ಷೇರು ಮಾರುಕಟ್ಟೆಯ ಹಾವೇಣಿ ಆಟ ಕೆಲವರಿಗೆ ತುಂಬಾ ಚೆನ್ನಾಗಿ ಅರ್ಥವಾಗಿರುತ್ತದೆ. ಇದೇ ಕಾರಣಕ್ಕೆ ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿದ್ದರೂ ಅವರು ಲಾಭ ಗಳಿಸಬಲ್ಲರು. ಇದಕ್ಕೆ ರೇಖಾ ಜುಂಜುನ್ ವಾಲಾ ಅವರ ಸಂಪತ್ತಿನಲ್ಲಿ ಬರೀ ಒಂದು ತಿಂಗಳಲ್ಲಿ ಕೇವಲ ಒಂದು ಕಂಪನಿ ಷೇರಿನಿಂದ 692 ಕೋಟಿ ರೂ. ಹೆಚ್ಚಳವಾಗಿರೋದೆ ಸಾಕ್ಷಿ. ಹಾಗಾದ್ರೆ ಆ ಷೇರು ಯಾವುದು? 

ಮುಂಬೈ (ಏ.10): ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸೋದು ಅಂದ್ಕೊಂಡಷ್ಟು ಸುಲಭದ ಕೆಲಸವೇನಲ್ಲ. ಅದೆಷ್ಟೋ ಮಂದಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದೂ ಇದೆ. ಆದರೆ, ಕೆಲವರಿಗೆ ಮಾತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭದ ಮೇಲೆ ಲಾಭ ಮಾಡುವ ಕಲೆ ಚೆನ್ನಾಗಿ ಸಿದ್ಧಿಸಿರುತ್ತದೆ. ಯಾವ ಷೇರಿನಲ್ಲಿ ಯಾವಾಗ ಹೂಡಿಕೆ ಮಾಡಬೇಕು, ಯಾವಾಗ ಮಾರಾಟ ಮಾಡಬೇಕು ಎಂಬೆಲ್ಲ ಲೆಕ್ಕಾಚಾರದಲ್ಲಿ ಇವರು ಪಕ್ಕಾ ಆಗಿರುತ್ತಾರೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಜನಪ್ರಿಯ ಹೂಡಿಕೆದಾರರಲ್ಲಿ ರಾಕೇಶ್ ಜುಂಜುನ್ ವಾಲಾ ಹೆಸರು ಅಗ್ರಸ್ಥಾನದಲ್ಲಿದೆ. ಆದರೆ, ರಾಕೇಶ್ ಜುಂಜುನ್ ವಾಲಾ ಕಳೆದ ವರ್ಷ ಆಗಸ್ಟ್ ನಲ್ಲಿ ನಿಧನರಾಗಿದ್ದರು. ಹೀಗಾಗಿ ಇವರ ಷೇರುಗಳು ಪತ್ನಿ ರೇಖಾ ಜುಂಜುನ್ ವಾಲಾ ಅವರಿಗೆ ವರ್ಗಾವಣೆಯಾಗಿವೆ. ರೇಖಾ ಜುಂಜುನ್ ವಾಲಾ ಕೂಡ ಇತ್ತೀಚಿನ ದಿನಗಳಲ್ಲಿ ಕೆಲವು ಷೇರುಗಳ ಮೂಲಕ ತಮ್ಮ ಆದಾಯದಲ್ಲಿ ಭಾರೀ ಹೆಚ್ಚಳ ಕಂಡಿದ್ದಾರೆ. ಇವರ ಪೋರ್ಟ್ ಫೋಲಿಯೋದಲ್ಲಿನ ಎಲ್ಐಸಿ ಬೆಂಬಲಿತ ಟೈಟನ್ ಕಂಪನಿ ಷೇರಿನ ಬೆಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಪ್ರತಿ ಷೇರಿನ ಬೆಲೆಯಲ್ಲಿ 150.90ರೂ. ಅಥವಾ ಶೇ. 6.30 ಏರಿಕೆಯಾಗಿದೆ. ಇದರಿಂದ ರೇಖಾ ಜುಂಜುನ್ ವಾಲಾ ಅವರ ನಿವ್ವಳ ಆದಾಯದಲ್ಲಿ 692 ಕೋಟಿ ರೂ. ಹೆಚ್ಚಳವಾಗಿದೆ. 

ರೇಖಾ ಜುಂಜುನ್ ವಾಲಾ ನಿವ್ವಳ ಸಂಪತ್ತು ಹೆಚ್ಚಳ
ಟೈಟನ್ ಕಂಪನಿಯ 2022 ಅಕ್ಟೋಬರ್ ನಿಂದ ಡಿಸೆಂಬರ್ ತನಕದ ಷೇರುದಾರರ ಮಾಹಿತಿ ಅನ್ವಯ ರೇಖಾ ಜುಂಜುನ್ ವಾಲಾ ಕಂಪನಿಯ 4,58,95,970 ಷೇರುಗಳನ್ನು ಹೊಂದಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಟೈಟನ್ ಷೇರಿನ ಬೆಲೆ ಹೆಚ್ಚಳದಿಂದ ರೇಖಾ ಜುಂಜುನ್ ವಾಲಾ ಅವರ ನಿವ್ವಳ ಸಂಪತ್ತಿನಲ್ಲಿ ಸುಮಾರು 6,92,57,01,873ರೂ. ಅಥವಾ 692 ಕೋಟಿ ರೂ. ಹೆಚ್ಚಳವಾಗಿದೆ. 
ಟೈಟನ್ ಕಂಪನಿ ಷೇರುದಾರರ ಮಾಹಿತಿ ಅನ್ವಯ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಟಾಟಾ ಸಮೂಹದ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆ. ಟೈಟನ್ ಕಂಪನಿಯಲ್ಲಿ ಎಲ್ಐಸಿ 2,05,19,699 ಷೇರುಗಳನ್ನು ಹೊಂದಿದೆ. ಇದು ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ ಶೇ.3.26ರಷ್ಟಿದೆ.

80 ಸಾವಿರ ಮೌಲ್ಯದ ಐಷಾರಾಮಿ ಶೂ ಖರೀದಿಸಿದವನಿಗೆ ಸಂಕಷ್ಟ: ಕೋರ್ಟ್ ಮೊರೆ ಹೋದ ಗ್ರಾಹಕ

ಇನ್ನು ಎಸ್ ಬಿಐ ನಿಫ್ಟಿ 50 ಇಟಿಎಫ್ (SBI Nifty 50 ETF) ಕೂಡ ಟಾಟಾ ಸಮೂಹದ ಈ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆರ್ಥಿಕ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಟೈಟಾನ್ ಕಂಪನಿಯಲ್ಲಿ ಎಸ್ ಬಿಐ ನಿಫ್ಟಿ 50 ಇಟಿಎಫ್ 1,40,05,693 ಷೇರುಗಳನ್ನು ಅಥವಾ ಕಂಪನಿಯಲ್ಲಿ ಶೇ.1.58 ಪಾಲು ಹೊಂದಿದೆ.

ಫೋರ್ಬ್ಸ್ ಮಾಹಿತಿ ಪ್ರಕಾರ ರೇಖಾ ಜುಂಜುನ್ ವಾಲಾ ಭಾರತದ ಮೂರನೇ ಅತೀ ಶ್ರೀಮಂತ ಮಹಿಳೆ. ಇವರ ನಿವ್ವಳ ಸಂಪತ್ತು 5.2 ಬಿಲಿಯನ್ ಅಮೆರಿಕನ್ ಡಾಲರ್ ಇದೆ. ರೇಖಾ ಜುಂಜುನ್ ವಾಲಾ ಅವರಿಗೆ 2022ರ ಆಗಸ್ಟ್ ನಲ್ಲಿ ಪತಿ ರಾಕೇಶ್ ಜುಂಜುನ್ ವಾಲಾ ಮರಣದ ಬಳಿಕ 59ನೇ ವಯಸ್ಸಿನ ರೇಖಾ ಜುಂಜುನ್ ವಾಲಾ ಅವರಿಗೆ ಅತ್ಯಧಿಕ ಮೌಲ್ಯದ ಷೇರುಗಳ ಪೋರ್ಟ್ ಫೋಲಿಯೋ ವರ್ಗವಾಗಿ ಬಂದಿದೆ. ಇದರಲ್ಲಿ ಟೈಟಾನ್, ಮೆಟ್ರೋ ಬ್ರ್ಯಾಂಡ್ಸ್, ಸ್ಟಾರ್ ಹೆಲ್ತ್, ಟಾಟಾ ಮೋಟಾರ್ಸ್ ಹಾಗೂ ಕ್ರಿಸಿಲ್ ಮುಂತಾದ 29 ಕಂಪನಿಗಳ ಷೇರುಗಳು ಸೇರಿವೆ. 

EPF ಖಾತೆಯನ್ನುಹೊಸ ಕಂಪನಿಗೆ ವರ್ಗಾಯಿಸಬೇಕಾ? ಹಾಗಾದ್ರೆ ಯಾವ ಅರ್ಜಿ ನಮೂನೆ ಬಳಸ್ಬೇಕು?

1963ರ ಸೆಪ್ಟೆಂಬರ್ 12ರಂದು ಜನಿಸಿದ ರೇಖಾ ಜುಂಜುನ್ ವಾಲಾ ಮುಂಬೈ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. 1987ರಲ್ಲಿ ಇವರು ರಾಕೇಶ್ ಜುಂಜುನ್ ವಾಲಾ ಅವರನ್ನು ವಿವಾಹವಾಗಿದ್ದರು.