ಪ್ರಸ್ತಾವಿತ ಎಲ್‌ಪಿಎಸ್‌ಎಸ್‌ ವ್ಯವಸ್ಥೆ, ಹಾಲಿ ಬಳಕೆಯಲ್ಲಿರುವ ಸಾಂಪ್ರದಾಯಿಕ ಪಾವತಿ ತಂತ್ರಜ್ಞಾನ ವ್ಯವಸ್ಥೆಗಳಿಂದ ಸ್ವತಂತ್ರವಾಗಿದ್ದು, ಕನಿಷ್ಠ ಸಿಬ್ಬಂದಿಯೊಂದಿಗೆ ಎಲ್ಲಿ ಬೇಕಾದರೂ ಕಾರ್ಯನಿರ್ವಹಿಸಬಲ್ಲದಾಗಿದೆ.

ಮುಂಬೈ (ಮೇ 31, 2023): ನೈಸರ್ಗಿಕ ವಿಪತ್ತು ಮತ್ತು ಯುದ್ಧದಂತಹ ಸಂದರ್ಭಗಳಲ್ಲಿ ಬಳಸಬಹುದಾದ ಲೈಟ್‌ ವೇಟ್‌ ಮತ್ತು ಪೋರ್ಟಬಲ್‌ ಪೇಮೆಂಟ್‌ ವ್ಯವಸ್ಥೆ (ಎಲ್‌ಪಿಎಸ್‌ಎಸ್‌) ಯನ್ನು ಅಭಿವೃದ್ಧಿಪಡಿಸುವ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಾರ್ಯನಿರ್ವಹಿಸುತ್ತಿದೆ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಪ್ರಸ್ತಾವಿತ ಎಲ್‌ಪಿಎಸ್‌ಎಸ್‌ ವ್ಯವಸ್ಥೆ, ಹಾಲಿ ಬಳಕೆಯಲ್ಲಿರುವ ಸಾಂಪ್ರದಾಯಿಕ ಪಾವತಿ ತಂತ್ರಜ್ಞಾನ ವ್ಯವಸ್ಥೆಗಳಿಂದ ಸ್ವತಂತ್ರವಾಗಿದ್ದು, ಕನಿಷ್ಠ ಸಿಬ್ಬಂದಿಯೊಂದಿಗೆ ಎಲ್ಲಿ ಬೇಕಾದರೂ ಕಾರ್ಯನಿರ್ವಹಿಸಬಲ್ಲದಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಮತ್ತು ಯುಪಿಐ ಪೇಮೆಂಟ್‌ ವ್ಯವಸ್ಥೆಗಳನ್ನು ಬೃಹತ್‌ ಪ್ರಮಾಣದ ನಿರಂತರ ಬಳಕೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಈ ವ್ಯವಸ್ಥೆಗಳು ಸುಧಾರಿತ ಐಟಿ ವ್ಯವಸ್ಥೆಯ ಸಂಕೀರ್ಣವಾದ ಜಾಲದ ಮೇಲೆ ಅವಲಂಬಿತವಾಗಿದ್ದು ನೈಸರ್ಗಿಕ ವಿಪತ್ತು ಮತ್ತು ಯುದ್ಧ ಸಂಭವಿಸಿದ ಸಂದರ್ಭಗಳಲ್ಲಿ ಸ್ಥಗಿತಗೊಳ್ಳುತ್ತವೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಬಳಸಬಹುದಾದ ಬೇರೆ ರೀತಿಯ ಪೇಮೆಂಟ್‌ ವ್ಯವಸ್ಥೆಯ ವಿನ್ಯಾಸ ನಡೆಸಲಾಗುತ್ತಿದೆ. ಇದು ಕನಿಷ್ಠ ಸಾಫ್ಟ್‌ವೇರ್‌ ಮತ್ತು ಗರಿಷ್ಠ ಹಾರ್ಡ್‌ವೇರ್‌ಗಳಲ್ಲಿ ಕಾರ್ಯನಿರ್ವಹಿಸಲಿದ್ದು ಅಗತ್ಯವಿದ್ದಲ್ಲಿ ಮಾತ್ರವೇ ಸಕ್ರಿಯವಾಗಿರುತ್ತವೆ ಎಂದು ಆರ್‌ಬಿಐ ಹೇಳಿದೆ.

ಇದನ್ನು ಓದಿ: 2000 ರೂ. ನೋಟು ಹಿಂಪಡೆಯುವಿಕೆ ಬಳಿಕ ಎಸ್‌ಬಿಐನಲ್ಲಿ ಜಮೆಯಾಯ್ತು 14 ಸಾವಿರ ಕೋಟಿ, 3,000 ಕೋಟಿ ರೂ. ಬದಲಾವಣೆ

ಚಲಾವಣೆಯಲ್ಲಿರುವ ನೋಟುಗಳು, ಮೌಲ್ಯ ಎರಡೂ ಏರಿಕೆ: ಆರ್‌ಬಿಐ
ಹಿಂದಿನ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಪ್ರಮಾಣ ಮತ್ತು ಅವುಗಳ ಮೌಲ್ಯ ಎರಡರಲ್ಲೂ ಕ್ರಮವಾಗಿ ಶೇ.9.9 ಮತ್ತು ಶೇ.5 ರಷ್ಟು ಏರಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಹಿಂದಿನ ವರ್ಷ ಚಲಾವಣೆಯಲ್ಲಿದ್ದ ಎಲ್ಲಾ ಮಾದರಿ ನೋಟುಗಳ ಒಟ್ಟು ಮೌಲ್ಯದಲ್ಲಿ 500 ರೂ. ಮತ್ತು 2000 ರೂ .ನ ನೋಟು ಪಾಲು ಶೇ. 87.1ರಷ್ಟುಇದ್ದರೆ, 2022-23ರಲ್ಲಿ ಇವುಗಳ ಪಾಲು ಶೇ. 87.9ಕ್ಕೆ ಹೆಚ್ಚಳವಾಗಿದೆ.

ಇನ್ನು 2023ರ ಮಾರ್ಚ್‌ 31ಕ್ಕೆ ಕೊನೆಗೊಂಡ ಅವಧಿಯಲ್ಲಿ ದೇಶದಲ್ಲಿ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳಲ್ಲಿ 500 ರೂ.ನ ನೋಟಿನ ಪ್ರಮಾಣ ಶೇ. 37.9 ಮತ್ತು 10 ರೂನ ನೋಟಿನ ಪ್ರಮಾಣ ಶೇ.19.2ರಷ್ಟಿತ್ತು. ಅಂದರೆ 500 ರೂ. ಮುಖಬೆಲೆಯ 5,16,338 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದು, ಇದರ ಮೌಲ್ಯ 25,81,690 ಕೋಟಿ ರೂ.ಗಳು. ಅದೇ ರೀತಿ 2000 ರೂ. ನ 4.55,468 ನೋಟುಗಳು ಚಲಾವಣೆಯಲ್ಲಿದ್ದು ಇದರ ಮೌಲ್ಯ 3,62,220 ಕೋಟಿ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: 2000 ರೂ. ನೋಟು ಬದಲಾಯಿಸಿಕೊಳ್ಳೋಕೆ ಪೆಟ್ರೋಲ್‌ ಬಂಕ್‌ಗೆ ಮುಗಿಬಿದ್ದ ಜನ: ಚೇಂಜ್‌ ಇಲ್ಲ ಎಂದು ಹೇಳಿ ಸುಸ್ತಾದ ಸಿಬ್ಬಂದಿ

ಜೊತೆಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ 20 ಮತ್ತು 500 ರೂ.ನ ನಕಲಿ ನೋಟುಗಳ ಪ್ರಮಾಣದಲ್ಲಿ ಕ್ರಮವಾಗಿ ಶೇ.8.4 ಮತ್ತು ಶೇ.14.4ರಷ್ಟು ಹೆಚ್ಚಳ ಕಂಡುಂದಿದೆ. ಅದೇ ರೀತಿ 10, 100, 200 ರೂ. ನ ನಕಲಿ ನೋಟುಗಳ ಪ್ರಮಾಣದಲ್ಲಿ ಶೇ.11.6, ಶೇ.14.7 ಮತ್ತು ಶೇ.27.9 ರಷ್ಟುಇಳಿಕೆ ಕಂಡುಬಂದಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಕಪ್ಪು ಹಣ ಹೊಂದಿದವ್ರಿಗೆ ರೆಡ್‌ ಕಾರ್ಪೆಟ್‌ ಹಾಸಲಾಗಿದೆ: 2 ಸಾವಿರ ರೂ. ನೋಟು ಹಿಂಪಡೆತಕ್ಕೆ ಚಿದಂಬರಂ ಟೀಕೆ