ನವದೆಹಲಿ(ಸೆ.13): ಗ್ರಾಹಕರ ವಸ್ತುಗಳ ಪ್ಯಾಕಿಂಗ್‌ಗೆ ಮಿತಿಮೀರಿದ ಪ್ಲಾಸ್ಟಿಕ್‌ ಬಳಕೆ ಮೂಲಕ ಪರಿಸರ ರಕ್ಷಣಾ ಕ್ರಮಗಳನ್ನು ಉಲ್ಲಂಘಿಸಿರುವ ದೇಶದ ಪ್ರಮುಖ ಇ-ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ನಿರ್ದೇಶನ ನೀಡಿದೆ.

ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗಳ ಪ್ಲಾಸ್ಟಿಕ್‌ ನಿರ್ಬಂಧಕ್ಕೆ ಕೋರಿ 16 ವರ್ಷದ ಬಾಲಕ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಜಿಟಿ ಮುಖ್ಯಸ್ಥ ಎ.ಕೆ ಗೋಯೆಲ್‌ ಶನಿವಾರ ವಿಚಾರಣೆ ನಡೆಸಿದರು. ಈ ವೇಳೆ ‘ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಸೇರಿದಂತೆ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸಿದ ಇತರ ಸಂಸ್ಥೆಗಳ ವಿರುದ್ಧ ಪರಿಸರಾತ್ಮಕ ಆಡಿಟ್‌ ನಡೆಸಬಹುದು.

ತನ್ಮೂಲಕ ಪರಿಸರ ನಿಯಂತ್ರಣ ನಿಯಮ ಮೀರಿದ ಸಂಸ್ಥೆಗಳಿಗೆ ದಂಡ ವಿಧಿಸಬಹುದು. ಅಲ್ಲದೆ, ಆ ಸಂಸ್ಥೆಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ವರದಿಯನ್ನು ಅ.14ರ ಒಳಗಾಗಿ ಸಲ್ಲಿಸಬೇಕು’ ಎಂದು ಹೇಳಿದ್ದಾರೆ.