ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ಬಾರಿ ಕೂಡ ರೆಪೋ ದರವನ್ನು ಯಥಾಸ್ಥಿತಿಯಲ್ಲಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ. ಪ್ರಸಕ್ತ ರೆಪೋ ದರ ಶೇ.6.5ರಷ್ಟಿದ್ದು,ಕಳೆದ ಎರಡು ಎಂಪಿಸಿ ಸಭೆಗಳಲ್ಲಿ ಕೂಡ ಯಾವುದೇ ಬದಲಾವಣೆ ಮಾಡಿಲ್ಲ.
ಮುಂಬೈ (ಆ.10): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಾರಿ ಕೂಡ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಹೀಗಾಗಿ ರೆಪೋ ದರ ಈಗಿರುವ ಶೇ.6.5ರಷ್ಟೇ ಇರಲಿದೆ. ಇದು ಬ್ಯಾಂಕ್ ಗಳಿಂದ ಸಾಲ ಪಡೆದವರಿಗೆ ತುಸು ನೆಮ್ಮದಿ ನೀಡಿದೆ. 2024ನೇ ಹಣಕಾಸು ಸಾಲಿನ ಮೂರನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಿದರು. ಆರು ಸದಸ್ಯರನ್ನೊಳಗೊಂಡ ಆರ್ ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ದ್ವೈಮಾಸಿಕ ಸಭೆ ಆಗಸ್ಟ್ 8ರಿಂದ 10ರ ತನಕ ನಡೆದಿದೆ. ಈ ಸಭೆಯಲ್ಲಿ ರೆಪೋ ದರದ ಬಗ್ಗೆ ಚರ್ಚೆ ನಡೆಸಿರುವ ಸದಸ್ಯರು, ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಈ ಹಣಕಾಸು ಸಾಲಿನ ಸತತ ಮೂರು ಎಂಪಿಸಿ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್ ಹಾಗೂ ಜೂನ್ ನಲ್ಲಿ ನಡೆದ ಕಳೆದ ಎರಡು ಎಂಪಿಸಿ ದ್ವೈಮಾಸಿಕ ಸಭೆಯಲ್ಲಿ ಕೂಡ ರೆಪೋ ದರವನ್ನು ಯಥಾಸ್ಥಿತಿಲ್ಲಿಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ದೇಶದಲ್ಲಿ ಹೆಚ್ಚುತ್ತಿದ್ದ ಹಣದುಬ್ಬರಕ್ಕೆ ಕಡಿವಾಣ ಹಾಕಲು 2022ರ ಮೇನಿಂದ ಈ ವರ್ಷದ ಪ್ರಾರಂಭದ ತನಕ ಆರ್ ಬಿಐ ರೆಪೋ ದರದಲ್ಲಿ 250 ಬೇಸಿಸ್ ಪಾಯಿಂಟ್ಸ್ ಏರಿಕೆ ಮಾಡುವ ಮೂಲಕ ಸಾಲಗಾರರಿಗೆ ಭಾರೀ ಶಾಕ್ ನೀಡಿತ್ತು. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ ಎಂಪಿಸಿ ರೆಪೋ ದರವನ್ನು ಶೇ.6.25 ರಿಂದ ಶೇ.6.50ಕ್ಕೆ ಏರಿಕೆ ಮಾಡಿತ್ತು. ಅದಾದ ಬಳಿಕ ನಡೆದ ಎರಡು ಸಭೆಗಳಲ್ಲಿ ಯಾವುದೇ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ಥಿಕ ತಜ್ಞರು ಕೂಡ ಈ ಬಾರಿ ಆರ್ ಬಿಐ ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ ಎಂಬ ನಿರೀಕ್ಷೆಯನ್ನೇ ವ್ಯಕ್ತಪಡಿಸಿದ್ದರು.
ಅವಧಿಗೂ ಮುನ್ನ ಗೃಹಸಾಲ ಮರುಪಾವತಿಸೋ ಗ್ರಾಹಕರಿಗೆ ಬ್ಯಾಂಕ್ ದಂಡ ವಿಧಿಸಬಹುದಾ? RBI ಏನ್ ಹೇಳಿದೆ?
ಸಾಲಗಾರರಿಗೆ ನಿರಾಳತೆ
ರೆಪೋ ದರ ಅನ್ನೋದು ಆರ್ ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆಯಿಂದ ಸಾಲಗಾರರು ಕಂಗೆಟ್ಟಿದ್ದರು. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚುತ್ತದೆ. ಇಲ್ಲವಾದರೆ ಸಾಲದ ಅವಧಿ ವಿಸ್ತರಣೆಯಾಗುತ್ತದೆ. ಹೀಗಾಗಿ ಈ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರೋದು ಸಾಲಗಾರರಿಗೆ ತುಸು ನೆಮ್ಮದಿ ನೀಡಿದೆ.
2024ನೇ ಹಣಕಾಸು ಸಾಲಿನ ಅಂದಾಜು ಹಣದುಬ್ಬರ ಶೇ.5.4
ಇನ್ನು ಆರ್ ಬಿಐ ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯಲ್ಲಿ 2024ನೇ ಹಣಕಾಸು ಸಾಲಿನ ಅಂದಾಜು ಹಣದುಬ್ಬರ ದರವನ್ನು ಶೇ.5.4ಕ್ಕೆ ಏರಿಕೆ ಮಾಡಿದೆ ಇನ್ನು 2024ನೇ ಹಣಕಾಸು ಸಾಲಿನ ಜಿಡಿಪಿ ಅಂದಾಜು ದರವನ್ನು ಶೇ.6.5ಕ್ಕೆ ನಿಗದಿಪಡಿಸಲಾಗಿದೆ ಎಂಬ ಮಾಹಿತಿಯನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಆರ್ಥಿಕತೆ ಉತ್ತಮ ಸ್ಥಾನದಲ್ಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.
ಆರ್‌ಬಿಐ ಮಾಹಿತಿ, 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸ್!
ಯುಪಿಐ ಆಪ್ ಲೈನ್ ಪಾವತಿಗೆ ಅವಕಾಶ
ಸಮೀಪದ ಫೀಲ್ಡ್ ಕಮ್ಯೂನಿಕೇಷನ್ ಬಳಸಿಕೊಂಡು ಆಪ್ ಲೈನ್ ನಲ್ಲಿ ಯುಪಿಐ ಪಾವತಿಗೆ ಆರ್ ಬಿಐ ಅವಕಾಶ ಕಲ್ಪಿಸಿದೆ. ಹಾಗೆಯೇ ಯುಪಿಐ ಲೈಟ್ ಮೂಲಕದ ಪಾವತಿ ಮಿತಿಯನ್ನು 200ರೂ.ನಿಂದ 500ರೂ.ಗೆ ಏರಿಕೆ ಮಾಡಿದೆ.
