ಟಾಟಾ ಇಂಡಿಕಾ ಕಾರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ; 25 ವರ್ಷಗಳ ಹಳೆಯ ನೆನಪು ಹಂಚಿಕೊಂಡ ರತನ್ ಟಾಟಾ
ಟಾಟಾ ಇಂಡಿಕಾ ಕಾರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅನೇಕ ಭಾರತೀಯ ಕುಟುಂಬಗಳ ಮೊದಲ ಕಾರು ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಪ್ರಸ್ತುತ ಟಾಟಾ ಇಂಡಿಕಾ ಕಾರ್ ಉತ್ಪಾದನೆ ಸ್ಥಗಿತಗೊಂಡಿದ್ದರೂ ಅದರ ನನೆಪು ಭಾರತೀಯರ ಮನಸ್ಸಿನಲ್ಲಿ ಇನ್ನೂ ಹಚ್ಚಹಸಿರು. ರತನ್ ಟಾಟಾ ಕೂಡ ಟಾಟಾ ಇಂಡಿಕಾದ 25ನೇ ವರ್ಷಾಚರಣೆ ನೆನಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಇದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನವದೆಹಲಿ (ಜ.15): ರತನ್ ಟಾಟಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಭಾರತೀಯರಿಗೆ ಅವರ ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ಟಾಟಾ ಸನ್ಸ್ ಚೇರ್ಮನ್ ರತನ್ ಟಾಟಾ ಸಂಸ್ಥೆಗೆ ಹೊಸ ರೂಪ ಕೊಡುವ ಮೂಲಕ ಉದ್ಯಮ ಸಾಮ್ರಾಜ್ಯವನ್ನು ವಿವಿಧ ವಲಯಗಳಿಗೆ ವಿಸ್ತರಿಸಿರೋದು ಮಾತ್ರವಲ್ಲ, ಸಾಮಾಜಿಕ ಕಾರ್ಯಗಳು, ಕರುಣೆ ಹಾಗೂ ಮಾನವೀಯ ಕಾರ್ಯಗಳ ಮೂಲಕವೂ ಜನರ ಮನ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಅಭಿಮಾನಿಗಳ ಬಹುದೊಡ್ಡ ಬಳಗವೇ ಇದೆ. ಅವರೊಂದಿಗೆ ರತನ್ ಟಾಟಾ ಆಗಾಗ ಅನೇಕ ಥ್ರೋಬ್ಯಾಕ್ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇಂದು (ಜ.15) ಕೂಡ ರತನ್ ಟಾಟಾ ಟಾಟಾ ಇಂಡಿಕಾ ಕಾರ್ ಬಿಡುಗಡೆಯಾದ 25 ವರ್ಷಗಳ ಹಿಂದಿನ ನೆನಪನ್ನು ಹಂಚಿಕೊಂಡಿದ್ದಾರೆ. ಇಂಡಿಕಾ ಕಾರ್ ನೊಂದಿಗಿನ ತಮ್ಮ ಫೋಟೋ ಗೆ ಹೀಗೆ ಶೀರ್ಷಿಕೆ ನೀಡಿದ್ದಾರೆ-'25 ವರ್ಷಗಳ ಹಿಂದೆ ಟಾಟಾ ಇಂಡಿಕಾ ಕಾರ್ ಬಿಡುಗಡೆ ಭಾರತದ ದೇಶೀಯ ಪ್ರಯಾಣಿಕರ ಕಾರು ಕೈಗಾರಿಕೆಯ ಜನನಕ್ಕೆ ಕಾರಣವಾಯಿತು. ಇದು ನನಗೆ ಹಳೆಯ ಆತ್ಮೀಯ ನೆನಪುಗಳನ್ನು ಮಾಡಿಕೊಟ್ಟಿರುವ ಜೊತೆಗೆ ನನ್ನ ಹೃದಯದಲ್ಲಿ ನನಗೆ ವಿಶೇಷ ಸ್ಥಾನ ಸಿಗುವಂತೆ ಮಾಡಿದೆ.'
ಇಂಡಿಕಾ ಕಾರ್ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನ ವಿಭಾಗಕ್ಕೆ ಭರ್ಜರಿ ಆರಂಭ ಒದಗಿಸಿತು. ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಈ ಕಾರನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಇಂಡಿಗೋನಿಂದ ಹಿಡಿದು ವಿಸ್ತಾ ಹಾಗೂ ಮಂಝ ಮಾಡೆಲ್ ಗಳ ತನಕ ಸಣ್ಣ ಕಾರುಗಳ ಉತ್ಪಾದನೆಗೆ ಇದು ನಾಂದಿ ಹಾಡಿತು. ಬಿಡುಗಡೆಯಾದ ಕೇವಲ ಎರಡು ವರ್ಷಗಳಲ್ಲೇ ಈ ವಾಹನ ಯಶಸ್ಸು ಗಳಿಸುವ ಜೊತೆಗೆ ಅದರ ಫೀಚರ್ಸ್ ಹಾಗೂ ಲಭ್ಯತೆಯ ಹಿನ್ನೆಲೆಯಲ್ಲಿ ಜನರ ಪ್ರಿಯ ಬ್ರ್ಯಾಂಡ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಆದರೆ, 20 ವರ್ಷಗಳ ಬಳಿಕ ಅಂದರೆ 2018ರಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಇದರ ಉತ್ಪಾದನೆ ಸ್ಥಗಿತಗೊಳಿಸಿತು.
ವೊಡಾಫೋನ್‌ನಲ್ಲೂ ನೂರಾರು ನೌಕರರಿಗೆ ಗೇಟ್‌ಪಾಸ್?
ಟಾಟಾ ಇಂಡಿಕಾ ಕುರಿತ ರತನ್ ಟಾಟಾ ಅವರ ಪೋಸ್ಟ್ ವೈರಲ್ ಆಗಿದ್ದು, ಕೇವಲ ಐದು ಗಂಟೆಗಳ ಅವಧಿಯಲ್ಲಿ 18 ಲಕ್ಷಕ್ಕೂ ಅಧಿಕ ಲೈಕ್ಸ್ ದೊರಕಿದೆ. ರತನ್ ಟಾಟಾ ಅವರಂತೆ ಅನೇಕರು ಕೂಡ ಟಾಟಾ ಇಂಡಿಕಾ ತಮ್ಮ ಕುಟುಂಬದ ಕಾರ್ ಆಗಿದ್ದ ನೆನಪನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು 'ಟಾಟಾ ಅನ್ನೋದು ಕೇವ ಒಂದು ಬ್ರ್ಯಾಂಡ್ ಅಲ್ಲ. ಅದು ಭಾರತದ ಭಾವನೆ' ಎಂದಿದ್ದಾರೆ. ಇನ್ನೊಬ್ಬರು 'ಇದು ಭಾರತೀಯರಿಗಾಗಿಯೇ ಸಿದ್ಧಪಡಿಸಿದ ಅತೀ ಸುಂದರವಾದ ಕಾರು. ನನ್ನ ತಂದೆ ಅವರ ಕಾಲದ ಮೊದಲ ಇಂಡಿಕಾ ಮಾಡೆಲ್ ಅನ್ನು 1998ರಲ್ಲಿ ಖರೀದಿಸಿದ್ದರು. ಆಗ ನನಗೆ ಒಂದು ವರ್ಷ ವಯಸ್ಸಾಗಿತ್ತು. ಆ ಬಳಿಕ 2005ರಲ್ಲಿ ನಾವು ಆ ಕಾರನ್ನು ಬದಲಾಯಿಸಿ ಇಂಡಿಕಾ V2 ಖರೀದಿಸಿದೆವು. ಇದು ನನಗೆ ಹಾಗೂ ಇತರರಿಗೆ ಬರೀ ಕಾರು ಮಾತ್ರವಲ್ಲ, ಅದರೊಂದಿಗೆ ಅನೇಕ ಭಾವನೆಗಳು ಬೆರೆತಿವೆ. ಐಕಾನಿಕ್ ಇಂಡಿಕಾ! 'ಮೋರ್ ಕಾರ್ ಪರ್ ಕಾರ್' ಎಂಬ ಟ್ಯಾಗ್ ಲೈನ್ ಇನ್ನೂ ನೆನಪಿದೆ. ನಿಮ್ಮ ಬಗ್ಗೆ ನಮಗೆ ಅತೀವ ಗೌರವ ಹಾಗೂ ಪ್ರೀತಿಯಿದೆ ರತನ್ ಸರ್!' ಎಂದು ಹೇಳಿದ್ದಾರೆ.
3 ಗೆರೆಗಳ ಟ್ರೇಡ್‌ಮಾರ್ಕ್ ಕಳೆದುಕೊಂಡ ಅಡಿಡಾಸ್ ಕಂಪನಿ
ಕೆಲವು ದಿನಗಳ ಹಿಂದಷ್ಟೇ ರತನ್ ಟಾಟಾ ತಮ್ಮ ಜಿಮ್ಮಿ ಟಾಟಾ ಹಾಗೂ ತಮ್ಮ ನಾಯಿ ಜೊತೆಗಿನ ಕಪ್ಪು -ಬಿಳುಪಿನ ಚಿತ್ರವನ್ನು ಹಂಚಿಕೊಂಡಿದ್ದರು. ಶೀರ್ಷಿಕೆಯಲ್ಲಿ ಹಳೆಯ ದಿನಗಳ ನೆನಪನ್ನು ಮೆಲುಕು ಹಾಕುವ ಬರಹ ಕೂಡ ಬರೆದಿದ್ದರು.