ನನ್ನ ಜೀವಿತಾವಧಿಯ ಕೊನೆಯ ವರ್ಷಗಳು ಆರೋಗ್ಯ ಕ್ಷೇತ್ರದ ಸೇವೆಗೆ ಮೀಸಲು: ರತನ್ ಟಾಟಾ
*ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಸ್ಸಾಂನಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಸ್ಥಾಪನೆಗೆ ಟಾಟಾ ಟ್ರಸ್ಟ್ ನೆರವು.
*ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅಸ್ಸಾಂನಲ್ಲಿ ಹಲವು ಕ್ಯಾನ್ಸರ್ ಆಸ್ಪತ್ರೆಗಳಿಗೆ ಶಿಲಾನ್ಯಾಸ ನೇರವೇರಿಸಿದ ರತನ್ ಟಾಟಾ.
*ರತನ್ ಟಾಟಾ ಅವರಿಗೆ ಇತ್ತೀಚೆಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಅಸ್ಸಾಂ ಬೈಭವ್' ನೀಡಿ ಗೌರವ.
ನವದೆಹಲಿ (ಏ.29): ತನ್ನ ಜೀವಿತಾವಧಿಯ ಕೊನೆಯ ವರ್ಷಗಳನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವುದಾಗಿ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಅಸ್ಸಾಂನಲ್ಲಿ ಹಲವು ಕ್ಯಾನ್ಸರ್ ನೂತನ ಆಸ್ಪತ್ರೆಗಳಿಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡುವ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಅಸ್ಸಾಂ ರಾಜ್ಯಕ್ಕೆ ಒಂದು ಗುರುತು ನೀಡುವ ಜೊತೆಗೆ ಎಲ್ಲರೂ ಗುರುತಿಸುವಂತೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ರತನ್ ಟಾಟಾ ಸರ್ಕಾರವನ್ನು ಒತ್ತಾಯಿಸಿದರು. ಇನ್ನು ಕ್ಯಾನ್ಸರ್ ರೋಗದ ಕುರಿತು ಮಾತನಾಡಿದ ಅವರು, 'ಕ್ಯಾನ್ಸರ್ ಶ್ರೀಮಂತ ವ್ಯಕ್ತಿಯ ಕಾಯಿಲೆಯಲ್ಲ. ಅಸ್ಸಾಂ ಚರಿತ್ರೆಯಲ್ಲಿ ಇದು ಅತ್ಯಂತ ಮಹತ್ವದ ದಿನವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ರಾಜ್ಯದಲ್ಲಿ ಈ ಹಿಂದೆ ಇರದ ಉನ್ನತ ಮಟ್ಟದ ಆರೋಗ್ಯ ಸಂರಕ್ಷಣೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ' ಎಂದು ಹೇಳಿದರು.
Mark Zuckerberg Net Worth : 9 ತಿಂಗಳಲ್ಲಿ ಅರ್ಧಕ್ಕರ್ಧ ಸಂಪತ್ತು ಕಳೆದುಕೊಂಡ ಮಾರ್ಕ್ ಜುಕರ್ ಬರ್ಗ್!
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 7 ಕ್ಯಾನ್ಸರ್ ಕೇರ್ ಸೆಂಟರ್ ಗಳನ್ನು ಉದ್ಘಾಟಿಸಿದರು. ಇದರೊಂದಿಗೆ 7 ಕ್ಯಾನ್ಸರ್ ಆಸ್ಪತ್ರೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ರಾಜ್ಯ ಸರ್ಕಾರ ಹಾಗೂ ಟಾಟಾ ಟ್ರಸ್ಟ್ ಜಂಟಿ ಸಹಭಾಗಿತ್ವದಲ್ಲಿ ಅಸ್ಸಾಂ ಕ್ಯಾನ್ಸರ್ ಕೇರ್ ಫೌಂಡೇಷನ್ (ACCF) ಈ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದೆ.
ಈ ಕ್ಯಾನ್ಸರ್ ಕೇರ್ ಕೇಂದ್ರಗಳ ಸ್ಥಾಪನೆಯ ಹಿಂದಿನ ಸಂಘಟಿತ ಪರಿಶ್ರಮದ ಬಗ್ಗೆಯೂ ರತನ್ ಟಾಟಾ ಈ ಸಂದರ್ಭದಲ್ಲಿ ವಿವರಿಸಿದರು.
ಅಸ್ಸಾಂ ಬೈಭವ್ ಗೌರವ
ರತನ್ ಟಾಟಾ ಅವರಿಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಅಸ್ಸಾಂ ಬೈಭವ್' ಅನ್ನು ಅಲ್ಲಿನ ಮುಖ್ಯಮಂತ್ರಿ ಫೆಬ್ರುವರಿ 16ರಂದು ನೀಡಿ ಗೌರವಿಸಿದ್ದರು. ಒಬ್ಬ ಉದ್ಯಮಿ ಹಾಗೂ ಸಾಮಾಜಸೇವಕನಾಗಿ ರತನ್ ಟಾಟಾ ಅವರು ಅಸ್ಸಾಂನಲ್ಲಿ ಕ್ಯಾನ್ಸರ್ ಕೇರ್ ಕೇಂದ್ರಗಳ ಸ್ಥಾಪನೆಗೆ ವಿಶೇಷ ಕೊಡುಗೆ ನೀಡಿದ್ದಾರೆ. 'ಅಸ್ಸಾಂ ಬೈಭವ್' ಪ್ರಶಸ್ತಿ ಪ್ರಮಾಣಪತ್ರ, ಪದಕ ಹಾಗೂ 5ಲಕ್ಷ ರೂ. ನಗದನ್ನು ಒಳಗೊಂಡಿದೆ.
ದಾಖಲೆ ಮೊತ್ತಕ್ಕ ಜೀವನಚರಿತ್ರೆ ಮಾರಾಟ
ರತನ್ ಟಾಟಾ ಅವರ ಜೀವನ ಚರಿತ್ರೆಯನ್ನು ಹಾರ್ಪರ್ ಕಾಲಿನ್ಸ್ ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದೆ. ಸಂಪೂರ್ಣ ನೈಜ ಅಂಶಗಳನ್ನು ಒಳಗೊಂಡ ನಾನ್-ಫಿಕ್ಷನ್ ಜೀವನಚರಿತ್ರೆಯನ್ನು ಕೇರಳ ಮೂಲದ ಮಾಜಿ ಅಧಿಕಾರಿ ಐಎಎಸ್ ಥಾಮಸ್ ಮ್ಯಾಥ್ಯೂ ಬರೆದಿದ್ದು, ಜಾಗತಿಕ ಹರಾಜಿನಲ್ಲಿ ಇದನ್ನು ಖರೀದಿಸುವಲ್ಲಿ ಹಾರ್ಪರ್ ಕಾಲಿನ್ಸ್ ಯಶಸ್ವಿಯಾಗಿದೆ. ಭಾರತೀಯ ಕೈಗಾರಿಕಾ ಕ್ಷೇತ್ರದ ಅತ್ಯಂತ ಪ್ರಸಿದ್ಧ ಮುಖವಾಗಿರುವ ರತನ್ ಟಾಟಾ ಅವರ ಪುಸ್ತಕವನ್ನು ಪ್ರಕಟಿಸುವ ಹಕ್ಕು ಇನ್ನು ಹಾರ್ಪರ್ ಕಾಲಿನ್ಸ್ ಗೆ ಇರಲಿದೆ. ಈ ಪುಸ್ತಕದಲ್ಲಿ ರತನ್ ಟಾಟಾ ಅವರ ಬಾಲ್ಯ, ಕಾಲೇಜು ದಿನಗಳು ಹಾಗೂ ಆರಂಭಿಕ ದಿನಗಳಲ್ಲಿ ಅವರಿಗೆ ಪ್ರಭಾವ ಬೀರಿದ ವ್ಯಕ್ತಿಗಳ ಕುರಿತಾದ ವಿವರಗಳನ್ನು ಒಳಗೊಂಡಿರುತ್ತದೆ.
LIC IPO ದಿನಾಂಕ ಘೋಷಣೆ ಆಗುತ್ತಿದ್ದಂತೆ GMP ಭರ್ಜರಿ ಏರಿಕೆ!
ಬಹು ವರ್ಷಗಳಿಂದ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರ ಖಾಸಗಿ ಪತ್ರಗಳು, ಛಾಯಾಚಿತ್ರಗಳು ಕುರಿತಾದ ಮಾಹಿತಿಯನ್ನು ಹೊಂದಿದ್ದ ಮ್ಯಾತ್ಯೂ, ಟಾಟಾ ಮೋಟಾರ್ಸ್ (Tata Motars) ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ಅಗ್ಗದ ಕಾರು ನ್ಯಾನೋ (Nano)ತಯಾರಿಕೆ, ಟಾಟಾ ಸ್ಟೀಲ್ (Tata Steel)ಮತ್ತು ಕೋರಸ್ ಅನ್ನು ಸ್ವಾಧೀನಪಡಿಸಿಕೊಂಡಂಥ ಇತ್ತೀಚಿನ ಘಟನೆಗಳನ್ನೂ ಇದರಲ್ಲಿ ದಾಖಲಿಸಿದ್ದಾರೆ. ಅದರೊಂದಿಗೆ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ವಿವಾದಾತ್ಮಕ ನಿರ್ಗಮನದ ವಿಚಾರವೂ ಈ ಪುಸ್ತಕದಲ್ಲಿದೆ. ಹಾರ್ಪರ್ ಕಾಲಿನ್ಸ್ ಅಂದಾಜು 2 ಕೋಟಿಗೆ ಬಿಡ್ ಗೆದ್ದಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.