RBI Guidelines: ಇಂಟರ್ನೆಟ್ ಇಲ್ಲದ ಮೊಬೈಲ್ ಬಳಸಿ ದಿನಕ್ಕೆ 2000 ರು. ಕಳಿಸಿ!
* ಹೊಸ ಯೋಜನೆಗೆ ಆರ್‌ಬಿಐನಿಂದ ಮಾರ್ಗಸೂಚಿ ಬಿಡುಗಡೆ
* ನೆಟ್ ಇಲ್ಲದ ಮೊಬೈಲ್ ಬಳಸಿ ಇನ್ನು ದಿನಕ್ಕೆ 2000 ರು. ಕಳಿಸಿ
* ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಪಾವತಿ ಉತ್ತೇಜನಕ್ಕೆ ಬಲ
ಮುಂಬೈ(ಜ.04): ಅಂತರ್ಜಾಲ ಸಂಪರ್ಕ ಇಲ್ಲದೆಡೆ ಫೀಚರ್ ಫೋನ್‌ಗಳ ಮೂಲಕವೇ ಆನ್‌ಲೈನ್ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸುವ ಆಫ್‌ಲೈನ್ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಅನುಮೋದನೆ ನೀಡಿದೆ. ಯೋಜನೆ ಜಾರಿ ಸಂಬಂಧ ಅದು ಹಲವು ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ದೇಶದ ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ಡಿಜಿಟಲ್ ಪಾವತಿಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಈ ಆಫ್‌ಲೈನ್ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮತ್ತಷ್ಟುಬಲತುಂಬಲಿದೆ.
ನೆಟ್ ಬೇಕಿಲ್ಲ:
ಈ ಯೋಜನೆಯಡಿ ಅಗ್ಗದ ಮೊಬೈಲ್ ಅಂದರೆ ಫೀಚರ್ ಫೋನ್, ಕಾರ್ಡ್, ವ್ಯಾಲೆಟ್ ಬಳಸಿ ಒಂದು ಬಾರಿಗೆ ಗರಿಷ್ಠ 200 ರು.ನಂತೆ ಒಂದು ದಿನಕ್ಕೆ ಗರಿಷ್ಠ 2000 ರು. ಹಣ ವರ್ಗಾವಣೆ ಮಾಡಬಹುದು. ಎಸ್‌ಎಂಎಸ್, ಕ್ಯುಆರ್ ಕೋಡ್ ಬಳಸಿ ಈ ರೀತಿ ಹಣ ವರ್ಗಾವಣೆ ಮಾಡಬಹುದಾಗಿದೆ. ಜೊತೆಗೆ ಈ ರೀತಿಯ ಹಣ ವರ್ಗಾವಣೆಗೆ ಹೆಚ್ಚುವರಿ ಖಾತ್ರಿಯ ಅವಶ್ಯಕತೆಯೂ ಇರದು.
ಏನಿದು ಯೋಜನೆ?:
ಈಗಿರುವ ಯುಪಿಐ, ಆರ್‌ಟಿಜಿಎಸ್, ನೆಫ್ಟ್ ಸೇರಿದಂತೆ ಇನ್ನಿತರೆ ಮಾರ್ಗಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಮೊಬೈಲ್ ಬಳಸಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಲು ಇಂಟರ್ನೆಟ್ ಸಂಪಕ ಅವಶ್ಯಕ. ಆದರೆ ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಸಂಪರ್ಕ ಇಲ್ಲದ ಕಾರಣ, ಆ ಭಾಗದ ಜನತೆ ಡಿಜಿಟಲ್ ಪಾವತಿಯಿಂದ ವಂಚಿತರಾಗಿದ್ದರು. ಹೀಗಾಗಿ ಈ ಜನರನ್ನೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲು ಕೇಂದ್ರ ಸರ್ಕಾರ ಆಫ್‌ಲೈನ್ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಮುಂದಾಗಿತ್ತು. ಕಳೆದ ವರ್ಷವೇ ದೇಶದ ಹಲವು ನಗರಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅಲ್ಲಿ ಸಿಕ್ಕ ಯಶಸ್ಸನ್ನು ಆಧರಿಸಿ ಇದೀಗ ದೇಶವ್ಯಾಪಿ ಯೋಜನೆ ಜಾರಿಗೆ ಆರ್‌ಬಿಐ ಮುಂದಾಗಿದೆ