ನವದೆಹಲಿ(ನ.7): ರಿಲಯನ್ಸ್ ಕಮ್ಯುನಿಕೇಶನ್ಸ್ ಒಡೆತನದ ರಿಲಯನ್ಸ್ ಟೆಲಿಕಾಂ ತನ್ನ ಬಳಿ ಕೇವಲ 19.34 ಕೋಟಿ ರೂ. ಇದೆ ಎಂದು ಘೋಷಿಸಿದೆ.

ಈ ಕುರಿತು ದೆಹಲಿ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ರಿಲಯನ್ಸ್ ಟೆಲಿಕಾಂ, ದೇಶಾದ್ಯಂತ ಇರುವ ತನ್ನ 144 ಬ್ಯಾಂಕ್ ಅಕೌಂಟ್ ಗಳಲ್ಲಿ ಕೇವಲ 19.34 ಕೋಟಿ ರೂ. ಇದೆ ಎಂದು ಸ್ಪಷ್ಟಪಡಿಸಿದೆ.

ಕಳೆದ ವರ್ಷ 46 ಸಾವಿರ ಕೋಟಿಗೂ ಅಧಿಕ ನಷ್ಟ ಎದುರಿಸಿದ್ದ ರಿಲಿಯನ್ಸ್ ಟೆಲಿಕಾಂ, ತನ್ನ ವೈರಲೆಸ್ ಆಪರೇಶನ್ ನ್ನು ಮುಚ್ಚಿತ್ತು. ಅಲ್ಲದೇ ಬೋಸ್ಟನ್ ಮೂಲದ  ಅಮೆರಿಕನ್ ಟವರ್ ಕಾರ್ಪ್ ರಿಲಯನ್ಸ್ ಕಂಪನಿಯಿಂದ ತನಗೆ 230 ಕೋಟಿ ರೂ. ಬರಬೇಕಿದೆ ಎಂದು ಆಗ್ರಹಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಈ ಕುರಿತು ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ರಿಲಯನ್ಸ್ ಟೆಲಿಕಾಂ ಬಳಿ ಇರುವ ಒಟ್ಟು ಆಸ್ತಿ ಪ್ರಮಾಣವನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ಸಂಸ್ಥೆ, ದೇಶದ 119 ಬ್ಯಾಂಕ್ ಗಳಲ್ಲಿ 17.86 ಕೋಟಿ ರೂ. ಮತ್ತು 25 ಬ್ಯಾಂಕ್ ಗಳಲ್ಲಿ 1.48 ಕೋಟಿ ರೂ. ಇದೆ  ಎಂದು ತಿಳಿಸಿದೆ.