ನಿಷ್ಕ್ರಿಯ ಖಾತೆಗಳಲ್ಲಿನ ಹಣ ವಾರಸುದಾರರಿಗೆ ಹಿಂತಿರುಗಿಸಲು 100 ದಿನಗಳ RBI ಕಾರ್ಯಕ್ರಮ; ಜೂ.1ರಿಂದ ಪ್ರಾರಂಭ
ಬ್ಯಾಂಕ್ ಖಾತೆಗಳಲ್ಲಿ ಕ್ಲೇಮ್ ಆಗದೆ ಉಳಿದ ಠೇವಣಿಗಳನ್ನು ನಿಜವಾದ ವಾರಸುದಾರರಿಗೆ ಹಿಂತಿರುಗಿಸಲು ಆರ್ ಬಿಐ 100 ದಿನಗಳು 100 ಪಾವತಿಗಳು ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ.ಜೂ.1ರಿಂದ ದೇಶಾದ್ಯಂತ ಎಲ್ಲ ಬ್ಯಾಂಕ್ ಗಳಲ್ಲಿ ಈ ಕಾರ್ಯಕ್ರಮ ಜಾರಿಗೆ ಬರಲಿದೆ.
ನವದೆಹಲಿ (ಮೇ17): ಕ್ಲೇಮ್ ಆಗದ ಠೇವಣಿಗಳನ್ನು ಅದರ ನಿಜವಾದ ಹಕ್ಕುದಾರರಿಗೆ ಹಿಂತಿರುಗಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) '100 ದಿನಗಳು 100 ಪಾವತಿಗಳು' ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಮೇ 12ರಂದು ಆರ್ ಬಿಐ ನೀಡಿದ ಹೇಳಿಕೆಯಲ್ಲಿ 100 ದಿನಗಳ ವಿಶೇಷ ಕಾರ್ಯಕ್ರಮದಡಿಯಲ್ಲಿ ಬ್ಯಾಂಕ್ ಗಳು ದೇಶದ ಪ್ರತಿ ಜಿಲ್ಲೆಯ ಟಾಪ್ 100 ನಿಷ್ಕ್ರಿಯ ಠೇವಣಿಗಳ ವಾರಸುದಾರರನ್ನು ಹುಡುಕಿ,ಅವರ ಹಣ ಹಿಂತಿರುಗಿಸಲಿವೆ. ಬ್ಯಾಂಕ್ ಗಳು 2023ರ ಜೂನ್ 1ರಿಂದ ಈ ಕಾರ್ಯಕ್ರಮ ಪ್ರಾರಂಭಿಸಲಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ಲೇಮ್ ಆಗದೆ ಉಳಿದಿರುವ ಠೇವಣಿಗಳ ಪ್ರಮಾಣವನ್ನು ತಗ್ಗಿಸಲು ಈಗಾಗಲೇ ಆರ್ ಬಿಐ ಅನೇಕ ಪ್ರಯತ್ನಗಳನ್ನು ನಡೆಸುತ್ತಿದೆ. ಇಂಥ ನಿಷ್ಕ್ರಿಯ ಖಾತೆಗಳಲ್ಲಿನ ಠೇವಣಿಗಳನ್ನು ಕ್ಲೇಮ್ ಮಾಡಲು ವಾರಸುದಾರರು ಬ್ಯಾಂಕ್ ಗಳನ್ನು ಸಂಪರ್ಕಿಸುವಂತೆ ಆರ್ ಬಿಐ ಆಗಾಗ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ. ಇತ್ತೀಚೆಗಷ್ಟೇ ಆರ್ ಬಿಐ ಅನೇಕ ಬ್ಯಾಂಕ್ ಗಳಲ್ಲಿ ಕ್ಲೇಮ್ ಆಗದ ಉಳಿದಿರುವ ಠೇವಣಿಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರೀಕೃತ ವೆಬ್ ಪೋರ್ಟಲ್ ಪ್ರಾರಂಭಿಸುವ ನಿರ್ಧಾರ ಪ್ರಕಟಿಸಿತ್ತು.
ನಿಷ್ಕ್ರಿಯ ಠೇವಣಿ ಎಂದರೇನು?
ದೇಶದ ವಿವಿಧ ಬ್ಯಾಂಕ್ ಗಳಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ವಹಿವಾಟು ನಡೆಯದ ಖಾತೆಗಳ ಸಂಖ್ಯೆ ಬಹಳಷ್ಟಿದೆ. ಇಂಥ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ಪರಿಗಣಿಸಲಾಗುತ್ತದೆ. ಖಾತೆದಾರನ ಮರಣ ಅಥವಾ ಇನ್ನಿತರ ಕಾರಣಗಳಿಂದ ಇಂಥ ಖಾತೆಯಲ್ಲಿರುವ ಹಣವನ್ನು ವಾರಸುದಾರರು ಕ್ಲೇಮ ಮಾಡಿರೋದಿಲ್ಲ. ಇಂಥ ಖಾತೆಗಳಲ್ಲಿನ ಮೊತ್ತವನ್ನು ಆರ್ ಬಿಐ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ (ಡಿಇಎ) ನಿಧಿಗೆ ಜಮಾ ಮಾಡಲಾಗುತ್ತದೆ.ಹಣಕಾಸು ಸಚಿವಾಲಯದ ಮಾಹಿತಿ ಅನ್ವಯ 2023ರ ಫೆಬ್ರವರಿ ಅಂತ್ಯಕ್ಕೆ ಅನುಗುಣವಾಗಿ ದೇಶದಲ್ಲಿ ಇಂಥ 10.24 ಕೋಟಿ ಬ್ಯಾಂಕ್ ಖಾತೆಗಳಿರುವುದು ಪತ್ತೆಯಾಗಿದೆ. ಇನ್ನು ಇಂಥ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಲ್ಲಿ ಕೊಳೆಯುತ್ತಿದ್ದ 35,012 ಕೋಟಿ ರೂ. ಠೇವಣಿ ಮೊತ್ತವನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಈ ವರ್ಷದ ಫೆಬ್ರವರಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್‌ಬಿಐ) ವರ್ಗಾವಣೆ ಮಾಡಿವೆ.
ಮಹಿಳೆಯರಿಗೆ ಬ್ಯಾಂಕ್, ಎನ್ ಬಿಎಫ್ ಸಿ ಯಾವೆಲ್ಲ ವಿಶೇಷ ಯೋಜನೆಗಳನ್ನು ಹೊಂದಿವೆ? ಇಲ್ಲಿದೆ ಮಾಹಿತಿ
ಹೊಸ ಠೇವಣಿಗಳು ನಿಷ್ಕ್ರಿಯಗೊಳ್ಳದಂತೆ ಹಾಗೂ ನಿಷ್ಕ್ರಿಯ ಖಾತೆಗಳಲ್ಲಿನ ಹಣ ನಿಜವಾದ ವಾರಸುದಾರರು ಅಥವಾ ಫಲಾನುಭವಿಗಳಿಗೆ ಹಿಂತಿರುಗಿಸಲು ಆರ್ ಬಿಐ ಅನೇಕ ಕ್ರಮಗಳನ್ನು ಕೈಗೊಂಡಿದೆ.
ನಿಷ್ಕ್ರಿಯ ಖಾತೆಗಳಲ್ಲಿನ ಹಣ ಕ್ಲೇಮ್ ಮಾಡೋದು ಹೇಗೆ?
ಪ್ರಸ್ತುತ ನೀವು ನಿಮ್ಮ ಅಥವಾ ಕುಟುಂಬ ಸದಸ್ಯರ ಹೆಸರಿನಲ್ಲಿ ಯಾವುದಾದರೂ ನಿಷ್ಕ್ರಿಯ ಬ್ಯಾಂಕ್ ಖಾತೆಯಿದೆಯಾ ಎಂಬುದನ್ನು ಪತ್ತೆ ಹಚ್ಚಲು ಪ್ರತಿ ಬ್ಯಾಂಕಿನ ವೆನ್ ಸೈಟ್ ಪರಿಶೀಲಿಸೋದು ಅಗತ್ಯ. ಕೆಲವು ಬ್ಯಾಂಕ್ ಗಳು ನಿಷ್ಕ್ರಿಯ ಖಾತೆಗಳು ಹಾಗೂ ಕ್ಲೇಮ್ ಆಗದ ಠೇವಣಿಗಳ ಪಟ್ಟಿಯನ್ನು ಪ್ರಕಟಿಸುತ್ತವೆ, ಇದರಲ್ಲಿ ಅವರ ಹೆಸರುಗಳು ಹಾಗೂ ವಿಳಾಸ ಕೂಡ ಇರುತ್ತದೆ. ನಿಷ್ಕ್ರಿಯ ಖಾತೆಗಳಲ್ಲಿನ ಹಣವನ್ನು ಕ್ಲೇಮ್ ಮಾಡಲು ಖಾತೆದಾರರು ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು. ಅಲ್ಲಿ ಸಂಪೂರ್ಣ ಮಾಹಿತಿ ಭರ್ತಿ ಮಾಡಿದ ಹಾಗೂ ಸಹಿ ಮಾಡಿರುವ 'ಕ್ಲೇಮ್ ಅರ್ಜಿ' ಸಲ್ಲಿಕೆ ಮಾಡಬೇಕು.ಒಂದು ವೇಳೆ DEAFಗೆ ಹಣ ವರ್ಗಾಯಿಸಿರೋ ಖಾತೆಯ ಗ್ರಾಹಕ ತನ್ನ ಠೇವಣಿ ಹಣಕ್ಕೆ ಬೇಡಿಕೆಯಿಟ್ಟರೆ ಅಂಥ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಿಗೆ ಬಡ್ಡಿ ಸಹಿತ ಹಣವನ್ನು ಮರುಪಾವತಿ ಮಾಡಬೇಕು ಹಾಗೂ ತನಗೆ ಮರುಪಾವತಿ ಮಾಡುವಂತೆ DEAFಗೆ ಮನವಿ ಮಾಡಬೇಕು.