ನವದೆಹಲಿ(ಸೆ.3): ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, 2017-18 ರ ಆರ್ಥಿಕ ವರ್ಷದಲ್ಲಿ ಒಟ್ಟು 8.4 ಮೆಟ್ರಿಕ್ ಟನ್ ಚಿನ್ನ ಶೇಖರಣೆ ಮಾಡಿದೆ ಎಂದು ತಿಳಿದು ಬಂದಿದೆ.

ಸದ್ಯ ಆರ್‌ಬಿಐ ನಲ್ಲಿ ಒಟ್ಟು 566.23 ಮೆಟ್ರಿಕ್ ಟನ್ ಚಿನ್ನದ ಶೇಖರಣೆ ಇದ್ದು, 10 ವರ್ಷಗಳಲ್ಲೇ ದಾಖಲೆಯ ಚಿನ್ನ ಶೇಖರಣೆ ಮಾಡಿದೆ. 2009 ರಲ್ಲಿ ಐಎಂಎಫ್ ನಿಂದ 200 ಮೆಟ್ರಿಕ್ ಟನ್ ಚಿನ್ನ ಖರೀದಿ ಮಾಡಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ಆರ್‌ಬಿಐ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏಕರೂಪವಾಗಿರುವುದರಿಂದ, ವಾಣಿಜ್ಯ ಮತ್ತು ಇತರೆ ಉದ್ದೇಶಗಳಿಗಾಗಿ ಚಿನ್ನವನ್ನು ಬಳಸಿಕೊಳ್ಳುವ ಸಲುವಾಗಿ ಚಿನ್ನ ಶೇಖರಣೆ ಅಗತ್ಯ ಎಂದು ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ 10 ಬಿಲಿಯನ್ ಯುಎಸ್ ಡಾಲರ್ ನಷ್ಟು ಚಿನ್ನವನ್ನು ಅಮೆರಿಕಕ್ಕೆ ವರ್ಗಾಯಿಸಲಾಗಿದ್ದು, ಚಿನ್ನದ ಮುಖಾಂತರ ನಡೆಯುವ ಅಂತರಾಷ್ಟ್ರೀಯ ವ್ಯಾಪಾರದಲ್ಲೂ ವೃದ್ಧಿಯಾಗಿದೆ ಎಂದು ಆರ್‌ಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.