ, ಹೊಸ ನೋಟುಗಳ ಬಿಡುಗಡೆ ಹಾಗೂ ಅವುಗಳ ಲಭ್ಯತೆಯು ಎಟಿಎಂ ತಂತ್ರಜ್ಞಾನದ ಮರುಜೋಡಣೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. 

100 ರೂ. ಹಳೆಯ ನೋಟುಗಳ ವಿತ್‌ ಡ್ರಾದಿಂದ ಉಂಟಾಗುವ ಅಂತರವನ್ನು ಹೊಸ ನೋಟುಗಳು ತುಂಬಲು ವಿಫಲವಾದರೆ, ಈ ಅಸಮತೋಲನ ನಿವಾರಣೆಯಾಗುವವರೆಗೂ ಎಟಿಎಂಗಳಲ್ಲಿ ನೋಟುಗಳ ಹಂಚಿಕೆಗೆ ಹೊಡೆತ ಬೀಳುತ್ತದೆ. 200 ಮುಖಬೆಲೆಯ ನೋಟುಗಳನ್ನು ಎಟಿಎಂಗಳಿಗೆ ಅಳವಡಿಸುವ ಕಾರ್ಯವೇ ಇನ್ನೂ ಮುಗಿದಿಲ್ಲ. 

ವ್ಯವಸ್ಥಿತ ಯೋಜನೆ ಮಾಡಿಕೊಳ್ಳದೆ ಇದ್ದರೆ 100ರ ಮುಖಬೆಲೆಯ ನೋಟುಗಳನ್ನು ಅಳವಡಿಸುವ ಕೆಲಸವೂ ವಿಳಂಬವಾಗುತ್ತದೆ ಎಂದು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ ಎಂದು ಬಾಲಸುಬ್ರಮಣಿಯನ್‌ ತಿಳಿಸಿದ್ದಾರೆ.