GST Returns: 2020-21ನೇ ಆರ್ಥಿಕ ಸಾಲಿನ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಗಡುವು ಫೆಬ್ರವರಿ 28ರ ತನಕ ವಿಸ್ತರಣೆ
*ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಈ ಮೊದಲು ಡಿಸೆಂಬರ್ 31 ಅಂತಿಮ ದಿನಾಂಕವಾಗಿತ್ತು
*ಉದ್ಯಮಗಳು ಪ್ರತಿ ವರ್ಷ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಮಾಡೋದು ಕಡ್ಡಾಯ
*ವಾರ್ಷಿಕ 2ಕೋಟಿ ರೂ.ಗಿಂತಲೂ ಅಧಿಕ ವಹಿವಾಟು ನಡೆಸೋ ಉದ್ಯಮಗಳು ವಾರ್ಷಿಕ GST ರಿಟರ್ನ್ಸ್ ಸಲ್ಲಿಸಬೇಕು
ನವದೆಹಲಿ (ಡಿ.30): ಉದ್ಯಮಗಳಿಗೆ 2020-21ನೇ ಆರ್ಥಿಕ ಸಾಲಿನ ವಾರ್ಷಿಕ ಸರಕು ಮತ್ತು ಸೇವಾ ತೆರಿಗೆ (GST) ರಿಟರ್ನ್ಸ್ (returns)ಸಲ್ಲಿಕೆ ಮಾಡೋ ಗಡುವನ್ನು ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಕೇಂದ್ರೀಯ ಮಂಡಳಿ (CBIC) ಫೆಬ್ರವರಿ 28ರ ತನಕ ವಿಸ್ತರಿಸಿದೆ. ಈ ಹಿಂದೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕವಾಗಿತ್ತು. ಟ್ವೀಟ್ ಮೂಲಕ ಸಿಬಿಐಸಿ ಈ ಮಾಹಿತಿ ನೀಡಿದೆ.
ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ನೋಂದಣಿಯಾಗಿರೋ ತೆರಿಗೆದಾರರು ಸಲ್ಲಿಕೆ ಮಾಡೋ ವಾರ್ಷಿಕ ರಿಟರ್ನ್ ಗೆ GSTR-9 ಎಂದು ಕರೆಯಲಾಗುತ್ತದೆ. ವಿವಿಧ ತೆರಿಗೆಗಳಡಿಯಲ್ಲಿ ಖರೀದಿಸಿದ ಹಾಗೂ ಮಾರಾಟ ಮಾಡಿದ ಸರಕು ಅಥವಾ ಸೇವೆಗಳ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. GSTR-9C ಅನ್ನೋದು GSTR-9 ಹಾಗೂ ಅಡಿಟ್ ಆಗಿರೋ ವಾರ್ಷಿಕ ಹಣಕಾಸು ಸ್ಟೇಟ್ ಮೆಂಟ್ ಗಳ ಸಮನ್ವಯವಾಗಿದೆ. ವಾರ್ಷಿಕ 2ಕೋಟಿ ರೂ.ಗಿಂತಲೂ ಅಧಿಕ ವಹಿವಾಟು ನಡೆಸೋ ಉದ್ಯಮಗಳು ವಾರ್ಷಿಕ GST ರಿಟರ್ನ್ಸ್ ಅಂದ್ರೆ GSTR-9 ಸಲ್ಲಿಸೋದು ಕಡ್ಡಾಯ. ಇನ್ನು 5ಕೋಟಿ ರೂ.ಗಿಂತ ಅಧಿಕ ವಹಿವಾಟು ನಡೆಸೋ ಉದ್ಯಮಗಳು ಮಾತ್ರ GSTR-9C ಸಲ್ಲಿಸಬೇಕು.
ITR e-Verification: 2019-20ನೇ ಆರ್ಥಿಕ ಸಾಲಿನ ITR ಇ-ದೃಢೀಕರಣ ಅಂತಿಮ ಗಡುವು ಫೆ.28ಕ್ಕೆ ವಿಸ್ತರಣೆ
46ನೇ ಜಿಎಸ್ ಟಿ ಮಂಡಳಿ ಸಭೆ ಡಿಸೆಂಬರ್ 31ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸಭೆಯು ಡಿಸೆಂಬರ್ 31ರಂದು ಬಜೆಟ್ ಪೂರ್ವಭಾವಿಯಾಗಿ ಕೇಂದ್ರ ವಿತ್ತ ಸಚಿವರೊಂದಿಗೆ ರಾಜ್ಯ ಹಣಕಾಸು ಸಚಿವರುಗಳ ಸಭೆಯ ಮುಂದುವರಿದ ಭಾಗವಾಗಿರುತ್ತದೆ. ಸಚವರುಗಳ ಸಮಿತಿಯು ಸರಕು ಮತ್ತು ಸೇವೆಗಳ ದರಗಳಿಗೆ ಸಂಬಂಧಿಸಿ ಜಿಎಸ್ ಟಿ ಮಂಡಳಿಗೆ ವರದಿ ನೀಡಲಿದೆ.
ಜಿಎಸ್ ಟಿ ಎಂದರೇನು?:
ವಸ್ತುಗಳ ಉತ್ಪಾದನೆ, ಮಾರಾಟ, ಬಳಕೆ ಮತ್ತು ಸೇವೆಗಳ ಮೇಲೆ ವಿಧಿಸೋ ರಾಷ್ಟ್ರೀಯ ಮಟ್ಟದ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯುತ್ತಾರೆ. ಇದು ದೇಶದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ಈ ತೆರಿಗೆಯನ್ನು ವಿಧಿಸಲಾಗುತ್ತದೆ.
ಜನವರಿ 1ರಿಂದ ಜಿಎಸ್ ಟಿ ನಿಯಮ ಬಿಗಿ
ಕೇಂದ್ರೀಯ ಸರಕು ಹಾಗೂ ಸೇವಾ ತೆರಿಗೆ (CGST)ಕಾಯ್ದೆಗೆ ಜನವರಿ 1ರಿಂದ 12 ತಿದ್ದುಪಡಿಗಳನ್ನು(amendments) ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಜಿಎಸ್ ಟಿ ಪದ್ಧತಿಯನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. ದರಲ್ಲಿನ ಒಂದು ತಿದ್ದುಪಡಿ ಪ್ರಕಾರ ವ್ಯಕ್ತಿಯೊಬ್ಬ ವೈಯಕ್ತಿಕವಲ್ಲದೆ ಸದಸ್ಯರಿಗೆ ನಗದು, ಕಂತುಗಳಲ್ಲಿ ಅಥವಾ ಇತರ ಮೌಲ್ಯಯುತ ವಸ್ತುಗಳನ್ನು ವರ್ಗಾವಣೆ ಮಾಡಿದ್ರೆ ಅದನ್ನು ತೆರಿಗೆಯುಕ್ತ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಅದೇರೀತಿ ಸಂಸ್ಥೆಗಳ ಜೊತೆ ಇಂಥ ವಹಿವಾಟು ನಡೆಸಿದ್ರೆ ಕೂಡ ಅದನ್ನು ಇದೇ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಹೀಗಾಗಿ ತಜ್ಞರ ಪ್ರಕಾರ ಇನ್ನು ಮುಂದೆ ಎಲ್ಲ ಕ್ಲಬ್ ಗಳು ಹಾಗೂ ಸಂಘಟನೆಗಳು ತಮ್ಮ ಸದಸ್ಯರ ಜೊತೆ ನಡೆಸೋ ವಹಿವಾಟುಗಳು ಕೂಡ ಜಿಎಸ್ ಟಿ ವ್ಯಾಪ್ತಿಗೊಳಪಡುತ್ತವೆ,
ಇನ್ನೊಂದು ತಿದ್ದುಪಡಿ ಪ್ರಕಾರ ಯಾವುದೇ ಒಂದು ವಸ್ತುವಿನ ಮಾರಾಟಗಾರ ತನ್ನ ಮಾಸಿಕ ಮಾರಾಟ ರಿಟರ್ನ್‌ನಲ್ಲಿ (monthly sales return)ಇನ್ ವಾಯ್ಸ್ (INvoice)ಮಾಹಿತಿ ಬಹಿರಂಗಪಡಿಸದಿದ್ರೆ ಖರೀದಿದಾರ ಆ ವಸ್ತುವಿಗೆ ಪಾವತಿಸಿದ ತೆರಿಗೆ ಮೇಲೆ ಯಾವುದೇ ಕ್ರೆಡಿಟ್(Credit) ಪಡೆಯಲು ಸಾಧ್ಯವಾಗೋದಿಲ್ಲ. ಇನ್ನು ನಿಯಮಗಳನ್ನು ಉಲ್ಲಂಘನೆ ಮಾಡಿ ಸರಕುಗಳನ್ನು ಸಂಗ್ರಹಿಸಿದ ಅಥವಾ ಸಾಗಾಟ ಮಾಡಿದ ಆರೋಪದಲ್ಲಿ ದಾಳಿ ನಡೆಸಿದ ಆಧಿಕಾರಿಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಉದ್ಯಮಗಳು ಶೇ.25ರಷ್ಟು ದಂಡ ವಿಧಿಸೋ ನಿಯಮ ಕೂಡ ಜನವರಿ 1ರಿಂದ ಜಾರಿಗೆ ಬರಲಿದೆ.