ದೇಶದ ಸರಕು ರಫ್ತಿನಲ್ಲಿ ದಾಖಲೆಯ ಏರಿಕೆ: ಕಳೆದ ವರ್ಷಕ್ಕಿಂತ 14% ಭರ್ಜರಿ ಏರಿಕೆ
ಭಾರತದಿಂದ ವಿದೇಶಗಳಿಗೆ ರಫ್ತಾಗುವ ಸರಕುಗಳ ಪ್ರಮಾಣ ಕಳೆದೊಂದು ವರ್ಷದಲ್ಲಿ ಶೇ.6 ರಷ್ಟು ಭಾರಿ ಏರಿಕೆಯಾಗಿದೆ. 2022-23ರಲ್ಲಿ ದೇಶವು 447 ಬಿಲಿಯನ್ ಡಾಲರ್ (ಸುಮಾರು 36 ಲಕ್ಷ ಕೋಟಿ ರು.) ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ.
ರೋಮ್: ಭಾರತದಿಂದ ವಿದೇಶಗಳಿಗೆ ರಫ್ತಾಗುವ ಸರಕುಗಳ ಪ್ರಮಾಣ ಕಳೆದೊಂದು ವರ್ಷದಲ್ಲಿ ಶೇ.6 ರಷ್ಟು ಭಾರಿ ಏರಿಕೆಯಾಗಿದೆ. 2022-23ರಲ್ಲಿ ದೇಶವು 447 ಬಿಲಿಯನ್ ಡಾಲರ್ (ಸುಮಾರು 36 ಲಕ್ಷ ಕೋಟಿ ರು.) ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ಇದೇ ಅವಧಿಯಲ್ಲಿ ಆಮದು ಕೂಡ ಶೇ.16.5ರಷ್ಟು ಏರಿಕೆ ಕಂಡಿದೆ. 2022-23ರಲ್ಲಿ ಭಾರತ ಒಟ್ಟು 58 ಲಕ್ಷ ಕೋಟಿ ರು. ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ.
ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ (Piyush Goyal) ಇಟಲಿಯಲ್ಲಿ ಗುರುವಾರ ಈ ಮಾಹಿತಿ ನೀಡಿದ್ದಾರೆ. ಫ್ರಾನ್ಸ್ ಹಾಗೂ ಇಟಲಿಯಲ್ಲಿ ಉದ್ಯಮ ಕ್ಷೇತ್ರದ ಪ್ರಮುಖರ ಜೊತೆಗೆ ಸರಣಿ ಸಭೆಗಳನ್ನು ನಡೆಸಿ ಬಂಡವಾಳ ಆಕರ್ಷಿಸಲು ಮೂರು ದಿನಗಳ ಪ್ರವಾಸಕ್ಕೆ ತೆರಳಿರುವ ಪೀಯೂಷ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದೊಂದು ವರ್ಷದಲ್ಲಿ ಭಾರತದ ಸರಕುಗಳ ರಫ್ತು ಶೇ.6ರಷ್ಟು ಹೆಚ್ಚಾಗಿದೆ. ಸರಕು ಮತ್ತು ಸೇವೆಗಳ ರಫ್ತು ಕೂಡ ಹೊಸ ದಾಖಲೆ ಬರೆದಿದ್ದು, ಶೇ.14ರಷ್ಟು ಹೆಚ್ಚಾಗಿದೆ. 2022-23ರಲ್ಲಿ ನಾವು 770 ಬಿಲಿಯನ್ ಡಾಲರ್ (ಸುಮಾರು 63 ಲಕ್ಷ ಕೋಟಿ ರು.) ಮೌಲ್ಯದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಿದ್ದೇವೆ. ಈ ಅವಧಿಯಲ್ಲಿ 58 ಲಕ್ಷ ಕೋಟಿ ರು. ಮೌಲ್ಯದ ಸರಕು ಆಮದು ಮಾಡಿಕೊಂಡಿದ್ದೇವೆ. ಸರಕು ಮತ್ತು ಸೇವೆಗಳೆರಡನ್ನೂ ಸೇರಿಸಿ 73 ಲಕ್ಷ ಕೋಟಿ ರು.ನಷ್ಟು ಆಮದು ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ದೇಶದ ರಫ್ತು ಮತ್ತು ಆಮದು ಎರಡೂ ಹೆಚ್ಚಾಗಿರುವುದು ಆರ್ಥಿಕತೆ ಚೆನ್ನಾಗಿ ಬೆಳೆಯುತ್ತಿರುವುದರ ಸೂಚಕವಾಗಿದೆ. ದೇಶದಿಂದ ಪೆಟ್ರೋಲಿಯಂ (Petroleum), ಫಾರ್ಮಾ, ರಾಸಾಯನಿಕ (chemical) ಹಾಗೂ ಸಮುದ್ರ ಉತ್ಪನ್ನಗಳ ರಫ್ತು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಸೇವಾ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ, ಅಕೌಂಟಿಂಗ್ ಹಾಗೂ ಬಿಸಿನೆಸ್ ಪ್ರೊಸೆಸಿಂಗ್ ಸೇವೆಗಳ (Export of Business Processing Services) ರಫ್ತು ಏರಿಕೆಯಾಗಿದೆ. ರಫ್ತು ಹೆಚ್ಚಳದಿಂದ ಚಾಲ್ತಿ ಖಾತೆ ಕೊರತೆ ತುಂಬಿಕೊಳ್ಳಲು ಸಹಾಯವಾಗಲಿದೆ ಎಂದು ತಿಳಿಸಿದರು.