ಮೊದಲ ಹಂತದ ಮತದಾನಕ್ಕೂ ಮೊದಲೇ ಮಹತ್ವದ ನಿರ್ಧಾರ ಪ್ರಕಟಿಸಲಿರುವ ಆರ್‌ಬಿಐ| ಮೋದಿ ಸರ್ಕಾರಕ್ಕೆ ವರದಾನವಾಗಲಿದೆ ಆರ್‌ಬಿಐ ಮಹತ್ವದ ನಿರ್ಧಾರ?| ಆರ್‌ಬಿಐ ಬಡ್ಡಿದರ ಕಡಿತ ಮಾಡುವ ನಿರೀಕ್ಷೆ| ಏಪ್ರಿಲ್‌ನಲ್ಲೇ ರೆಪೋ ದರ ಕಡಿತಕ್ಕೆ ಮುಂದಾಗಲಿದೆ ಆರ್‌ಬಿಐ| ರಾಯ್ಟರ್ಸ್ ಸುದ್ದಿ ಸಂಸ್ಥೆ ಅಭಿಪ್ರಾಯ ಸಂಗ್ರಹಣೆ ವರದಿ ಬಹಿರಂಗ| ಸದೃಢ ಆರ್ಥಿಕತೆಗೆ ಎನ್‌ಡಿಎ ಸರ್ಕಾರ ಉತ್ತಮ ಎಂದ ಅರ್ಥಶಾಸ್ತ್ರಜ್ಞರು|

ನವದೆಹಲಿ(ಏ.02): ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. 

ಆರ್‌ಬಿಐ ರೆಪೋ ದರ ಕಡಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಯ್ಟರ್ಸ್ ಸುದ್ದಿ ಸಂಸ್ಥೆ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು, ಶೀಘ್ರದಲ್ಲೇ ಆರ್‌ಬಿಐ ರೆಪೋ ದರ ಕಡಿತ ಮಾಡುವ ಘೋಷಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಆರ್‌ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಕಳೆದ ಫೆಬ್ರವರಿ ತಿಂಗಳಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದರು. ಬೆಳವಣಿಗೆ ದರ ಹಾಗೂ ಹಣದುಬ್ಬರದ ದೃಷ್ಟಿಯಲ್ಲಿ ಬಡ್ಡಿ ದರ ಇಳಿಕೆ ಮಾಡಿರುವುದನ್ನು ಆರ್‌ಬಿಐ ಈಗಾಗಲೇ ಸಮರ್ಥಿಸಿಕೊಂಡಿದೆ.

ಎರಡನೇ ತ್ರೈಮಾಸಿಕ ಅವಧಿಯ ಏಪ್ರಿಲ್ ಹಾಗೂ ಜೂನ್‌ನಲ್ಲಿ ಆರ್‌ಬಿಐ ಎರಡು ಸಭೆ ನಡೆಯಲಿದ್ದು, ಬಡ್ಡಿ ದರ ಇಳಿಕೆ ಮಾಡಿ ನೀತಿಗಳನ್ನು ಸಡಿಲಗೊಳಿಸಲು ಮುಂದಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಬಡ್ಡಿದರ ಕಡಿತ ಮಾಡಲು ಕೇಂದ್ರದ ಒತ್ತಡ ಕೂಡ ಇದ್ದು, ಜೂನ್ ಬದಲಿಗೆ ಏಪ್ರಿಲ್‌ನಲ್ಲೇ ಆರ್‌ಬಿಐ ಬಡ್ಡಿದರ ಕಡಿತಗೊಳ್ಳಲಿದೆ ಎನ್ನಲಾಗಿದೆ.

ಇದೇ ವೇಳೆ ರಾಯ್ಟರ್ಸ್ ಸುದ್ದಿ ಸಂಸ್ಥೆ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಕೂಡ ಸಂಗ್ರಹಿಸಿದ್ದು, ಬಹುತೇಕ ಅರ್ಥಶಾಸ್ತ್ರಜ್ಞರು ದೇಶದ ಸದೃಢ ಆರ್ಥಿಕತೆಗಾಗಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಒಳ್ಳೆಯದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ ಎನ್ನಲಾಗಿದೆ.