ನವದೆಹಲಿ(ಆ.07): ಮಹಾಮಾರಿ ಕೊರೋನಾ ವೈರಸ್‌ ವಿರುದ್ಧದ ಹೋರಾಟಕ್ಕಾಗಿ ಕರ್ನಾಟಕ ಸೇರಿದಂತೆ ದೇಶದ 22 ರಾಜ್ಯಗಳಿಗೆ ಕೇಂದ್ರ ಸರ್ಕಾರ 2ನೇ ಕಂತಿನಲ್ಲಿ 890 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಒಟ್ಟು ಕೊರೋನಾ ಸೋಂಕಿತರಿಗೆ ಅನುಗುಣವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 890.32 ಕೋಟಿ ರುಪಾಯಿ ಕೊರೋನಾ ನಿಯಂತ್ರಣ ಮೊತ್ತವು ಸೋಂಕು ಪತ್ತೆ ಹಾಗೂ ನಿರ್ವಹಣೆಗೆ ಅಗತ್ಯವಿರುವ ಆರ್‌ಟಿ-ಪಿಸಿಆರ್‌ ಯಂತ್ರ, ಆರ್‌ಎನ್‌ಎ ಕಿಟ್‌ಗಳು, ಟ್ರ್ಯೂನಾಟ್‌ ಮತ್ತು ಸಿಬಿ-ನ್ಯಾಟ್‌ ಯಂತ್ರಗಳು, ಐಸಿಯು ಬೆಡ್‌ಗಳು ಹಾಗೂ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಸೇರಿ ಇನ್ನಿತರರ ತರಬೇತಿಗೂ ಬಳಕೆಯಾಗಲಿದೆ ಎನ್ನಲಾಗಿದೆ.

'ಕೊರೋನಾ ಸಮರದಲ್ಲಿ ನಾವು ಕೊಂಚ ಎಡವಿರಬಹುದು, ಆದ್ರೆ ವಿಪಕ್ಷಗಳೇನು ಮಾಡಿದೆ?'

ಕೊರೋನಾ ನಿಯಂತ್ರಣ ಹಾಗೂ ನಿರ್ವಹಣೆಯ ಹೊಣೆಯನ್ನು ಹೊತ್ತಿರುವ ಕೇಂದ್ರ ಸರ್ಕಾರವು ಈ ಕುರಿತಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಿರುವ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಅಲ್ಲದೆ, ಇದಕ್ಕಾಗಿ 15000 ಕೋಟಿ ರು. ಪ್ಯಾಕೇಜ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. ಈ ಪ್ರಕಾರ ಏಪ್ರಿಲ್‌ ತಿಂಗಳಲ್ಲಿ ಕೊರೋನಾ ಪರೀಕ್ಷೆಗೆ ಅಗತ್ಯವಿರುವ ಪರಿಕರಗಳ ಖರೀದಿಗೆ ಮೊದಲ ಹಂತದಲ್ಲಿ 3,000 ಕೋಟಿ ರು. ಪ್ಯಾಕೇಜ್‌ ಅನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿತ್ತು.