76 ಸಾವಿರ ಕೋಟಿಗೆ ಒಡತಿ, ಷೇರು ಮಾರುಕಟ್ಟೆಯ ಲೇಡಿ ವಾರನ್ ಬಫೆಟ್ ರೇಖಾ ಜುಂಜುನ್‌ವಾಲಾ!
ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಇಂದು ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರು. ಪ್ರತಿ ತಿಂಗಳು ಇವರ ಆದಾಯವೇ ಕೋಟಿಗಟ್ಟಲೆ ಇದೆ. ಟೈಟಾನ್ ನಂತಹ ದೊಡ್ಡ ಕಂಪನಿಗಳ ಷೇರುಗಳು ಅವರ ಪೋರ್ಟ್ಫೋಲಿಯೊದಲ್ಲಿವೆ. ಇದರಿಂದ ಭಾರೀ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಮುಂಬೈ (ಅ.15): ಷೇರು ಮಾರುಕಟ್ಟೆಯ ದಿಗ್ಗಜ ಹೂಡಿಕೆದಾರರಲ್ಲಿ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಅವರ ಹೆಸರೂ ಸೇರಿದೆ. ಹೂಡಿಕೆಯ ಜಗತ್ತಿನಲ್ಲಿ ಅವರನ್ನು 'ಭಾರತದ ಲೇಡಿ ವಾರೆನ್ ಬಫೆಟ್' ಎಂದೂ ಕರೆಯುತ್ತಾರೆ. ಪತಿಯ ಮರಣದ ನಂತರ ಅವರ ಪೋರ್ಟ್ಫೋಲಿಯೊವನ್ನು ನಿರ್ವಹಿಸುತ್ತಿರುವ ರೇಖಾ ಜುಂಜುನ್ವಾಲಾ ಕೆಲವೇ ವರ್ಷಗಳಲ್ಲಿ ತಮ್ಮ ಹೂಡಿಕೆಯಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರೇಖಾ ಜುಂಜುನ್ವಾಲಾ ಅವರ ಪೋರ್ಟ್ಫೋಲಿಯೊದಲ್ಲಿ ಸುಮಾರು 27 ಕಂಪನಿಗಳ ಷೇರುಗಳಿವೆ, ಇವುಗಳ ಒಟ್ಟು ಮೌಲ್ಯ ಸುಮಾರು 76,000 ಕೋಟಿ ರೂಪಾಯಿಗಳಾಗಿವೆ.
ಯಾರು ಈ ರೇಖಾ ಜುಂಜುನ್ವಾಲಾ?: 1963ರ ಸೆಪ್ಟೆಂಬರ್ 12ರಂದು ಜನಿಸಿದ ರೇಖಾ ಜುಂಜುನ್ವಾಲಾ ಮುಂಬೈ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವೀಧರೆ. 1987 ರಲ್ಲಿ ಅವರು ಪ್ರಸಿದ್ಧ ಷೇರು ವ್ಯಾಪಾರಿ ಮತ್ತು 'ಬಿಗ್ ಬುಲ್' ಎಂದೇ ಪ್ರಸಿದ್ಧರಾಗಿದ್ದ ರಾಕೇಶ್ ಜುಂಜುನ್ವಾಲಾ ಅವರನ್ನು ವಿವಾಹವಾದರು. ರೇಖಾ ಮತ್ತು ರಾಕೇಶ್ ದಂಪತಿಗೆ ಮಗಳು ನಿಷ್ಠಾ ಮತ್ತು ಇಬ್ಬರು ಗಂಡು ಮಕ್ಕಳಾದ ಆರ್ಯಮನ್ ಮತ್ತು ಆರ್ಯವೀರ್ ಇದ್ದಾರೆ. ರೇಖಾ ಜುಂಜುನ್ವಾಲಾ ಅವರಿಗೆ ಪತಿಯ ಮರಣದ ನಂತರ ಪೋರ್ಟ್ಫೋಲಿಯೊ ಆನುವಂಶಿಕವಾಗಿ ಬಂದಿತು.
ಪ್ರತಿ ತಿಂಗಳು 600 ಕೋಟಿಗೂ ಅಧಿಕ ಆದಾಯ: ಪತಿಯ ನಿಧನದ ನಂತರ ರೇಖಾ ಜುಂಜುನ್ವಾಲಾ ಅವರ ಕಂಪನಿ RARE ಎಂಟರ್‌ಪ್ರೈಸಸ್‌ನ ನೇತೃತ್ವ ವಹಿಸಿದ್ದಾರೆ. ಈ ಕಂಪನಿಯ ಹೆಸರನ್ನು ರಾಕೇಶ್ ಮತ್ತು ರೇಖಾ ಅವರ ಹೆಸರಿನ ಮೊದಲ ಅಕ್ಷರಗಳಿಂದ ರಚಿಸಲಾಗಿದೆ. ಒಂದು ವರದಿಯ ಪ್ರಕಾರ, ರೇಖಾ ಜುಂಜುನ್ವಾಲಾ ತಮ್ಮ ಹೂಡಿಕೆಯಿಂದ ಪ್ರತಿ ತಿಂಗಳು ಸುಮಾರು 600 ಕೋಟಿಗೂ ಹೆಚ್ಚು ಗಳಿಸುತ್ತಾರೆ.
ಟಾಟಾ ಗ್ರೂಪ್‌ನ ಕಂಪನಿ ಟೈಟಾನ್‌ನಲ್ಲಿ ರೇಖಾ ಅವರ ದೊಡ್ಡ ಪಾಲು: ಟಾಟಾ ಗ್ರೂಪ್‌ನ ಪ್ರಸಿದ್ಧ ಕಂಪನಿ ಟೈಟಾನ್‌ನಲ್ಲಿ ರೇಖಾ ಜುಂಜುನ್ವಾಲಾ ಅವರ ಪಾಲು ಶೇಕಡ 5 ಕ್ಕಿಂತ ಹೆಚ್ಚಿದೆ. ಒಂದು ಸಮಯದಲ್ಲಿ ಅವರು ಟೈಟಾನ್ ಕಂಪನಿಯ ಷೇರುಗಳಿಂದ ಕೇವಲ 15 ದಿನಗಳಲ್ಲಿ 1000 ಕೋಟಿ ರೂಪಾಯಿ ಗಳಿಸಿದ್ದರು.
ರೇಖಾ ಜುಂಜುನ್ವಾಲಾ ಅವರ ಪೋರ್ಟ್ಫೋಲಿಯೊದಲ್ಲಿ ಇರುವ ಷೇರುಗಳು: ವರದಿಯ ಪ್ರಕಾರ, ರೇಖಾ ಜುಂಜುನ್ವಾಲಾ ಅವರ ಪೋರ್ಟ್ಫೋಲಿಯೊದಲ್ಲಿ ಕಾನ್ಕಾರ್ಡ್ ಬಯೋಟೆಕ್, ಬಜಾರ್ ಸ್ಟೈಲ್ ರಿಟೇಲ್, NCC ಲಿಮಿಟೆಡ್, ಸಿಂಗರ್ ಇಂಡಿಯಾ ಲಿಮಿಟೆಡ್, ಟಾಟಾ ಕಮ್ಯುನಿಕೇಷನ್ಸ್, ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್, ಕೆನರಾ ಬ್ಯಾಂಕ್, ಎಸ್ಕಾರ್ಟ್ಸ್, ಜುಬಿಲೆಂಟ್ ಇಂಗ್ರೆವಿಯಾ, ಫೆಡರಲ್ ಬ್ಯಾಂಕ್, ಕ್ರಿಸಿಲ್, ರಾಘವ್ ಪ್ರೊಡಕ್ಟಿವಿಟಿ, ಆಪ್ಟೆಕ್, ಅಗ್ರೋ ಟೆಕ್ ಫುಡ್ಸ್, ವ್ಯಾಲರ್ ಎಸ್ಟೇಟ್, ಫೋರ್ಟಿಸ್ ಹೆಲ್ತ್‌ಕೇರ್, ಜಿಯೋಜಿತ್ ಫೈನಾನ್ಷಿಯಲ್, ಇಂಡಿಯನ್ ಹೋಟೆಲ್ಸ್ ಕಂಪನಿ, ಜುಬಿಲೆಂಟ್ ಫಾರ್ಮೋವಾ, ಕರೂರ್ ವೈಶ್ಯ ಬ್ಯಾಂಕ್, ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಟೈಟಾನ್, ವಾ ಟೆಕ್ ವಾಬಾಗ್, ವಾಕ್‌ಹಾರ್ಡ್ಟ್, ನಜಾರಾ ಟೆಕ್ನಾಲಜೀಸ್ ಮತ್ತು ಮೆಟ್ರೋ ಬ್ರ್ಯಾಂಡ್ಸ್‌ನ ಷೇರುಗಳು ಸೇರಿವೆ.
72,814 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಈಕೆ, ಭಾರತದ 2ನೇ ಶ್ರೀಮಂತ ಮಹಿಳೆ!
8.9 ಶತಕೋಟಿ ಡಾಲರ್ ಆಸ್ತಿಯ ಒಡತಿ: ಫೋರ್ಬ್ಸ್ ಪ್ರಕಾರ, ರೇಖಾ ಜುಂಜುನ್ವಾಲಾ 8.9 ಶತಕೋಟಿ ಡಾಲರ್ (76,000 ಕೋಟಿ ರೂಪಾಯಿ) ಆಸ್ತಿಯ ಮಾಲೀಕರು. 2024 ರಲ್ಲಿ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಅವರ ಹೆಸರು 28 ನೇ ಸ್ಥಾನದಲ್ಲಿದೆ. ಅವರು ಭಾರತದ ಎರಡನೇ ಶ್ರೀಮಂತ ಮಹಿಳೆಯೂ ಹೌದು. ಅವರಿಗಿಂತ ಮೇಲೆ ಸಾವಿತ್ರಿ ಜಿಂದಾಲ್ ಮಾತ್ರ ಇದ್ದಾರೆ, ಅವರ ಒಟ್ಟು ಆಸ್ತಿ 3.65 ಲಕ್ಷ ಕೋಟಿ ರೂಪಾಯಿಗಳು.
40 ರೂಪಾಯಿ ಸ್ಟಾಕ್‌ನಿಂದ ಬದಲಾಗಿತ್ತು Rakesh Jhunjhunwala ಇಡೀ ಬದುಕು!