ಬೆಂಗಳೂರು [ಡಿ.17]:  ಖೋಟಾ ನೋಟು ಚಲಾವಣೆ ಆರೋಪದ ಮೇರೆಗೆ 32 ಬ್ಯಾಂಕ್‌ಗಳ ವಿರುದ್ಧವೇ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಪೊಲೀಸ್‌ ಠಾಣೆಗೆ ದೂರು ನೀಡಿದೆ.

ಹಾಸನ ಜಿಲ್ಲೆಯ ಕಾರ್ಪೋರೇಷನ್‌ ಬ್ಯಾಂಕ್‌ ಸೇರಿದಂತೆ 32 ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು ನಗರದ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ಇದೇ ವರ್ಷದ ಏ.1ರಿಂದ ಮೇ 31ರ ವರೆಗೆ ನಗರದ ನೃಪತುಂಗ ರಸ್ತೆಯ ಆರ್‌ಬಿಐ ಪ್ರಾದೇಶಿಕ ಕಚೇರಿಗೆ ಹಾಸನ ಕಾರ್ಪೋರೇಷನ್‌ ಬ್ಯಾಂಕ್‌ ಸೇರಿದಂತೆ 32 ಬ್ಯಾಂಕ್‌ಗಳು ಹಣ ಸಂದಾಯ ಮಾಡಿದ್ದವು. ಈ ಹಣವನ್ನು ಆರ್‌ಬಿಐ ಅಧಿಕಾರಿಗಳು ಪರಿಶೀಲಿಸಿದಾಗ .100 ಮುಖಬೆಲೆಯ 512 ಖೋಟಾ ನೋಟುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಗಲು -ರಾತ್ರಿ ವಹಿವಾಟು: NEFT ಇನ್ಮುಂದೆ ಬೊಂಬಾಟು!...

ಬಳಿಕ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಆರ್‌ಬಿಐನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಎಚ್‌.ಮಹೇಶ್‌ ಅವರು, ನಕಲಿ ನೋಟುಗಳ ಚಲಾವಣೆ ಕುರಿತು ಆಂತರಿಕ ವಿಚಾರಣೆ ನಡೆಸಿದ್ದಾರೆ. ಆಗ ಹಾಸನ ಕಾರ್ಪೋರೇಷನ್‌ ಬ್ಯಾಂಕ್‌ ಸೇರಿದಂತೆ ಇತರೆ ಬ್ಯಾಂಕ್‌ಗಳ ಠೇವಣಿ ಹಣದಲ್ಲಿ ನಕಲಿ ಹಣ ಪತ್ತೆಯಾಗಿದೆ. 

ಈ ಮಾಹಿತಿ ಮೇರೆಗೆ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು ಹಲಸೂರು ಗೇಟ್‌ ಠಾಣೆಗೆ ಶನಿವಾರ ದೂರು ನೀಡಿದ್ದಾರೆ. ಅದರನ್ವಯ ಪೊಲೀಸರು ಸದರಿ ಬ್ಯಾಂಕ್‌ಗಳ ಮೇಲೆ ಖೋಟಾ ನೋಟು ಚಲಾವಣೆ ಮತ್ತು ಸಂಗ್ರಹಿಸಿದ ಆರೋಪದ ಮೇರೆಗೆ (ಐಪಿಸಿ 489ಸಿ ಹಾಗೂ 489 ಬಿ) ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.