ಮುಂಬೈ(ಆ.07): ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ಆರ್ಥಿಕತೆಗೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಹಾಗೂ ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಇನ್ನಷ್ಟು ಉತ್ತೇಜನಾ ಕ್ರಮಗಳನ್ನು ಪ್ರಕಟಿಸಿದೆ. 

ಕೃಷಿಯೇತರ ಉದ್ದೇಶಗಳಿಗಾಗಿ ಚಿನ್ನ ಮತ್ತು ಚಿನ್ನಾಭರಣಗಳನ್ನು ಒತ್ತೆ ಇಟ್ಟು ಪಡೆಯುವ ಸಾಲದ ಮಿತಿಯನ್ನು ಶೇ.90ಕ್ಕೆ ಏರಿಕೆ ಮಾಡಿದೆ. ಈ ಹಿಂದೆ ಚಿನ್ನದ ಮಾರುಕಟ್ಟೆಮೌಲ್ಯದ ಶೇ.75ರಷ್ಟು ಮಾತ್ರ ಸಾಲ ಸಿಗುತ್ತಿತ್ತು. ಈಗ ಮಾರುಕಟ್ಟೆ ಮೌಲ್ಯಕ್ಕೆ ಸರಿಸಮನಾಗಿ, ಅಂದರೆ ಚಿನ್ನದ ಮೌಲ್ಯದ ಶೇ.90 ರಷ್ಟು ಸಾಲ ನೀಡಬಹುದು ಎಂದು ಮಿತಿ ಏರಿಕೆ ಮಾಡಿದೆ. ಇದು 2021ರ ಮಾರ್ಚ್ 31ರವರೆಗೆ ಅನ್ವಯಿಸಲಿದೆ.

ಬಡ್ಡಿ ದರ ಯಥಾಸ್ಥಿತಿ: ಗುರುವಾರ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸಾಲಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಿಸದೆ ಇರಲು ನಿರ್ಧರಿಸಲಾಗಿದೆ. ಅಂದರೆ, ರೆಪೋ ದರ ಈ ಹಿಂದಿನಂತೆಯೇ ಶೇ.4 ಹಾಗೂ ರಿವರ್ಸ್‌ ರೆಪೋ ದರ ಶೇ.3.35 ಇರಲಿದೆ. ಈ ವರ್ಷದ ಫೆಬ್ರವರಿ ನಂತರ ಆರ್‌ಬಿಐ ಶೇ.1.15ರಷ್ಟುರೆಪೋ ದರ ಇಳಿಕೆ ಮಾಡಿತ್ತು. ಇದರಿಂದಾಗಿ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರ ಸಾಕಷ್ಟುಇಳಿಕೆಯಾಗಿತ್ತು.

ಕೊರೋನಾ: ಕರ್ನಾಟಕ ಸೇರಿ 22 ರಾಜ್ಯಕ್ಕೆ 890 ಕೋಟಿ ರುಪಾಯಿ ಬಿಡುಗಡೆ

ಗೃಹ ನಿರ್ಮಾಣ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಉತ್ತೇಜನ ನೀಡಲು 10,000 ಕೋಟಿ ರು. ಹೆಚ್ಚುವರಿ ವಿಶೇಷ ನೆರವು ನೀಡಲು ನಿರ್ಧರಿಸಿದೆ. ಅಲ್ಲದೆ, ಇನ್ನು, ಕಾರ್ಪೊರೇಟ್‌ ಸಂಸ್ಥೆಗಳಿಗೆ ಹಾಗೂ ಕಿರು, ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳಿಗೆ (ಎಂಎಸ್‌ಎಂಇ) ನೀಡಿರುವ ಸಾಲವನ್ನು ಮರುಹೊಂದಾಣಿಕೆ ಮಾಡಲು ಸಾಲ ನೀಡಿಕೆದಾರರಿಗೆ ಅವಕಾಶ ನೀಡಿದೆ.

ಈ ಎಲ್ಲ ಕ್ರಮಗಳಿಂದ ಸದ್ಯ ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಬೀಳಲಿದೆ. ಅಭಿವೃದ್ಧಿಯ ದರ ಸುಧಾರಣೆಯಾಗುವವರೆಗೆ ಹಾಗೂ ಕೊರೋನಾ ವೈರಸ್‌ನ ಆರ್ಥಿಕ ದುಷ್ಪರಿಣಾಮಗಳು ನಿಯಂತ್ರಣಕ್ಕೆ ಬರುವವರೆಗೆ ಆರ್‌ಬಿಐ ಇದೇ ರೀತಿಯ ಹೊಂದಾಣಿಕೆಗಳಿಗೆ ಸಿದ್ಧವಿದೆ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ಇಂಟರ್ನೆಟ್‌ ಇಲ್ಲದಿದ್ದರೂ ಆನ್‌ಲೈನ್‌ ಪಾವತಿ

ಕಾರ್ಡ್‌ ಹಾಗೂ ಮೊಬೈಲ್‌ ಫೋನ್‌ಗಳ ಮೂಲಕ ಸಣ್ಣ ಮೊತ್ತದ ಹಣವನ್ನು ಇಂಟರ್ನೆಟ್‌ ಇಲ್ಲದೆಯೇ ವರ್ಗಾವಣೆ ಮಾಡುವ ಹೊಸ ವ್ಯವಸ್ಥೆ ಜಾರಿಗೊಳಿಸಲು ಆರ್‌ಬಿಐ ಪ್ರಾಯೋಗಿಕ ಯೋಜನೆ ರೂಪಿಸಿದೆ. ಇಂಟರ್ನೆಟ್‌ ಇಲ್ಲದ ಅಥವಾ ಬಹಳ ಕಡಿಮೆ ವೇಗದ ಇಂಟರ್ನೆಟ್‌ ಇರುವ ಪ್ರದೇಶದಲ್ಲಿ ಡಿಜಿಟಲ್‌ ಪಾವತಿಗೆ ಇರುವ ಸಮಸ್ಯೆಯನ್ನು ಪರಿಹರಿಸಲು ಈ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಶೀಘ್ರವೇ ನೀಡಲಾಗುತ್ತದೆ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ಮತ್ತಷ್ಟು ಸುಧಾರಣಾ ಕ್ರಮಗಳು

- ಉದ್ದಿಮೆ ಸಾಲ ಮತ್ತು ಖಾಸಗಿ ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಹೊಸ ವ್ಯವಸ್ಥೆ.

- ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಿಂದ ಸಾಲ ಪಡೆದ ಗ್ರಾಹಕರಿಗೆ ಚಾಲ್ತಿ ಖಾತೆ ಮತ್ತು ಓವರ್‌ಡ್ರಾಫ್ಟ್‌ ಖಾತೆ ತೆರೆಯಲು ಸುರಕ್ಷತಾ ಕ್ರಮ.

- ಆದ್ಯತಾ ವಲಯದ ಸಾಲ ಸ್ಟಾರ್ಟಪ್‌ಗಳಿಗೂ ವಿಸ್ತರಣೆ.

- ಸೋಲಾರ್‌ ಸೇರಿದಂತೆ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ, ಸಣ್ಣ ಮತ್ತು ಮಧ್ಯಮ ರೈತರಿಗೆ ಹಾಗೂ ದುರ್ಬಲ ವರ್ಗದವರಿಗೆ ನೀಡುವ ಆದ್ಯತಾ ಸಾಲದ ಮಿತಿ ಹೆಚ್ಚಳ.

- ಡಿಜಿಟಲ್‌ ಪಾವತಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಆನ್‌ಲೈನ್‌ನಲ್ಲೇ ವ್ಯವಸ್ಥೆ.

- ಕೃಷಿ ಕ್ಷೇತ್ರಕ್ಕೆ ನಬಾರ್ಡ್‌ನಿಂದ 5000 ಕೋಟಿ ರು. ಹೆಚ್ಚುವರಿ ಸಾಲ.

ಚಿನ್ನ ಖರೀದಿಸಲು, ಇದು ಸೂಕ್ತ ಸಮಯನಾ? ಟಿ.ಎ. ಶರವಣ ಏನಂತಾರೆ ನೋಡೋಣ...

"