ಬೆಂಗಳೂರು(ನ.2): ಆರ್‌ಬಿಐ ಮತ್ತು ಸರ್ಕಾರದ ನಡುವಿನ ಆಂತರಿಕ ಸಂಘರ್ಷ ತಾರಕಕ್ಕೇರಿದೆ. ಆರ್‌ಬಿಐ ಗವರ್ನರ್ ಅವರ ಕಾರ್ಯವೈಖರಿ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ. 

ಸಾಲದ ಮೇಲಿನ ಬಡ್ಡಿ ದರ ಏರಿಸಲು ಆರ್‌ಬಿಐ ಒಪ್ಪದಿದ್ದುದೇ ಇದಕ್ಕೆ ಕಾರಣ. ಈ ಬಗ್ಗೆ ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್ ಬ್ಲೂಮ್‌ಬರ್ಗ್‌ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಒಳನೋಟಗಳನ್ನು ನೀಡಿದ್ದಾರೆ. ಆಯ್ದ ಭಾಗ ಇಲ್ಲಿದೆ. 

ಪ್ರಶ್ನೆ: ಕಳೆದ 12 ತಿಂಗಳಲ್ಲಿ ಆರ್‌ಬಿಐ ಗವರ್ನರ್ ಸರ್ಕಾರದ ವಿರುದ್ಧ 4 ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಅದು ಸದ್ಯ ವಿಕೋಪಕ್ಕೇರಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಆರ್‌ಬಿಐ ಮತ್ತು ಸರ್ಕಾರದ ನಡುವೆ ಏರ್ಪಟ್ಟಿರುವ ಭಿನ್ನಾಭಿಪ್ರಾಯ ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಕೇಂದ್ರ ಸರ್ಕಾರ, ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಡುವೆ ಉಂಟಾಗಿರುವ ಆಂತರಿಕ ಸಂಘರ್ಷ ಭಾರತದಂತಹ ಅರ್ಥವ್ಯವಸ್ಥೆಯ ಬೆಳವಣಿಗೆಗೆ ತಡೆಯೊಡ್ಡುವಂಥದ್ದು. ಪ್ರಜಾಪ್ರಭುತ್ವದಲ್ಲಿ ವಿಭಿನ್ನ ಅಭಿಪ್ರಾಯಗಳು ಸಾಮಾನ್ಯ, ಆದರೆ ಇಂತಹ ಬೆಳವಣಿಗೆಗಳು ರಿಸರ್ವ್ ಬ್ಯಾಂಕ್‌ನ ಕಾರ್ಯವೈಖರಿಯನ್ನೇ ಧ್ರುವೀಕರಿಸುತ್ತದೆ.

ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಅತ್ಯುನ್ನತ ಬ್ಯಾಂಕ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಹುದು. ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್‌ಗಳು ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಉತ್ತಮ ಸಂಬಂಧ ಕಾಯ್ದುಕೊಳ್ಳಲೇಬೇಕು. ಎರಡೂ ಸಾರ್ವಜನಿಕವಾಗಿ ತಮ್ಮ ಅಸಮಾಧಾನ ಹೊರಹಾಕುವ ಬದಲು ಬೇರೆ ಬೇರೆ ವಿಧಾನಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. 

ಆರ್‌ಬಿಐ ಏಕೆ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ತನ್ನ ಅಸಮಾಧಾನ ಹೊರಹಾಕಿತು ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಮರಸ್ಯದಿಂದ ಕಾರ್ಯನಿರ್ವಹಿಸಬೇಕು.

ಪ್ರಶ್ನೆ: ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್ಆರ್‌ಬಿಎಂ) ವಿಷಯದಲ್ಲಿ ಆರ್‌ಬಿಐಗೆ ಸ್ವಾಯತ್ತೆ ಎಷ್ಟು ಮುಖ್ಯ?

ಇದರಲ್ಲಿ ಎರಡು ವಿಷಯಗಳು ಮುಖ್ಯವಾಗಿವೆ. ಒಂದು ಲಾಭಾಂಶದ ವರ್ಗಾವಣೆ. ಅಂದರೆ ಲಾಭಾಂಶದಲ್ಲಿ ಎಷ್ಟು ಪ್ರಮಾಣ ಸರ್ಕಾರಕ್ಕೆ ಸಲ್ಲಬೇಕು ಎಂಬುದು. ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯಲ್ಲಿ ಅದು ಸ್ಪಷ್ಟವಾಗಿದೆ. ರಿಸರ್ವ್ ಬ್ಯಾಂಕ್‌ನ ಎಲ್ಲ ಆದಾಯವೂ ಸರ್ಕಾರಕ್ಕೇ ವರ್ಗಾವಣೆಯಾಗಬೇಕು. 
ಸದ್ಯ ಇದೇ ವಿಷಯದಲ್ಲಿ ಸಮಸ್ಯೆ ಎದುರಾಗಿದೆ. ಅನೇಕ ವಿಷಯಗಳಲ್ಲಿ ಆರ್‌ಬಿಐ ಸ್ವಾಯತ್ತೆಗೆ ಸಂಬಂಧಪಟ್ಟಂತೆ ಅನಿಶ್ಚಯತೆ ಇದೆ. ವಿದೇಶಿ ವಿನಿಮಯ ಮಾರುಕಟ್ಟೆ, ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆ ಇತ್ಯಾದಿ ವಿಚಾರಗಳಲ್ಲಿ ಆರ್‌ಬಿಐ ರಿಸ್ಕ್ ಎದುರಿಸಬೇಕಾಗುತ್ತದೆ.

ಪ್ರಶ್ನೆ: ಬೇರೆ ದೇಶಗಳ ಕೇಂದ್ರೀಯ ಬ್ಯಾಂಕಿಗೆ ಹೋಲಿಸಿದರೆ ಆರ್‌ಬಿಐ ಬಳಿ ಹೆಚ್ಚು ಬಂಡವಾಳ ಇದೆಯೇ?

ನಮ್ಮ ಕೇಂದ್ರೀಯ ಬ್ಯಾಂಕ್‌ನ ಆಸ್ತಿ ಇನ್ನು ಕೆಲ ಸಮಯದಲ್ಲಿ ಶೇ.೨೦ ಜಿಡಿಪಿಗೆ ಸಮವಾಗಲಿದೆ. ಅಮೆರಿಕದ ಫೆಡರಲ್ ಬ್ಯಾಂಕ್, ಯುರೋಪಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನ ಬ್ಯಾಲೆನ್ಸ್ ಶೀಟ್‌ಗೂ ಇದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಆರ್‌ಬಿಐ ತನ್ನ ಬಂಡವಾಳವನ್ನು ಸರ್ಕಾರಕ್ಕೆ ವರ್ಗಾಯಿಸಬೇಕು ಎಂಬ ವಾದ ನಿಜಕ್ಕೂ ಆಶ್ಚರ್ಯಕರವಾಗಿದೆ.

ಪ್ರಶ್ನೆ: ಪಾವತಿ ನಿಯಂತ್ರಣ ವ್ಯವಸ್ಥೆ ಆರ್‌ಬಿಐ ಅಡಿಯೇ ಇರಬೇಕು ಎಂಬ ಬಗ್ಗೆ ನಿಮ್ಮ ನಿಲುವೇನು?

ಪೇಮೆಂಟ್ ರೆಗ್ಯುಲೇಶನ್ ಆರ್‌ಬಿಐ ಅಡಿಯಲ್ಲಿಯೇ ಇರಬೇಕೆಂಬ ಆರ್‌ಬಿಐ ವಾದವನ್ನು ನಾನು ಒಪ್ಪುತ್ತೇನೆ. ಜಗತ್ತಿನ ಟಾಪ್ 20 ಬ್ಯಾಂಕ್ ಗಳಲ್ಲಿ ಇದು ಬ್ಯಾಂಕುಗಳಡಿಯೇ ಇದೆ. ಅಮೆರಿಕ ಮತ್ತು ಕೆನಡಾದ ಸೆಂಟ್ರಲ್ ಬ್ಯಾಂಕುಗಳು ಮಾತ್ರ ತಮ್ಮದೇ ವ್ಯವಸ್ಥೆಯಡಿ ಪಾವತಿ ವ್ಯವಸ್ಥೆಯನ್ನು ಹೊಂದಿಲ್ಲ. ಕೇಂದ್ರೀಯ ಬ್ಯಾಂಕುಗಳ ಪ್ರಮುಖ ಕಾರ್ಯಚಟುವಟಿಕೆಯೇ ಕರೆನ್ಸಿಯಾಗಿದೆ. 

ಪ್ರಶ್ನೆ: ಪಾವತಿ ಮತ್ತು ಸೆಟಲ್ ಮೆಂಟ್ ಸಿಸ್ಟಮ್ ಕರೆನ್ಸಿಯ ವಿಸ್ತರಣೆ ಅಷ್ಟೆ. ಪಾವತಿ ಅಂದರೆ ಏನು?

ವಿವಿಧ ರೂಪದಲ್ಲಿ ಹಣದ ವರ್ಗಾವಣೆ. ಆದ್ದರಿಂದ, ಇದು ನಮ್ಮ ಆರ್ಥಿಕತೆಯ ಬೆನ್ನೆಲುಬು. ಹಾಗಾಗಿ ಪಾವತಿ ಮತ್ತು ಸೆಟಲ್‌ಮೆಂಟ್ ಸಿಸ್ಟಮ್ ನಿಯಂತ್ರಣವು ಕೇಂದ್ರ ಬ್ಯಾಂಕ್‌ನೊಂದಿಗೇ ಇರಬೇಕು. ಇದರ ಬಗ್ಗೆ ಪ್ರಶ್ನೆಯೇ ಇಲ್ಲ. ಆದರೆ ಅದನ್ನು ಕಸಿದುಕೊಳ್ಳುವ ಇಂತಹ ಯೋಚನೆಗಳು ಬರುವುದಾದರೂ ಎಲ್ಲಿಂದ ಎಂಬುದೇ ಅರ್ಥವಾಗುತ್ತಿಲ್ಲ.

ಪ್ರಶ್ನೆ: ಸರ್ಕಾರದ ನಿರ್ದೇಶನವನ್ನು ಆರ್‌ಬಿಐ ಗವರ್ನರ್ ಒಪ್ಪದಿದ್ದರೆ ಏನಾಗುತ್ತೆ?

1935ರ ಭಾರತೀಯ ರಿಸರ್ವ ಬ್ಯಾಂಕ್ ಕಾಯ್ದೆ ಪ್ರಕಾರ ಆರ್‌ಬಿಐ ಆಡಳಿತ ಮಂಡಳಿಯಲ್ಲಿ ಸರ್ಕಾರದಿಂದ ಒಬ್ಬ ಪ್ರತಿನಿಧಿ ಇದ್ದರು. ಹಣಕಾಸು ಸೇವೆಗಳ ಇಲಾಖೆ ರಚನೆಯಾದ ನಂತರ ಅದಕ್ಕೆ ಇನ್ನೊಬ್ಬ ಸರ್ಕಾರಿ ಪ್ರತಿನಿಧಿಯನ್ನು ಸೇರಿಸಿದರು. ಈಗ ಆರ್‌ಬಿಐನಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು ಇಬ್ಬರು ಪ್ರತಿನಿಧಿಗಳಿದ್ದಾರೆ. ಆದರೆ ಅವರಿಗೆ ಮತ ಹಾಕುವ ಅಧಿಕಾರವಿಲ್ಲ. ಅದು ಕಾಯ್ದೆಯಲ್ಲಿ ಸ್ಪಷ್ಟವಾಗಿದೆ.

ಆದರೆ ಅವರ ಅಭಿಪ್ರಾಯಕ್ಕೆ ಮಂಡಳಿಯು ಪ್ರಾಮುಖ್ಯತೆ ನೀಡಬೇಕು. ಆದರೆ ಸೆಕ್ಷನ್ 7 (1)ರ ಅಡಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಕೆಲ ಮುಖ್ಯ ವಿಷಯಗಳಲ್ಲಿ ಸರ್ಕಾರ ಆರ್‌ಬಿಐಗೆ ನಿರ್ದೇಶನಗಳನ್ನು ನೀಡಬಹುದು. ಆ ನಿರ್ದೇಶನಗಳನ್ನು ಗವರ್ನರ್ ಒಪ್ಪದಿದ್ದಲ್ಲಿ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಇದುವರೆಗೂ ಅಂತಹ ಪ್ರಕರಣಗಳು ನಡೆದಿಲ್ಲ.

ಪ್ರಶ್ನೆ: ಕೇಂದ್ರೀಯ ಬ್ಯಾಂಕ್ ಸ್ವಾಯತ್ತೆ ಮತ್ತು ಸರ್ಕಾರದ ಹಸ್ತಕ್ಷೇಪದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಕೇಂದ್ರೀಯ ಬ್ಯಾಂಕುಗಳ ಸ್ವಾಯತ್ತೆ ಬಗ್ಗೆ ಅಭಿಪ್ರಾಯ ವೈರುಧ್ಯಗಳಿವೆ. ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್ ನಡುವಣ ಸಂಬಂಧದ ವಿಚಾರದಲ್ಲಿ ನನ್ನ ಅಭಿಪ್ರಾಯ ಏನೆಂದರೆ, ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಅದರಲ್ಲೂ ಭಾರತದಲ್ಲಿ ಸರ್ಕಾರದ ನಿಯಂತ್ರಣದಿಂದ ರಿಸರ್ವ್ ಬ್ಯಾಂಕ್‌ಗೆ ಸ್ವಾಯತ್ತೆ ಇರಬೇಕಾದುದು ಮುಖ್ಯ. 

ಸಂಸ್ಥೆಯೊಂದರ ಸ್ವಾಯತ್ತೆಯು ಅದರ ಶಕ್ತಿ ಮತ್ತು ಕಾರ್ಯಚಟುವಟಿಕೆಯನ್ನು ಪ್ರಭಾವಿಸುತ್ತದೆ. ಇದರ ನಡುವೆ ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಸರ್ಕಾರ ಮತ್ತು ಆರ್‌ಬಿಐ ನಡುವೆ ಸಾಮರಸ್ಯವೂ ಇರಬೇಕು. ಅಲ್ಲಿ ಅಸಮಾಧಾನಗಳು ಬರಬಹುದು, ಆದರೆ ಅದನ್ನು ಸಾರ್ವಜನಿಕವಾಗಿ ಹೊರಗೆಡಹುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅದನ್ನು ಖಾಸಗಿಯಾಗಿ ಪರಿಹರಿಸಿಕೊಳ್ಳಬೇಕು.

ಪ್ರಶ್ನೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂದಿನಿಂದಲೂ ತನ್ನ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಆದರೆ ಇತ್ತೀಚೆಗೆ ವಸೂಲಾಗದ ಸಾಲ, ಬ್ಯಾಂಕ್ ಅಕ್ರಮಗಳು ಹೆಚ್ಚುತ್ತಿವೆ. ಇವೆಲ್ಲದರ ನಡುವೆಯೂ ಆರ್‌ಬಿಐ ತನ್ನತನವನ್ನು ಉಳಿಸಿಕೊಂಡು ಹಿಂದಿನಂತೆಯೇ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸಾಬೀತು ಮಾಡಲು ಆರ್‌ಬಿಐ ಏನು ಮಾಡಬೇಕು?

ಸದ್ಯ ಆರ್‌ಬಿಐ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಏಷ್ಯಾದ ಆರ್ಥಿಕ ಬಿಕ್ಕಟ್ಟು, ಜಾಗತಿಕ ಆರ್ಥಿಕ ಬಿಕ್ಕಟ್ಟು ಇತ್ಯಾದಿ ಸವಾಲುಗಳ ಜೊತೆಗೆ 2013ರಿಂದೀಚೆಗೆ ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಿದೆ. ಕೆಟ್ಟ ಸಾಲ ಮತ್ತು ಬ್ಯಾಂಕಿಂಗ್ ವಂಚನೆ ಪ್ರಕರಣಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ಹಾಗಾಗಿ ಆರ್‌ಬಿಐ ತನ್ನ ರೆಗ್ಯುಲೇಟರಿ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಬೇಕು. 

ಆರ್‌ಬಿಐನ ನಿಯಂತ್ರಣ ವ್ಯವಸ್ಥೆಗಳು ಮತ್ತಷ್ಟು ಆಧುನೀಕರಣಗೊಳ್ಳಬೇಕು. ಕಳೆದ 20 ವರ್ಷಗಳಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ಏರುಗತಿಯಲ್ಲಿದೆ. ಆದರೆ ಇನ್ನೂ ಆರ್‌ಬಿಐನ ತಾಂತ್ರಿಕ ಮತ್ತು ವೃತ್ತಿಪರ ಸಾಮರ್ಥ್ಯ ಆಮೆ ನಡಿಗೆಯಲ್ಲಿದೆ. ದೇಶದ ಬ್ಯಾಂಕಿಂಗ್ ಮತ್ತು ಆರ್ಥಿಕ ವಲಯದಲ್ಲಿ ಸಂಕೀರ್ಣತೆ ತಲೆದೋರುತ್ತಿದೆ. 

ಹಾಗಾಗಿ ಬ್ಯಾಂಕಿಂಗ್ ವ್ಯವಸ್ಥೆಯ ವೃತ್ತಿಪರ ಸಿಬ್ಬಂದಿ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಗಂಭೀರ ಹಾಗೂ ಕೂಲಂಕಷ ಮರುಪರಿಶೀಲನೆಯ ಅಗತ್ಯವಿದೆ.