Asianet Suvarna News Asianet Suvarna News

'ಬದ್ಧತೆ ಹಾಗೂ ಪ್ರೋತ್ಸಾಹದಾಯಕ ಕ್ರಮ, ದೇಶದಲ್ಲಿ ಶರವೇಗದ ಆರ್ಥಿಕ ಸುಧಾರಣೆ'

* ಆರ್ಥಿಕ ಸುಧಾರಣೆಗಳ ಜಾರಿಗೆ ಹೊಸ ಮಾದರಿ

* ಬದ್ಧತೆ ಹಾಗೂ ಪ್ರೋತ್ಸಾಹದಾಯಕ ಕ್ರಮಗಳೊಂದಿಗೆ ದೇಶದಲ್ಲಿ ಶರವೇಗದ ಆರ್ಥಿಕ ಸುಧಾರಣೆ

* ಹಿಂದೆಲ್ಲ ಆರ್ಥಿಕ ಸುಧಾರಣೆಗಳು ಹಾಗೂ ಯೋಜನೆಗಳು ನಾನಾ ಕಾರಣಕ್ಕೆ ಜಾರಿಯಾಗದೆ ವರ್ಷಗಳ ಕಾಲ ಹಾಗೇ ಉಳಿದಿದ್ದನ್ನು ನಾವು ನೋಡಿದ್ದೇವೆ

 

Reforms by conviction and incentives is the new model writes PM Narendra Modi pod
Author
Bangalore, First Published Jun 23, 2021, 2:02 PM IST

ನರೇಂದ್ರ ಮೋದಿ, ಪ್ರಧಾನ ಮಂತ್ರಿ| ವಿಶೇಷ ಲೇಖನ

 

ಕೊರೋನಾ ವೈರಸ್‌ ಜಗತ್ತಿನಾದ್ಯಂತ ಎಲ್ಲಾ ಸರ್ಕಾರಗಳಿಗೂ ಹೊಸ ಸವಾಲುಗಳನ್ನು ತಂದೊಡ್ಡಿದೆ. ಭಾರತವೂ ಅದಕ್ಕೆ ಹೊರತಲ್ಲ. ಸಮಾಜ ಕಲ್ಯಾಣಕ್ಕಾಗಿ ಸಾಕಷ್ಟುಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಹಾಗೂ ಅದರಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಇವೆರಡೂ ನಮಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿವೆ.

ಜಗತ್ತಿನಾದ್ಯಂತ ಕಾಣಿಸಿಕೊಂಡ ಆರ್ಥಿಕ ಸಮಸ್ಯೆಯ ಹೊರತಾಗಿಯೂ ಭಾರತದ ರಾಜ್ಯಗಳು ಈ ವರ್ಷ 2020-21ನೇ ಸಾಲಿಗಿಂತ ಹೆಚ್ಚು ಸಾಲ ಪಡೆಯಲು ಸಾಧ್ಯವಾಯಿತೆಂಬುದು ನಿಮಗೆ ಗೊತ್ತಾ? ಆಶ್ಚರ್ಯವಾಗಬಹುದು, 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರಗಳು 1.06 ಲಕ್ಷ ಕೋಟಿ ರು.ನಷ್ಟುಹೆಚ್ಚು ಸಾಲ ಮಾಡಲು ಸಾಧ್ಯವಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಭಾಗೀದಾರಿ ಉಪಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ. ಹೀಗಾಗಿ ಆಪತ್ತಿನ ಸಮಯದಲ್ಲಿ ಖರ್ಚು ಮಾಡಲು ಗಣನೀಯ ಪ್ರಮಾಣದಲ್ಲಿ ದೇಶಕ್ಕೆ ಆರ್ಥಿಕ ಸಂಪನ್ಮೂಲ ಲಭ್ಯವಾಗಿದೆ.

ಕೊರೋನಾ ವೈರಸ್ಸಿನಿಂದ ಉಂಟಾದ ಆರ್ಥಿಕ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವಾಗ ನಾವು ‘ಒಬ್ಬರಿಗೆ ಹೊಂದುವ ಪರಿಹಾರ ಎಲ್ಲರಿಗೂ ಹೊಂದುತ್ತದೆ’ ಎಂಬ ಸೂತ್ರವನ್ನು ಅನುಸರಿಸಲಿಲ್ಲ. ಭಾರತದಂತಹ ವಿಸ್ತಾರವಾದ ಹಾಗೂ ವೈವಿಧ್ಯಮಯ ದೇಶದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ರೂಪಿಸಿ, ರಾಜ್ಯ ಸರ್ಕಾರಗಳು ತಳಮಟ್ಟದಲ್ಲಿ ಜಾರಿಗೊಳಿಸುವ ಸುಧಾರಣೆಗಳನ್ನು ಕಾರ್ಯರೂಪಕ್ಕಿಳಿಸುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ ನಮಗೆ ನಮ್ಮ ಒಕ್ಕೂಟ ರಾಜಕೀಯ ವ್ಯವಸ್ಥೆಯಲ್ಲಿ ನಂಬಿಕೆಯಿತ್ತು. ಹೀಗಾಗಿ ಕೇಂದ್ರ-ರಾಜ್ಯಗಳ ಭಾಗೀದಾರಿ ಸ್ಫೂರ್ತಿಯೊಂದಿಗೆ ಮುನ್ನುಗ್ಗಿದೆವು.

ರಾಜ್ಯಗಳಿಗೆ ಹೆಚ್ಚು ಸಾಲಕ್ಕೆ ಅವಕಾಶ

2020ರ ಮೇ ತಿಂಗಳನಲ್ಲಿ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಪ್ಯಾಕೇಜ್‌ ಘೋಷಿಸಿತು. ಅದರಡಿ ರಾಜ್ಯ ಸರ್ಕಾರಗಳಿಗೆ 2020-21ನೇ ಸಾಲಿನಲ್ಲಿ ಹೆಚ್ಚು ಸಾಲ ಮಾಡಲು ಅವಕಾಶ ಕಲ್ಪಿಸಿತು. ಒಟ್ಟಾರೆ ರಾಜ್ಯದ ಜಿಡಿಪಿಯ ಶೇ.2ರಷ್ಟುಮೊತ್ತವನ್ನು ಹೆಚ್ಚುವರಿಯಾಗಿ ಸಾಲ ಮಾಡಲು ಅನುಮತಿ ನೀಡಲಾಯಿತು. ಆ ಹಣದಲ್ಲಿ ಶೇ.1ರಷ್ಟುಹಣವನ್ನು ಕೆಲ ನಿರ್ದಿಷ್ಟಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಷರತ್ತಿನೊಂದಿಗೆ ಸಾಲದ ರೂಪದಲ್ಲಿ ಪಡೆಯಲು ಅವಕಾಶ ನೀಡಲಾಯಿತು. ಭಾರತದ ಸಾರ್ವಜನಿಕ ಹಣಕಾಸು ನೀತಿಯಲ್ಲಿ ಆರ್ಥಿಕ ಸುಧಾರಣೆಗೆ ಇಂತಹ ಪ್ರೋತ್ಸಾಹ ಬಹಳ ಅಪರೂಪ. ರಾಜ್ಯಗಳಿಗೆ ಇದೊಂದು ಪ್ರೋತ್ಸಾಹ ರೂಪದ ಬಹುಮಾನ ಯೋಜನೆಯಿದ್ದಂತೆ. ಹೆಚ್ಚು ಹಣ ಬೇಕೆಂದರೆ ಹೆಚ್ಚು ಸುಧಾರಣೆಗಳನ್ನು ಜಾರಿಗೊಳಿಸಬೇಕು. ಇದರ ಪರಿಣಾಮವಾಗಿ ಒಳ್ಳೆಯ ಫಲಿತಾಂಶ ದೊರಕಿದ್ದಷ್ಟೇ ಅಲ್ಲ, ಉತ್ತಮ ಆರ್ಥಿಕ ಸುಧಾರಣೆ ನೀತಿಗೆ ಸಿಗುವ ಸ್ವೀಕಾರಾರ್ಹತೆ ಅಷ್ಟಕ್ಕಷ್ಟೆಎಂಬ ಕಲ್ಪನೆ ಕೂಡ ಸುಳ್ಳಾಯಿತು.

4 ರೀತಿಯ ಸುಧಾರಣೆ

ರಾಜ್ಯಗಳಿಗೆ ಹೆಚ್ಚು ಸಾಲ ಮಾಡಲು ಅವಕಾಶ ದೊರೆಯುವಂತೆ ಒಟ್ಟು ನಾಲ್ಕು ರೀತಿಯ ಸುಧಾರಣೆಗಳನ್ನು ಜಾರಿಗೊಳಿಸಲಾಗಿತ್ತು. ಪ್ರತಿಯೊಂದು ಸುಧಾರಣೆಯೂ ರಾಜ್ಯದ ಜಿಡಿಪಿಯ ಶೇ.0.25ರಷ್ಟುಹೆಚ್ಚುವರಿ ಸಾಲ ಮಾಡಲು ಅವಕಾಶ ನೀಡುತ್ತಿತ್ತು. ಮೊದಲನೆಯದಾಗಿ, ಎಲ್ಲಾ ಸುಧಾರಣೆಗಳೂ ಜನರ ಜೀವನವನ್ನು ಉತ್ತಮಗೊಳಿಸುವುದಕ್ಕೆ ಸಂಬಂಧಿಸಿದ್ದವು. ಅದರಲ್ಲೂ ವಿಶೇಷವಾಗಿ ಬಡವರ, ದುರ್ಬಲ ವರ್ಗದವರ ಹಾಗೂ ಮಧ್ಯಮ ವರ್ಗದವರ ಜೀವನ ಮಟ್ಟವನ್ನು ಸುಧಾರಿಸುವುದಕ್ಕೆ ಇವು ಸಂಬಂಧಿಸಿದ್ದವು. ಎರಡನೆಯದಾಗಿ, ಇವು ಆರ್ಥಿಕ ಸುಸ್ಥಿರತೆ ತಂದುಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಿಸುತ್ತಿದ್ದವು.

ಏಕ ದೇಶ ಏಕ ಪಡಿತರ ಚೀಟಿ

ಮೊದಲ ಸುಧಾರಣೆ ‘ಒಂದು ದೇಶ ಒಂದು ಪಡಿತರ ಚೀಟಿ.’ ಇದನ್ನು ಜಾರಿಗೊಳಿಸುವುದಕ್ಕೆ ರಾಜ್ಯ ಸರ್ಕಾರಗಳು ಎಲ್ಲಾ ಪಡಿತರ ಚೀಟಿಯನ್ನೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿ ಆಧಾರ್‌ ಕಾರ್ಡ್‌ಗೆ ಜೋಡಣೆ ಮಾಡಬೇಕಿತ್ತು. ಕುಟುಂಬದಲ್ಲಿರುವ ಪ್ರತಿಯೊಬ್ಬರ ಆಧಾರ್‌ ಸಂಖ್ಯೆಯೂ ಪಡಿತರ ಚೀಟಿಗೆ ಜೋಡಣೆಯಾಗುವಂತೆ ಹಾಗೂ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಎಲೆಕ್ಟ್ರಾನಿಕ್‌ ಪಾಯಿಂಟ್‌ ಆಫ್‌ ಸೇಲ್‌ ಉಪಕರಣ ಇರುವಂತೆ ಖಾತ್ರಿಪಡಿಸಿಕೊಳ್ಳಬೇಕಿತ್ತು. ಇದರಿಂದ ಆದ ಪ್ರಮುಖ ಲಾಭವೆಂದರೆ ವಲಸೆ ಕಾರ್ಮಿಕರು ದೇಶದ ಎಲ್ಲೇ ಬೇಕಾದರೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯಬಹುದು. ನಾಗರಿಕರಿಗೆ ಸಿಗುವ ಈ ಲಾಭದ ಹೊರತಾಗಿ ಇದರಲ್ಲಿ ಸರ್ಕಾರಗಳಿಗೆ ಆರ್ಥಿಕ ಲಾಭವೂ ಇದೆ. ಇದನ್ನು ಜಾರಿಗೊಳಿಸಿದ ಮೇಲೆ ಬೋಗಸ್‌ ಹಾಗೂ ನಕಲಿ ಪಡಿತರ ಚೀಟಿಗಳು ರದ್ದಾಗತೊಡಗಿದವು. ಅದರಿಂದ ಬೊಕ್ಕಸಕ್ಕೆ ಉಳಿತಾಯವಾಗತೊಡಗಿತು. 17 ರಾಜ್ಯಗಳು ಈ ಸುಧಾರಣೆಯನ್ನು ಪೂರ್ಣಗೊಳಿಸಿವೆ. ಹೀಗಾಗಿ ಅವುಗಳಿಗೆ ಹೆಚ್ಚುವರಿಯಾಗಿ 37,600 ಕೋಟಿ ರು. ಸಾಲ ಪಡೆಯಲು ಅವಕಾಶ ದೊರೆತಿದೆ.

ಉದ್ದಿಮೆಗಳಿಗೆ ಷರತ್ತು ಸಡಿಲ

ಎರಡನೇ ಸುಧಾರಣೆಯಡಿ ಉದ್ದಿಮೆಗಳನ್ನು ನಡೆಸುವುದಕ್ಕೆ ಇರುವ ನಿಯಮಗಳನ್ನು ಸಡಿಲಿಸಿ ಅನುಕೂಲ ಮಾಡಿಕೊಡುವ ಬಗ್ಗೆ ಒತ್ತು ನೀಡಲಾಗಿತ್ತು. ಅದಕ್ಕೆ ರಾಜ್ಯ ಸರ್ಕಾರಗಳು ವಾಣಿಜ್ಯ ಸಂಬಂಧಿ ಲೈಸನ್ಸ್‌ಗಳನ್ನು ಏಳು ಕಾಯ್ದೆಗಳಡಿ ಬೇಗ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಲೈಸನ್ಸ್‌ ನೀಡುವ ಪ್ರಕ್ರಿಯೆ ಸ್ವಯಂಚಾಲಿತಗೊಳಿಸುವುದು, ಆನ್‌ಲೈನ್‌ನಲ್ಲೇ ಅನುಮೋದನೆ ಹಾಗೂ ಶುಲ್ಕ ಪಾವತಿಸಿದರೆ ಅನುಮತಿ ನೀಡುವುದು ಹೀಗೆ ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿತ್ತು. ಜೊತೆಗೆ ಕಂಪ್ಯೂಟರೀಕೃತ ಯಾದೃಚ್ಛಿಕ ತಪಾಸಣೆ ವ್ಯವಸ್ಥೆ ಆರಂಭಿಸುವಂತೆ ಸೂಚಿಸಲಾಗಿತ್ತು. ಅಂದರೆ, 12 ಕಾಯ್ದೆಗಳಡಿ ನಡೆಯಬಹುದಾದ ಭ್ರಷ್ಟಾಚಾರ ಹಾಗೂ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕಿತ್ತು. ಒಟ್ಟು 19 ಕಾಯ್ದೆಗಳಲ್ಲಿ ರಾಜ್ಯಗಳು ಸುಧಾರಣೆ ತರುವ ಅಗತ್ಯವಿತ್ತು. ಈ ಸುಧಾರಣೆಗಳು ವಿಶೇಷವಾಗಿ ಕಿರು ಉದ್ದಿಮೆ ಹಾಗೂ ಸಣ್ಣ ಉದ್ದಿಮೆಗಳಿಗೆ ನೆರವು ನೀಡುವಂತಿದ್ದವು. ಸಾಮಾನ್ಯವಾಗಿ ‘ಇನ್‌ಸ್ಪೆಕ್ಟರ್‌ ರಾಜ್‌’ ವ್ಯವಸ್ಥೆಯಲ್ಲಿ ಅತಿಹೆಚ್ಚು ಕಷ್ಟಹಾಗೂ ನಷ್ಟಅನುಭವಿಸುವುದು ಕಿರು ಹಾಗೂ ಸಣ್ಣ ಉದ್ದಿಮೆಗಳೇ. ಆ ಕಿರುಕುಳ ತಪ್ಪಿಸಿದರೆ ಬಂಡವಾಳ ಹೂಡಿಕೆಗೆ ಉತ್ತಮವಾದ ವಾತಾವರಣ ರಾಜ್ಯಗಳಲ್ಲಿ ನಿರ್ಮಾಣವಾಗುತ್ತದೆ. ಹೆಚ್ಚೆಚ್ಚು ಹೂಡಿಕೆ ಹರಿದುಬರುತ್ತದೆ. ಅದರಿಂದ ಅಭಿವೃದ್ಧಿಗೆ ವೇಗ ಸಿಗುತ್ತದೆ. 20 ರಾಜ್ಯಗಳು ಈ ಸುಧಾರಣೆಯನ್ನು ಜಾರಿಗೊಳಿಸಿವೆ. ಹೀಗಾಗಿ ಅವುಗಳಿಗೆ ಹೆಚ್ಚುವರಿಯಾಗಿ 39,521 ಕೋಟಿ ರು. ಹೆಚ್ಚುವರಿ ಸಾಲ ದೊರೆತಿದೆ.

ಆಸ್ತಿ ತೆರಿಗೆಯಲ್ಲಿ ಸುಧಾರಣೆ

15ನೇ ಹಣಕಾಸು ಆಯೋಗ ಹಾಗೂ ಇನ್ನಿತರ ಅನೇಕ ತಜ್ಞರು ದಕ್ಷವಾದ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹೇಳಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರನೇ ಸುಧಾರಣೆಯಲ್ಲಿ ರಾಜ್ಯಗಳು ಆಸ್ತಿ ತೆರಿಗೆಗೆ ಫೆä್ಲೕರ್‌ ರೇಟ್‌ ನಿಗದಿಪಡಿಸಬೇಕು ಎಂದು ಸೂಚಿಸಲಾಯಿತು. ಜೊತೆಗೆ ಆಸ್ತಿ ತೆರಿಗೆ ನಿಗದಿಪಡಿಸಲು ನಗರ ಪ್ರದೇಶಗಳಲ್ಲಿ ನೀರು ಮತ್ತು ಒಳಚರಂಡಿ ಶುಲ್ಕ, ಆಸ್ತಿಯ ಮಾರ್ಗಸೂಚಿ ದರ ಮತ್ತು ಸ್ಟಾಂಪ್‌ ಡ್ಯೂಟಿ, ಆಸ್ತಿಯ ಈಗಿನ ಮೌಲ್ಯವನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಲಾಯಿತು. ಇದರಿಂದಾಗಿ ನಗರ ಪ್ರದೇಶಗಳ ಬಡ ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಅದು ನಗರ ಪ್ರದೇಶಗಳಲ್ಲಿ ಉತ್ತಮ ಮೂಲಸೌಕರ್ಯ ನಿರ್ಮಾಣವಾಗಲು ಮತ್ತು ಅಭಿವೃದ್ಧಿ ಹೆಚ್ಚಲು ಅವಕಾಶ ನೀಡುತ್ತಿತ್ತು. ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿದರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ. ನಗರ ಪ್ರದೇಶಗಳಲ್ಲಿರುವ ಬಡವರು ಇದರ ಹೆಚ್ಚಿನ ಲಾಭ ಪಡೆಯುತ್ತಾರೆ. ಈ ಸುಧಾರಣೆಯಿಂದ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಅನುಕೂಲವಾಗುತ್ತದೆ. ಏಕೆಂದರೆ, ಸ್ಥಳೀಯ ಸಂಸ್ಥೆಯಲ್ಲಿ ಸಾಕಷ್ಟುಹಣವಿಲ್ಲದೆ ಅವರಿಗೆ ವೇತನ ವಿಳಂಬವಾಗುವ ಸಮಸ್ಯೆಯನ್ನು ನಾವೆಲ್ಲಾ ಕೇಳಿದ್ದೇವೆ. ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿದರೆ ಅವರಿಗೆ ಸಕಾಲಕ್ಕೆ ವೇತನ ದೊರೆಯುತ್ತದೆ. 11 ರಾಜ್ಯಗಳು ಈ ಸುಧಾರಣೆ ಜಾರಿಗೊಳಿಸಿ ಹೆಚ್ಚುವರಿಯಾಗಿ 15,957 ಕೋಟಿ ರು. ಸಾಲದ ನೆರವು ಪಡೆದಿವೆ.

ಉಚಿತ ವಿದ್ಯುತ್‌ ಬದಲು ಹಣ

ನಾಲ್ಕನೆಯ ಸುಧಾರಣೆಯೆಂದರೆ ರೈತರಿಗೆ ಉಚಿತವಾಗಿ ವಿದ್ಯುತ್‌ ನೀಡುವ ಬದಲು ನೇರವಾಗಿ ಹಣ ವರ್ಗಾವಣೆ ಮಾಡುವುದು. ರಾಜ್ಯಗಳು ಮೊದಲಿಗೆ ಒಂದು ಜಿಲ್ಲೆಯಲ್ಲಿ ವರ್ಷದೊಳಗೆ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿ, ಇದಕ್ಕೆ ಜಿಎಸ್‌ಡಿಪಿಯ ಶೇ.0.15ರಷ್ಟುಹೆಚ್ಚುವರಿ ಸಾಲಕ್ಕೆ ಅನುಮತಿ ನೀಡುವುದನ್ನು ಜೋಡಿಸಲಾಗಿತ್ತು. ಇದನ್ನು ಜಾರಿಗೊಳಿಸುವುದರಿಂದ ವಿದ್ಯುತ್‌ ವಿತರಣಾ ಕಂಪನಿಗಳಿಗೆ ಸೋರಿಕೆಯಲ್ಲಾಗುವ ನಷ್ಟಕೂಡ ಕಡಿಮೆಯಾಗುತ್ತಿತ್ತು. ಜೊತೆಗೆ ನೀರು ಮತ್ತು ಇಂಧನದ ಉಳಿತಾಯ, ಹೆಚ್ಚಿನ ಪ್ರಮಾಣದಲ್ಲಿ ತಾಂತ್ರಿಕ ಸುಧಾರಣೆ ಕೂಡ ಉಂಟಾಗುತ್ತಿತ್ತು. 13 ರಾಜ್ಯಗಳು ಇವುಗಳಲ್ಲಿ ಕನಿಷ್ಠ ಒಂದೊಂದು ಷರತ್ತು ಪಾಲಿಸಿವೆ. 6 ರಾಜ್ಯಗಳು ನೇರ ನಗದು ವರ್ಗಾವಣೆಯ ಷರತ್ತು ಪೂರೈಸಿವೆ. ಅದರಿಂದಾಗಿ ಅವುಗಳಿಗೆ ಒಟ್ಟು 13,201 ಕೋಟಿ ರು. ಹೆಚ್ಚುವರಿ ಸಾಲಕ್ಕೆ ಅನುಮತಿ ದೊರೆತಿದೆ.

ರಾಜ್ಯಗಳಿಗೆ ಲಕ್ಷ ಕೋಟಿ ಹೆಚ್ಚು ಸಾಲ

ಒಟ್ಟಾರೆ ಕಳೆದ ವರ್ಷದಿಂದ ಈಚೆಗೆ 23 ರಾಜ್ಯಗಳು ಹೆಚ್ಚುವರಿಯಾಗಿ 1.06 ಲಕ್ಷ ಕೋಟಿ ರು. ಸಾಲ ಪಡೆದಿವೆ. ಎಲ್ಲಾ ರಾಜ್ಯಗಳು ಎಲ್ಲಾ ಷರತ್ತು ಪಾಲಿಸಿದ್ದರೆ ಒಟ್ಟು 2.14 ಲಕ್ಷ ಕೋಟಿ ರು. ಹೆಚ್ಚುವರಿ ಸಾಲ ಪಡೆಯಲು ಅನುಮತಿ ದೊರೆಯುತ್ತಿತ್ತು. ಇದರ ಪರಿಣಾಮವಾಗಿ 2020-21ನೇ ಸಾಲಿನಲ್ಲಿ ರಾಜ್ಯಗಳಿಗೆ ಸಾಲ ಪಡೆಯಲು ಅನುಮತಿ ನೀಡಿರುವುದರ ಪ್ರಮಾಣ ಜಿಎಸ್‌ಡಿಪಿಯ ಶೇ.4.5ಕ್ಕೆ ಏರಿಕೆಯಾಗಿದೆ.

ಇದೊಂದು ಹೊಸ ಮಾದರಿ

ನಮ್ಮದು ಸಂಕೀರ್ಣ ಸವಾಲುಗಳಿರುವ ಬೃಹತ್‌ ದೇಶ. ಇಂತಹ ದೇಶಕ್ಕೆ ಇದೊಂದು ಹೊಸ ಅನುಭವ. ಹಿಂದೆಲ್ಲ ಆರ್ಥಿಕ ಸುಧಾರಣೆಗಳು ಹಾಗೂ ಯೋಜನೆಗಳು ನಾನಾ ಕಾರಣಕ್ಕೆ ಜಾರಿಯಾಗದೆ ವರ್ಷಗಳ ಕಾಲ ಹಾಗೇ ಉಳಿದಿದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ಇದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಸಾರ್ವಜನಿಕರ ಒಳಿತಿಗಾಗಿ ಸುಧಾರಣಾ ಕ್ರಮಗಳನ್ನು ಸ್ನೇಹಪೂರ್ವಕವಾಗಿ ಜಾರಿಗೆ ತರುವುದಕ್ಕೆ ಒಂದು ಮಾದರಿಯಂತೆ ಕಾಣಿಸುತ್ತಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌ ಎಂಬ ನಮ್ಮ ಆಶಯದಿಂದ ಇದು ಸಾಧ್ಯವಾಗಿದೆ. ಈ ಸುಧಾರಣೆಗಳ ಜಾರಿಯಲ್ಲಿ ನಮ್ಮ ಜೊತೆ ಕೆಲಸ ಮಾಡಿದ ಅಧಿಕಾರಿಗಳು ಹೇಳುವ ಪ್ರಕಾರ ಇಂತಹ ಪ್ರೋತ್ಸಾಹದಾಯಕ ಕ್ರಮಗಳು ಇಲ್ಲದಿದ್ದರೆ ಈ ಮಾದರಿಯ ಸುಧಾರಣೆಗಳನ್ನು ಜಾರಿಗೊಳಿಸಲು ಹಲವು ವರ್ಷಗಳೇ ಹಿಡಿಯುತ್ತಿದ್ದವು. ಭಾರತ ಈ ಅವಧಿಯಲ್ಲಿ ಸುಧಾರಣಾ ಕ್ರಮಗಳನ್ನು ಶರವೇಗದಲ್ಲಿ ಜಾರಿಗೊಳಿಸುವ ಹೊಸ ಮಾದರಿಯೊಂದನ್ನು ಕಂಡುಕೊಂಡಿದೆ. ಇದು ಬದ್ಧತೆ ಹಾಗೂ ಪ್ರೋತ್ಸಾಹದಾಯಕ ಕ್ರಮಗಳಿಂದ ಸುಧಾರಣೆಗಳನ್ನು ಜಾರಿಗೊಳಿಸುವುದಕ್ಕೊಂದು ಹೊಸ ಮಾದರಿ. ಕಷ್ಟದ ಸಮಯದಲ್ಲೂ ನಾಗರಿಕರ ಒಳಿತಿದಾಗಿ ಸುಧಾರಣೆಗಳನ್ನು ಜಾರಿಗೆ ತರುವುದಕ್ಕೆ ಉತ್ಸಾಹ ತೋರಿದ ರಾಜ್ಯಗಳಿಗೆ ನಾನು ಆಭಾರಿ. 130 ಕೋಟಿ ಭಾರತೀಯರ ಪ್ರಗತಿಗಾಗಿ ಇನ್ನು ಮುಂದೆಯೂ ಹೀಗೇ ಕೆಲಸ ಮಾಡೋಣ.

Follow Us:
Download App:
  • android
  • ios