ಜಿಯೋ, ಏರ್‌ಟೆಲ್ ಮತ್ತು Vi ಟೆಲಿಕಾಂ ಕಂಪನಿಗಳು ಮತ್ತೊಮ್ಮೆ ದರ ಹೆಚ್ಚಳ ಮಾಡಲು ಸಜ್ಜಾಗಿವೆ. ಜೂನ್ ತ್ರೈಮಾಸಿಕದಲ್ಲಿ ಜಿಯೋದ ARPU 210 ರೂ.ಗೆ ಮತ್ತು ಏರ್‌ಟೆಲ್‌ನ ARPU 249 ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ.
ನವದೆಹಲಿ: ಭಾರತದ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಮತ್ತೊಮ್ಮೆ ದರ ಹೆಚ್ಚಳ ಮಾಡಲು ಮುಂದಾಗಿವೆ ಎಂದು ವರದಿಯಾಗಿದೆ. ಜೂನ್ ತ್ರೈಮಾಸಿಕದಲ್ಲಿ ಬಳಕೆದಾರರ ಸರಾಸರಿ ಆದಾಯ (Average user revenue- ARPU Growth) ಬೆಳವಣಿಗೆಯಲ್ಲಿ ಭಾರ್ತಿ ಏರ್‌ಟೆಲ್‌ನ್ನು ರಿಲಯನ್ಸ್ ಜಿಯೋ ಹಿಂದಿಕ್ಕಿದೆ. ಜಿಯೋದ ದ ARPU 210 ರೂ.ಗೆ, ಏರ್‌ಟೆಲ್‌ನ ARPU 249 ರೂ.ಗೆ ಹೆಚ್ಚಳವಾಗುವ ನಿರೀಕ್ಷೆಗಳಿವೆ. ಒಟ್ಟಾರೆ ಶೇ.12ರಷ್ಟು ಬೆಲೆಗಳು ಹೆಚ್ಚಾಗಲಿವೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಬೆಲೆ ಹೆಚ್ಚಳವಾದ ಬಳಿಕ ಪ್ರಿಪೇಯ್ಡ್ ಪ್ಲಾನ್‌ಗಳು ದುಬಾರಿಯಾಗಲಿವೆ.
ಮೊದಲ ತ್ರೈಮಾಸಿಕ ಅಂತ್ಯದಲ್ಲಿ ಆದಾಯ ಗಳಿಕೆಯಲ್ಲಿ ರಿಲಯನ್ಸ್ ಜಿಯೋ ಕಂಪನಿಯು ಭಾರ್ತಿ ಏರ್‌ಟೆಲ್ ಅನ್ನು ಹಿಂದಿಕ್ಕಿದೆ. ಒಟ್ಟು ಆದಾಯ ಮತ್ತು ಪ್ರತಿ ಬಳಕೆದಾರ ಆದಾಯದ ಬೆಳವಣಿಗೆಯಲ್ಲಿಯೂ ರಿಲಯನ್ಸ್ ಜಿಯೋ ಮುಂದಿದೆ. ಹೈ ಪೇಮೆಂಟ್ ಹೊಂದಿರುವ ವೈರ್‌ಲೆಸ್ ಆಕ್ಸೆಸ್ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದರಿಂದ ರಿಲಯನ್ಸ್ ಜಿಯೋ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
ಎಷ್ಟು ಹೆಚ್ಚಾಗಲಿದೆ?
ಜೆಎಂ ಫೈನಾನ್ಸಿಯಲ್ ಅಂದಾಜಿನ ಪ್ರಕಾರ, ಜಿಯೋದ ಸರಾಸರಿ ಪ್ರತಿ ಬಳಕೆದಾರ ಆದಾಯ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ. 1.8 ರಷ್ಟು ಬೆಳೆದು ರೂ. 210 ಕ್ಕೆ ತಲುಪುವ ನಿರೀಕ್ಷೆಯಿದೆ. ಇನ್ನು ಭಾರ್ತಿ ಏರ್‌ಟೆಲ್ ಸರಾಸರಿ ಪ್ರತಿ ಬಳಕೆದಾರ ಆದಾಯವನ್ನು 249 ರೂ.ಗೆ ಹೆಚ್ಚಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಬ್ರೋಕರೇಜ್ ಸಂಸ್ಥೆ ವರದಿ ಮಾಡಿದೆ. ಆದರೆ ಏರ್‌ಟೆಲ್ ಬೆಳವಣಿಗೆ ದರ ಶೇ. 1.6ರಷ್ಟು ಕಡಿಮೆಯಾಗಿದೆ.
ತನ್ನದೇ ವಿಭಿನ್ನ ಲೆಕ್ಕಾಚಾರದಲ್ಲಿ ವೊಡಫೋನ್ ಐಡಿಯಾ!
ಮೂರನೇ ಸ್ಥಾನದಲ್ಲಿರುವ ವೊಡಾಫೋನ್ ಐಡಿಯಾ (Vi) ಮೊದಲ ತ್ರೈಮಾಸಿಕದಲ್ಲಿ ಸರಾಸರಿ ಪ್ರತಿ ಬಳಕೆದಾರ ಆದಾಯವನ್ನು ಶೇ.1.6ರಷ್ಟು ಸುಧಾರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ವೊಡಾಫೋನ್ ಐಡಿಯಾ ಶೇ.1.6ರಷ್ಟು ARPU ನಿರೀಕ್ಷೆಯನ್ನು ಹೊಂದಲು 5G ಗೆ ಅಪ್‌ಗ್ರೇಡ್ ಮತ್ತು ಸಬ್‌ಸ್ಕ್ರಿಪ್ಷನ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಮೂಲಕ ಬೆಲೆ ಏರಿಕೆಯ ನಂತರವೂ ವೊಡಾಫೋನ್ ಐಡಿಯಾ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗುತ್ತಿದೆ.
ಎಷ್ಟು ಏರಿಕೆ ಆಗಲಿದೆ?
ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಮುಂದಿನ ವರ್ಷ ಅಂದ್ರೆ 2026ರಲ್ಲಿ ತಮ್ಮ ಬೆಲೆಗಳನ್ನು ಹೆಚ್ಚಳ ಮಾಡಿಕೊಳ್ಳಲಿವೆ ಎಂದು ಈಕ್ವಿಟಿ ಸಂಶೋಧನಾ ಸಂಸ್ಥೆ ಬೋಫಾ ಸೆಕ್ಯುರಿಟೀಸ್ ತನ್ನ ವರದಿಯಲ್ಲಿ ತಿಳಿಸಿದೆ. 2024ರಲ್ಲಿ ಬೆಲೆ ಏರಿಕೆಯಿಂದಾಗಿ ಟೆಲಿಕಾಂ ಮಾರುಕಟ್ಟೆಯಲ್ಲಿ ಹಲವು ಏರಿಳಿತ ಕಂಡು ಬಂದಿತ್ತು. ಈ ವರ್ಷ ಯಾವುದೇ ಬೆಲೆ ಏರಿಕೆ ಮಾಡಲು ಮುಂದಾಗಲ್ಲ. ಆದ್ರೆ ಮುಂದಿನ ವರ್ಷ ಶೇ.12ರಷ್ಟು ಹೆಚ್ಚಳ ಮಾಡಿಕೊಳ್ಳಬಹುದು ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.
ಬೆಲೆ ಏರಿಕೆಯಿಂದ ಕಂಪನಿಗಳ ಲಾಭ ಎಷ್ಟು ಹೆಚ್ಚಳ?
ಹೆಚ್ಚಿನ ಸಂಖ್ಯೆ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ ಲಾಭ 2026 ರ ಮೊದಲ ತ್ರೈಮಾಸಿಕದಲ್ಲಿ ಶೇ.2.7ರಷ್ಟು ಹೆಚ್ಚಳವಾಗಿ 31,200 ಕೋಟಿ ರೂ.ಗಳಿಗೆ ತಲುಪಲಿದೆ ಎಂದು ಜೆಎಂ ಫೈನಾನ್ಷಿಯಲ್ ಅಂದಾಜಿಸಿದೆ. ರಿಲಯನ್ಸ್ ಜಿಯೋದ ನಿವ್ವಳ ಲಾಭ (Standalone Net Profit) 6,640 ಕೋಟಿ ರೂ.ಗಳಿಗೆ ಸ್ಥಿರವಾಗಿರಲಿದೆ.
ವೈರ್‌ಲೆಸ್ ಸೇವೆಗಳಿಂದ ಭಾರ್ತಿ ಏರ್‌ಟೆಲ್‌ನ ಆದಾಯವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ. 2.6 ರಷ್ಟು ಹೆಚ್ಚಾಗಿ 27,305 ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆಯಿದೆ. ಕಂಪನಿಯ ನಿವ್ವಳ ಲಾಭ (Consolidated Net Profit) ಶೇ.47ರಷ್ಟು ಏರಿಕೆಯಾಗಿ 7,690 ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆಗಳಿವೆ. ಇನ್ನು ಜೆಎಂ ಫೆನಾನ್ಷಿಯಲ್ ವರದಿ ಪ್ರಕಾರ, ವೊಡಾಫೋನ್ ಐಡಿಯಾ ಆದಾಯ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.1.1ರಷ್ಟು ಏರಿಕೆಯಾಗಿ 11,100 ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆಯಿದೆ. ಸದ್ಯ ಅನುಭವಿಸುತ್ತಿರುವ ನಿವ್ವಳ ನಷ್ಟದ ಪ್ರಮಾಣ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.