Asianet Suvarna News Asianet Suvarna News

KYC Update Deadline Extended:ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್; ಕೆವೈಸಿ ದಾಖಲೆ ಸಲ್ಲಿಕೆ ಗಡುವು ಮಾ.31ಕ್ಕೆ ವಿಸ್ತರಣೆ

*ಕೆವೈಸಿ ಮಾಹಿತಿ ಸಲ್ಲಿಕೆಗೆ ಈ ಹಿಂದೆ ಡಿ.31 ಅಂತಿಮ ದಿನಾಂಕವಾಗಿತ್ತು
*ಬ್ಯಾಂಕ್ ಖಾತೆ ಹೊಂದಿರೋ ವ್ಯಕ್ತಿ ಕಾಲಕಾಲಕ್ಕೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡೋದು ಕಡ್ಡಾಯ
*ಒಮಿಕ್ರಾನ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆ 

RBI has extended deadline for periodic KYC update till March 31 2022 anu
Author
Bangalore, First Published Dec 30, 2021, 6:43 PM IST

ಮುಂಬೈ (ಡಿ.30):  ಬ್ಯಾಂಕ್(Bank) ಹಾಗೂ ಹಣಕಾಸು ಸೇವಾ ಸಂಸ್ಥೆಗಳಲ್ಲಿ (Financial Service Organizations) ಖಾತೆ ಹೊಂದಿರೋರು ಗುರುತು ಮತ್ತು ವಿಳಾಸ ಪುರಾವೆಗಳನ್ನು (KYC documents) ಅಪ್ಡೇಟ್ ಮಾಡೋ  ಅವಧಿಯನ್ನು ಮೂರು ತಿಂಗಳ ತನಕ ಅಂದ್ರೆ ಮಾರ್ಚ್ 31, 2022ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್  (RBI) ವಿಸ್ತರಿಸಿದೆ. ಕೋವಿಡ್ -19 ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಿರೋದಾಗಿ ಆರ್ ಬಿಐ ತಿಳಿಸಿದೆ. ಈ ಹಿಂದೆ ಕೈವೈಸಿ ಮಾಹಿತಿ ಅಪ್ಡೇಟ್ ಮಾಡಲು ಡಿಸೆಂಬರ್ 31 ಅಂತಿಮ ದಿನಾಂಕವಾಗಿತ್ತು.

ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕೆವೈಸಿ ದಾಖಲೆಗಳ ಪರಿಷ್ಕರಣೆಗೆ ಗ್ರಾಹಕರ ಮೇಲೆ ಒತ್ತಡ ಹೇರದಂತೆ ಆರ್ ಬಿಐ ಬ್ಯಾಂಕ್ ಗಳಿಗೆ 2021ರ ಮೇನಲ್ಲಿ ಸುತ್ತೋಲೆ ಹೊರಡಿಸಿತ್ತು. ಆದ್ರೆ ಈ ನಿರ್ದೇಶನದ ಅವಧಿ ಡಿ.31ಕ್ಕೆ ಕೊನೆಗೊಳ್ಳಲಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(Anti-money laundering Act)-2002 ಹಾಗೂ ಅಕ್ರಮ ಹಣ ವರ್ಗಾವಣೆ ತಡೆ (ದಾಖಲೆಗಳ ನಿರ್ವಹಣೆ)  ನಿಯಮಗಳು 2005ರ ಅನ್ವಯ ಗ್ರಾಹಕರ ಗುರುತು ಮಾಹಿತಿಗಳನ್ನು ಕಲೆ ಹಾಕುವಂತೆ ಬ್ಯಾಂಕು ಹಾಗೂ  ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ 2016ರಲ್ಲಿ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಅನ್ವಯ ಅನಾಮಿಕರ ಅಥವಾ ಬೇನಾಮಿ ಹೆಸರಿನಲ್ಲಿ ಯಾವುದೇ ಖಾತೆ ತೆರೆಯುವಂತಿಲ್ಲ. ಖಾತೆ ತೆರೆಯೋ ಸಂದರ್ಭದಲ್ಲಿ ಖಾತೆದಾರ ಗುರುತು ಮತ್ತು ವಿಳಾಸ ಪುರಾವೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಅಲ್ಲದೆ, ಕಾಲಕಾಲಕ್ಕೆ ಕೆವೈಸಿ ಮಾಹಿತಿಗಳನ್ನು ಪರಿಷ್ಕರಿಸಬೇಕು ಎಂದು ಆರ್ ಬಿಐ ಸೂಚಿಸಿದೆ. 

GST Returns: 2020-21ನೇ ಆರ್ಥಿಕ ಸಾಲಿನ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಗಡುವು ಫೆಬ್ರವರಿ 28ರ ತನಕ ವಿಸ್ತರಣೆ

ಎಷ್ಟು ವರ್ಷಕ್ಕೊಮ್ಮೆ KYC ಪರಿಷ್ಕರಣೆ ಮಾಡಬೇಕು?
ಅಕ್ರಮ ಹಣ ವರ್ಗಾವಣೆ ಕಾಯ್ದೆಯ (Anti-money laundering Act) ಭಾಗವಾಗಿರುವುದರಿಂದ ಗ್ರಾಹಕರು ಬ್ಯಾಂಕ್ ಮಾತ್ರವೇ ಅಲ್ಲದೆ ಮ್ಯೂಚುವಲ್ ಫಂಡ್(Mutual Fund),ಬ್ರೋಕಿಂಗ್ ಸಂಸ್ಥೆ(Broking organization), ಡೆಪಾಸಿಟರೀಸ್‌ನಂತಹ ಹಣಕಾಸು ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಕೆವೈಸಿ ಪರಿಷ್ಕರಣೆ ಮಾಡಿಸಬೇಕಾಗಿದೆ. ಬ್ಯಾಂಕುಗಳು ಹೇಳುವ ಪ್ರಕಾರ, ಹೆಚ್ಚು ಅಪಾಯವಿಲ್ಲದ (Low Risk) ಗ್ರಾಹಕರು 10 ವರ್ಷಗಳಿಗೊಮ್ಮೆ ತಮ್ಮ ಕೆವೈಸಿ ಪರಿಷ್ಕರಣೆ ಮಾಡಿಸಿದರೆ ಸಾಕು. ಹೆಚ್ಚು ಅಪಾಯದ (High Risk)) ಗ್ರಾಹಕರು ಪ್ರತಿ 2 ವರ್ಷಗಳಿಗೊಮ್ಮೆ ಕೆವೈಸಿ ನೀಡ ಬೇಕು. ಗ್ರಾಹಕರು ಬಳಕೆ ಮಾಡುವು ದನ್ನೇ ನಿಲ್ಲಿಸಿರುವ, ನಿಷ್ಕ್ರಿಯವಾಗಿರುವ ಖಾತೆಗಳನ್ನು ಮರುಬಳಕೆ ಮಾಡಲು ಹೊಸದಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚು ಅಪಾಯವಿಲ್ಲದ ಗ್ರಾಹಕರು 10 ವರ್ಷಗಳಿಗೊಮ್ಮೆ ಕೆವೈಸಿ ನೀಡಬೇಕಾಗಿದೆಯಾದರೂ, ಬ್ಯಾಂಕ್ ಕಳುಹಿಸಿದ ಯಾವುದೇ ಅಂಚೆ ವಾಪಸ್ ಬಂದರೆ ಹೊಸದಾಗಿ ಕೆವೈಸಿ ನೀಡಬೇಕಾಗುತ್ತದೆ.

ITR e-Verification: 2019-20ನೇ ಆರ್ಥಿಕ ಸಾಲಿನ ITR ಇ-ದೃಢೀಕರಣ ಅಂತಿಮ ಗಡುವು ಫೆ.28ಕ್ಕೆ ವಿಸ್ತರಣೆ

ಕೆವೈಸಿಗೆ ಈ ದಾಖಲೆಗಳು ಅಗತ್ಯ
ಗ್ರಾಹಕರು ಕೆವೈಸಿ ಮಾಡಿಸಲು ಪಾನ್ ಕಾರ್ಡ್(PAN Card), ಆಧಾರ್ ಕಾರ್ಡ್ (Aadhaar Card), ಮತದಾರರ ಚೀಟಿ(Voter's Identity Card),ಡ್ರೈವಿಂಗ್ ಲೈಸೆನ್ಸ್ (Driving Licence),ನರೇಗಾ ಉದ್ಯೋಗ ಚೀಟಿ, ಪಾಸ್ ಪೋರ್ಟ್( Passport) ಇವೆಷ್ಟರಲ್ಲಿ ಯಾವುದಾದರೊಂದು ಒಂದು ದಾಖಲೆಯನ್ನು ಗುರುತು ಹಾಗೂ ವಿಳಾಸ ದೃಢೀಕರಣಕ್ಕಾಗಿ ನೀವು ಬ್ಯಾಂಕಿಗೆ ನೀಡಬೇಕಾಗುತ್ತದೆ. ಬ್ಯಾಂಕುಗಳಿಗೆ ಕೆವೈಸಿ ಸಲ್ಲಿಕೆ ಮಾಡಲು ಗ್ರಾಹಕರಿಗೆ ಹಲವಾರು ಮಾರ್ಗಗಳಿವೆ. ಉದಾಹರಣೆಗೆ ವಿಡಿಯೋ ಕೆವೈಸಿ, ಡಿಜಿಲಾಕರ್ ಮೂಲಕ ದಾಖಲೆಗಳನ್ನು ಹಂಚಿಕೊಳ್ಳೋ ಅವಕಾಶವಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಂದ ಕೆವೈಸಿ ದಾಖಲೆ ಪಡೆಯಲು ಕರೆ ಮಾಡಿದ್ದೇವೆ ಎಂದು ಹೇಳಿ ಅನೇಕರನ್ನು ವಂಚಿಸಿರೋ ಪ್ರಕರಣಗಳು ನಡೆದಿವೆ. ಹೀಗಾಗಿ ಕೆವೈಸಿಗೆ ಸಂಬಂಧಿಸಿ ಯಾವುದೇ ಕರೆ ಬಂದರೂ ಸರಿಯಾಗಿ ವಿಚಾರಿಸಿ ಆ ಬಳಿಕ ಮಾಹಿತಿ ನೀಡಿ. ಇಲ್ಲವಾದ್ರೆ ನೇರವಾಗಿ ಬ್ಯಾಂಕಿಗೇ ತೆರಳಿ ಮಾಹಿತಿ ನೀಡಿ. ಬ್ಯಾಂಕಿಗೆ ನೇರವಾಗಿ ತೆರಳಿ ಮಾಹಿತಿ ನೀಡೋದು ಹೆಚ್ಚು ಸುರಕ್ಷಿತ ವಿಧಾನವಾಗಿದೆ. 

Follow Us:
Download App:
  • android
  • ios