ಮಹಿಳೆಯರಿಗೆ ಬ್ಯಾಂಕ್, ಎನ್ ಬಿಎಫ್ ಸಿ ಯಾವೆಲ್ಲ ವಿಶೇಷ ಯೋಜನೆಗಳನ್ನು ಹೊಂದಿವೆ? ಇಲ್ಲಿದೆ ಮಾಹಿತಿ
ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಲು ಇಂದು ಸರ್ಕಾರದ ಜೊತೆಗೆ ಬ್ಯಾಂಕ್ ಗಳು ಹಾಗೂ ಎನ್ ಬಿಎಫ್ ಸಿಗಳು ಕೂಡ ನೆರವು ನೀಡುತ್ತಿವೆ. ಮಹಿಳೆಯರಿಗೆ ಕೆಲವು ಬ್ಯಾಂಕ್ ಗಳು ಹಾಗೂ ಎನ್ ಬಿಎಫ್ ಸಿಗಳು ವಿಶೇಷ ಯೋಜನೆಗಳನ್ನು ಹೊಂದಿವೆ. ಹಾಗಾದ್ರೆ ಮಹಿಳೆಯರು ಬ್ಯಾಂಕ್ ಗಳು ಹಾಗೂ ಎನ್ ಬಿಎಫ್ ಸಿಗಳಿಂದ ಸಾಲದ ಮೇಲೆ ಯಾವೆಲ್ಲ ರಿಯಾಯ್ತಿಗಳನ್ನು ಪಡೆಯಬಹುದು? ಇಲ್ಲಿದೆ ಮಾಹಿತಿ.
Business Desk: ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಲು ಬಯಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಿದೆ. ಹಾಗೆಯೇ ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಹಣಕಾಸಿನ ನೆರವನ್ನು ಪಡೆಯಲು ಮುಂದಾಗುತ್ತಿದ್ದಾರೆ ಕೂಡ.ಇನ್ನು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅನೇಕ ಬ್ಯಾಂಕ್ ಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕೂಡ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಒದಗಿಸುತ್ತಿವೆ. ಈ ಯೋಜನೆಗಳು ಕಡಿಮೆ ಬಡ್ಡಿದರ, ಸಬ್ಸಿಡಿ ಸೇರಿದಂತೆ ಅನೇಕ ಪ್ರಯೋಜನಗಳನ್ನು ಮಹಿಳಾ ಸಾಲಗಾರರಿಗೆ ನೀಡುತ್ತಿವೆ.ಆದರೆ,ಬ್ಯಾಂಕ್ ಗಳು ಹಾಗೂ ಎನ್ ಬಿಎಫ್ ಸಿಗಳು ನೀಡುತ್ತಿರುವ ಈ ಸೌಲಭ್ಯಗಳ ಬಗ್ಗೆ ಅನೇಕ ಮಹಿಳೆಯರಿಗೆ ಮಾಹಿತಿಯಿಲ್ಲ. ವಿಶ್ವ ಬ್ಯಾಂಕ್ ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೋರೇಷನ್ 2020ರ ವರದಿ ಅನ್ವಯ ಭಾರತದಲ್ಲಿ ಕೇವಲ ಶೇ.17ರಷ್ಟು ಮಹಿಳೆಯರು ಮಾತ್ರ ಈ ವಿಶೇಷ ಹಣಕಾಸಿನ ಸೌಲಭ್ಯಗಳ ಬಗ್ಗೆ ಮಾಹಿತಿ ಹೊಂದಿದ್ದಾರೆ.ಹೀಗಾಗಿ ಮಹಿಳೆಯರು ಬ್ಯಾಂಕ್ ಗಳು ಹಾಗೂ ಎನ್ ಬಿಎಫ್ ಸಿಗಳು ಒದಗಿಸುವ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇದ್ರಿಂದ ಹಣಕಾಸಿನ ಅಗತ್ಯ ಎದುರಾದಾಗ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.ಹಾಗಾದ್ರೆ ಬ್ಯಾಂಕ್ ಗಳು ಹಾಗೂ ಎನ್ ಬಿಎಫ್ ಸಿಗಳು ಮಹಿಳೆಯರಿಗೆ ಯಾವೆಲ್ಲ ಯೋಜನೆಗಳನ್ನು ಹೊಂದಿವೆ? ಇಲ್ಲಿದೆ ಮಾಹಿತಿ.
ವಿಶೇಷ ಯೋಜನೆಗಳ ಭಾಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹಾಗೂ ಕೆನರಾ ಬ್ಯಾಂಕ್ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತವೆ.ಕೆನರಾ ಬ್ಯಾಂಕ್ ಶೇ.8.85 ಬಡ್ಡಿದರದಲ್ಲಿ ಮಹಿಳೆಯರಿಗೆ ಗೃಹಸಾಲ ನೀಡುತ್ತದೆ. ಆದರೆ, ಸಾಮಾನ್ಯ ಜನರಿಗೆ ಈ ಬ್ಯಾಂಕ್ ನಲ್ಲಿ ಗೃಹಸಾಲದ ಮೇಲಿನ ಬಡ್ಡಿದರ ಶೇ.9.25ರಷ್ಟಿದೆ.ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗೃಹಸಾಲ ಪಡೆಯುವ ಮಹಿಳೆಯರಿಗೆ ಬಡ್ಡಿದರದಲ್ಲಿ 5 ಬೇಸಿಸ್ ಪಾಯಿಂಟ್ ರಿಯಾಯ್ತಿ ನೀಡುತ್ತದೆ.ಈ ರೀತಿ ನಿಗದಿಗಿಂತ ಕಡಿಮೆ ಬಡ್ಡಿದರ ನೀಡುವ ಮೂಲಕ ಬ್ಯಾಂಕ್ ಗಳು ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುತ್ತಿವೆ.
ತಂದೆ ಉದ್ಯಮಕ್ಕೆ ಸೇರದೆ ತನ್ನದೇ ಸಂಸ್ಥೆ ಕಟ್ಟಿದ ಈಕೆ ಇಂದು 125 ಕೋಟಿ ರೂ. ಆದಾಯ ಗಳಿಸೋ ಕಂಪನಿ ಒಡತಿ!
ಇನ್ನು ಎಚ್ ಡಿಎಫ್ ಸಿ (HDFC) ಮಹಿಳೆಯರಿಗೆ ಗೃಹಸಾಲದ ಮೇಲೆ 5 ಬೇಸಿಸ್ ಪಾಯಿಂಟ್ಸ್ ಡಿಸ್ಕೌಂಟ್ ನೀಡುತ್ತದೆ. ಇನ್ನು ಸಾಲದ ಮೇಲಿನ ಬಡ್ಡಿದರ ಸಾಲದ ಮೊತ್ತ ಹಾಗೂ ಕ್ರೆಡಿಟ್ ಸ್ಕೋರ್ ಮೇಲೆ ಅವಲಂಬಿತವಾಗಿದೆ.ಅಧಿಕ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
ಅನೇಕ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ( NBFCs) ಕೂಡ ಮಹಿಳೆಯರಿಗೆ ರಿಯಾಯ್ತಿ ದರದಲ್ಲಿ ಸಾಲ ನೀಡುತ್ತವೆ. ಈ ಸಂಸ್ಥೆಗಳು ಕೂಡ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೂಡ ಮಹಿಳೆಯರಿಗೆ ಗೃಹ ಸಾಲದ ಮೇಲೆ 2ಲಕ್ಷ ರೂ. ತನಕ ಸಬ್ಸಿಡಿ ನೀಡಲಾಗುತ್ತದೆ. ಇನ್ನು ಕೆಲವು ರಾಜ್ಯ ಸರ್ಕಾರಗಳು ಕೂಡ ಮಹಿಳೆಯರಿಗೆ ಶುಲ್ಕ ಹಾಗೂ ತೆರಿಗೆ ವಿನಾಯಿತಿ ನೀಡುತ್ತವೆ. ಉದಾಹರಣೆಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮಹಿಳೆಯರಿಗೆ ಆಸ್ತಿ ನೋಂದಣಿಗೆ ಕಡಿಮೆ ಶುಲ್ಕ ವಿಧಿಸುತ್ತದೆ.ಇನ್ನು ತೆರಿಗೆ ವಿನಾಯ್ತಿ ಮಿತಿ ಶೇ.1ರಿಂದ ಶೇ.2ರ ತನಕ ಇರುತ್ತದೆ.
Earning App : ವಾಕಿಂಗ್ ಮಾಡ್ತಾ ಹಣ ಗಳಿಸೋಕೆ ಇಲ್ಲಿದೆ ಅವಕಾಶ
ಇನ್ನು ಸ್ವಂತ ಉದ್ಯಮ ಪ್ರಾರಂಭಿಸುವ ಮಹಿಳೆಯರಿಗೆ ಕೂಡ ಮುದ್ರಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಹಾಗೆಯೇ ಕೆಲವೊಂದು ಸಬ್ಸಿಡಿ, ಶುಲ್ಕ ಹಾಗೂ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕೂಡ ಮಹಿಳೆಯರಿಗೆ ನೀಡಲಾಗುತ್ತದೆ. ಯಾವುದೇ ಯೋಜನೆಯ ಪ್ರಯೋಜನ ಪಡೆಯುವ ಮುನ್ನ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕಲೆ ಹಾಕೋದು ಅಗತ್ಯ. ಹಾಗೆಯೇ ಎಲ್ಲ ನಿಯಮ ಹಾಗೂ ಷರತ್ತುಗಳನ್ನು ಓದಿದ ಬಳಿಕವೇ ಆ ಯೋಜನೆಯ ಪ್ರಯೋಜನ ಪಡೆಯಬೇಕು.