ರಾಜ್ಯಾದ್ಯಂತ ಆಸ್ತಿ ನೋಂದಣಿ ಹೆಚ್ಚಳ
ಕೊರೋನಾ ಹಾವಳಿ ಆರಂಭವಾಗಿ 6 ತಿಂಗಳ ಬಳಿಕ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳುತ್ತಿದೆ. ನಿಧಾನವಾಗಿ ಚುರುಕು ಪಡೆದುಕೊಂಡಿದೆ.
ಬೆಂಗಳೂರು (ಸೆ.08): ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್ ಹಂತ-ಹಂತವಾಗಿ ಸಡಿಲವಾಗುತ್ತಿದ್ದಂತೆ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬರುತ್ತಿದ್ದು, ಆಸ್ತಿ ನೋಂದಣಿ ಚಟುವಟಿಕೆ ವೇಗ ಪಡೆದಿದೆ. ಪರಿಣಾಮ ಆಗಸ್ಟ್ ತಿಂಗಳಲ್ಲಿ 946 ಕೋಟಿ ರು. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗಿದೆ.
ಆಗಸ್ಟ್ ತಿಂಗಳಲ್ಲಿ ಕಂದಾಯ ಇಲಾಖೆ ನಿಗದಿಪಡಿಸಿದ್ದ ಗುರಿಯಲ್ಲಿ (1,164 ಕೋಟಿ ರು.) ಶೇ.80ರಷ್ಟುಆದಾಯ ಸಂಗ್ರಹವಾಗಿದೆ. ಇದು ರಿಯಲ್ ಎಸ್ಟೇಟ್ ಕ್ಷೇತ್ರದ ಚೇತರಿಕೆಯ ಮುನ್ಸೂಚನೆಯಾಗಿದ್ದರೂ ಕಳೆದ ನಾಲ್ಕು ತಿಂಗಳಿಂದ ಖರೀದಿ ಯೋಜನೆಯಲ್ಲಿದ್ದವರು ಈಗ ಖರೀದಿ ಮಾಡಿರಬಹುದು. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮ ಸಹಜ ಸ್ಥಿತಿಗೆ ಬರಲು ಇನ್ನೂ ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಡಿಯಿಂದ ಚಂದಾ ಕೊಚ್ಚಾರ್ ಅವರ ಪತಿ ಉದ್ಯಮಿ ದೀಪಕ್ ಕೊಚ್ಚಾರ್ ಬಂಧನ
ಒಟ್ಟು ಪ್ರಸಕ್ತ ಬಜೆಟ್‌ನಲ್ಲಿ 14,500 ಕೋಟಿ ರು.ಗಳನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೂಲದಿಂದ ಸಂಗ್ರಹಿಸಲು ಸರ್ಕಾರ ಅಂದಾಜಿಸಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ಕೇವಲ 2,100 ಕೋಟಿ ರು. ಸಂಗ್ರಹವಾಗಿದೆ. ಪ್ರತಿ ತಿಂಗಳು 1,000ದಿಂದ 1,200 ಕೋಟಿ ರು. ಆದಾಯ ನಿರೀಕ್ಷಿಸುತ್ತಿದ್ದ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬಂದಿಲ್ಲ. ಹೀಗಾಗಿ ಸುಮಾರು 2 ಸಾವಿರ ಕೋಟಿ ರು.ಆದಾಯ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ. ಮೋಹನ್ ರಾಜ್, ಜುಲೈನಿಂದ ನಿಧಾನವಾಗಿ ನೋಂದಣಿ ಪ್ರಕ್ರಿಯೆಗಳು ಚುರುಕುಗೊಳ್ಳುತ್ತಿವೆ. ಪ್ರಸಕ್ತ ಸಾಲಿನ ಆಗಸ್ಟ್ ತಿಂಗಳಲ್ಲಿ 1,164 ಕೋಟಿ ರು. ಆದಾಯ ಸಂಗ್ರಹ ಗುರಿ ಹೊಂದಿದ್ದು, 946 ಕೋಟಿ ರು. ಸಂಗ್ರಹವಾಗಿದೆ. ಕಳೆದ ವರ್ಷ ಈ ತಿಂಗಳಲ್ಲಿ 940 ಕೋಟಿ ರು. ಸಂಗ್ರಹವಾಗಿತ್ತು.
ಉಪ ನೋಂದಣಾಧಿಕಾರಿಗಳ ಕಚೇರಿಗಳನ್ನು ಏಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಮೇ ಹಾಗೂ ಜೂನ್ ತಿಂಗಳಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅನುವು ಮಾಡಿಕೊಟ್ಟಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ಪ್ರಕ್ರಿಯೆಗಳು ನಡೆದಿರಲಿಲ್ಲ. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, 253 ಉಪ ನೋಂದಣಾಧಿಕಾರಿಗಳ ಕಚೇರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದರು.
ಚಿನ್ನದ ದರವೆಷ್ಟು ಅಂತೀರಾ? ಇಲ್ಲಿದೆ ಸೆ. 07ರ ಬೆಲೆ!
ನೋಂದಣಿ ಶುಲ್ಕಕ್ಕೆ ರಿಯಾಯಿತಿ ನೀಡಿ: ಕ್ರೆಡಾಯ್ ಬೆಂಗಳೂರು ಮಾಜಿ ಉಪಾಧ್ಯಕ್ಷ ಹಾಗೂ ವಿಶಾಲ್ ಪ್ರಮೋಟರ್ಸ್ ಪಾಲುದಾರರಾದ ಸುರೇಶ್ ಹರಿ ಪ್ರಕಾರ, ನಿವೇಶನಗಳು ಹಾಗೂ ಫ್ಲ್ಯಾಟ್‌ಗಳಿಗೆ ಆನ್‌ಲೈನ್ ವಿಚಾರಣೆ ಹಾಗೂ ಸೈಟ್‌ಗೆ ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿದೆ. ಆಗಸ್ಟ್‌ನಲ್ಲಿ ನೋಂದಣಿ ಹೆಚ್ಚಾಗಿದ್ದು, ಕಳೆದ ನಾಲ್ಕು ತಿಂಗಳಿಂದ ಯೋಜನೆ ಮಾಡಿಕೊಂಡಿದ್ದವರು ಈಗ ನೋಂದಣಿ ಮಾಡಿಸಿಕೊಂಡಿರಬಹುದು. ಆಸ್ತಿ ನೋಂದಣಿಗೆ ಉತ್ತೇಜನ ನೀಡಬೇಕಾದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಕನಿಷ್ಠ ಮುಂದಿನ ಮೂರು ತಿಂಗಳು ರಿಯಾಯಿತಿ ನೀಡಬೇಕು. ಇದರಿಂದ ಸಾರ್ವಜನಿಕರು ಆಸ್ತಿ ಖರೀದಿಗೆ ಮುಂದಾಗುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಂಡರೆ ಇದನ್ನು ಅವಲಂಬಿಸಿರುವ 250 ಉದ್ಯಮಗಳು ಚೇತರಿಸಿಕೊಳ್ಳುತ್ತವೆ. ಇದರಿಂದ ಶೀಘ್ರ ಉದ್ಯೋಗ ಸೃಷ್ಟಿಯಾಗಲಿದೆ. ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳು ಈ ರೀತಿ ಮಾಡಿವೆ ಎಂದು ಅಭಿಪ್ರಾಯಪಟ್ಟರು.