ಬಡ್ಡಿ ದರ ಏರಿಕೆಗೆ ರಿಸರ್ವ್ ಬ್ಯಾಂಕ್ ತಾತ್ಕಾಲಿಕ ತಡೆ: ಸಾಲಗಾರರು ಖುಷ್
ಹಣದುಬ್ಬರ ಹತ್ತಿಕ್ಕುವ ಗುರಿಯೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಂದು ಸುತ್ತಿನಲ್ಲಿ ಶೇ.0.25ರಷ್ಟು ಬಡ್ಡಿ ದರ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಮುಂಬೈ: ಹಣದುಬ್ಬರ ಹತ್ತಿಕ್ಕುವ ಗುರಿಯೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಂದು ಸುತ್ತಿನಲ್ಲಿ ಶೇ.0.25ರಷ್ಟು ಬಡ್ಡಿ ದರ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಅನಿರೀಕ್ಷಿತ ನಿರ್ಧಾರವನ್ನು ಗುರುವಾರ ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ ತೆಗೆದುಕೊಂಡಿದೆ. ಇದರಿಂದಾಗಿ ಗೃಹ, ವಾಹನ, ವೈಯಕ್ತಿಕ ಸಾಲ (personal loan) ಪಡೆದವರು ಒಂದಷ್ಟುನಿರಾಳರಾಗುವಂತಾಗಿದೆ. ಕಳೆದ 11 ತಿಂಗಳ ಅವಧಿಯಲ್ಲಿ 6 ಹಂತದಲ್ಲಿ ಶೇ.2.50ರಷ್ಟುಬಡ್ಡಿ ದರವನ್ನು ಆರ್‌ಬಿಐ ಹೆಚ್ಚಳ ಮಾಡಿರುವುದರಿಂದ ಈಗಾಗಲೇ ಸಾಲಗಾರರು ಹೆಚ್ಚಿನ ಇಎಂಐ ಪಾವತಿಸುವಂತಾಗಿದೆ. ಈಗ ಮತ್ತೊಂದು ಸುತ್ತಿನಲ್ಲಿ ಬಡ್ಡಿ ದರದಲ್ಲಿ (Interest Rate) ಏರಿಕೆ ಮಾಡಿದರೆ ಇನ್ನಷ್ಟು ಹೊರೆ ಹೊರಬೇಕಾದ ಅನಿವಾರ್ಯ ಸ್ಥಿತಿಗೆ ಸಾಲಗಾರರು ತಲುಪಬೇಕಿತ್ತು.
ಈ ನಡುವೆ, ಬಡ್ಡಿ ದರ ಹೆಚ್ಚಳ ನಿರ್ಧಾರ ಕೈಗೊಳ್ಳದೆ ಇರುವುದು ಈ ಸಭೆಗೆ ಮಾತ್ರ. ಅಗತ್ಯ ಬಿದ್ದರೆ ಮತ್ತೆ ಬಡ್ಡಿ ದರ ಹೆಚ್ಚಳ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಭೆಯ ಬಳಿಕ ತಿಳಿಸಿದ್ದಾರೆ. 17 ತಿಂಗಳಾದರೂ ಹಣದುಬ್ಬರ (inflation) ಶೇ.6ಕ್ಕಿಂತ ಮೇಲೆಯೇ ಇದೆ. ಆದರೂ ಆರ್‌ಬಿಐ ಬಡ್ಡಿ ದರದಲ್ಲಿ ಬದಲಾವಣೆ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ. ಇದೇ ವೇಳೆ, ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ದರವನ್ನು ಆರ್‌ಬಿಐ ಶೇ.6.4ರಿಂದ ಶೇ.6.5ಕ್ಕೆ ಪರಿಷ್ಕರಿಸಿದೆ. 2023-24ನೇ ಸಾಲಿನಲ್ಲಿ ಹಣದುಬ್ಬರ ಶೇ.5.2ರಷ್ಟಿರಲಿದ್ದು, ಹಣದುಬ್ಬರದ ವಿರುದ್ಧ ಸಮರ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ರೆಪೋ ದರ ಏರಿಕೆ ಮಾಡದ RBI;ವರ್ಷದ ಬಳಿಕ ಸಾಲಗಾರರಿಗೆ ತುಸು ನೆಮ್ಮದಿ
ಸಿಬಿಲ್ ಮಾಹಿತಿ ಪಡೆದರೆ ಎಸ್‌ಎಂಎಸ್:
ಸಿಬಿಲ್ ಸ್ಕೋರ್‌ನಂತಹ ಕ್ರೆಡಿಟ್ ಇನ್‌ಫರ್ಮೇಶನ್ ವರದಿಗಳನ್ನು ಯಾರಾದರೂ ನೋಡಿದರೆ ಇನ್ನು ಮುಂದೆ ಗ್ರಾಹಕರಿಗೆ ಎಸ್‌ಎಂಎಸ್/ಇ-ಮೇಲ್ ಮೂಲಕ ಸಂದೇಶ ಬರಲಿದೆ ಎಂದು ಆರ್‌ಬಿಐ ತಿಳಿಸಿದೆ.
ಬ್ಯಾಂಕ್‌ಗಳ ಡಿಜಿಟಲ್ ಸಾಲ ಇನ್ನು ಯುಪಿಐನಲ್ಲೂ ಲಭ್ಯ
ಮುಂಬೈ: ಬ್ಯಾಂಕುಗಳು ಒದಗಿಸುವ ಡಿಜಿಟಲ್ ಸಾಲ ಸೌಲಭ್ಯವನ್ನು ಬಳಸಲು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಗ್ರಾಹಕರಿಗೆ ಭಾರತೀಯ ರಿಸವ್‌ರ್ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಇದರಿಂದಾಗಿ ‘ಈಗ ಖರೀದಿಸಿ, ಬಳಿಕ ಪಾವತಿಸಿ’ ಸೌಲಭ್ಯವನ್ನು ಯುಪಿಐ ಮೂಲಕವೇ ನೇರವಾಗಿ ಬಳಸಲು ಗ್ರಾಹಕರಿಗೆ ಅನುಕೂಲವಾಗುತ್ತದೆ. ಸದ್ಯ ಬ್ಯಾಂಕ್ ಖಾತೆಗಳು ಹಾಗೂ ವ್ಯಾಲೆಟ್‌ಗಳ ನಡುವೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ಇನ್ನು ಮುಂದೆ ಬ್ಯಾಂಕುಗಳು ನೀಡುವ ಡಿಜಿಟಲ್ ಸಾಲವನ್ನು ಯುಪಿಐ ಮೂಲಕವೇ ಪಡೆಯಬಹುದಾಗಿರುತ್ತದೆ ಎಂದು ಆರ್‌ಬಿಐ ತಿಳಿಸಿದೆ.
ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ಪತ್ತೆಗೆ ವೆಬ್‌ಸೈಟ್
ಮುಂಬೈ: ಸರ್ಕಾರಿ ಸ್ವಾಮ್ಯದ ವಿವಿಧ ಬ್ಯಾಂಕುಗಳಲ್ಲಿ ಠೇವಣಿದಾರರು ಅಥವಾ ಅವರ ಫಲಾನುಭವಿಗಳು ಪಡೆಯದೆ ಹಾಗೆ ಬಿಟ್ಟಿರುವ ಠೇವಣಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸಲು ಕೇಂದ್ರೀಕೃತ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗುವುದು ಎಂದು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. 10 ವರ್ಷ ಅಥವಾ ಅದಕ್ಕೂ ಹೆಚ್ಚಿನ ಸಮಯದಿಂದ ನಿಷ್ಕಿ್ರಯವಾಗಿರುವ ಬ್ಯಾಂಕ್ ಖಾತೆಗಳಲ್ಲಿದ್ದ 35 ಸಾವಿರ ಕೋಟಿ ರು. ಹಣವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಇತ್ತೀಚೆಗೆ ಆರ್‌ಬಿಐಗೆ ವರ್ಗಾಯಿಸಿದ್ದವು. ಅದರ ಬೆನ್ನಲ್ಲೇ ಆರ್‌ಬಿಐನಿಂದ ಈ ನಿರ್ಧಾರ ಹೊರಬಿದ್ದಿದೆ. ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ ಬಳಿಕ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಹಲವಾರು ಬ್ಯಾಂಕುಗಳಲ್ಲಿನ ವಾರಸುದಾರರಿಲ್ಲದ ಠೇವಣಿಯ ಮಾಹಿತಿಯು ಉದ್ದೇಶಿತ ಒಂದೇ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಹುಡುಕಿದಾಗ ಸಿಗುವ ಫಲಿತಾಂಶವನ್ನು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಿಕೊಂಡು ಮತ್ತಷ್ಟು ಬಲಪಡಿಸಲಾಗುವುದು ಎಂದರು.