ನವದೆಹಲಿ[ಫೆ.02]: ಕೇಂದ್ರ ಅಚಿವ ಅರುಣ್ ಜೇಟ್ಲಿ ಮಧ್ಯಂತರ ಬಜೆಟ್ ಸಂಬಂಧ ಕೇಳಿ ಬಂದ ಟೀಕೆಗಳನ್ನು ತಳ್ಳಿ ಹಾಕುತ್ತಾ ರೈತರಿಗಾಗಿ ಆದಾಯ ಯೋಜನೆ ಹಾಗೂ ನೇರ ತೆರಿಗೆಯಲ್ಲಿ ಬದಲಾವಣೆ ತರುವುದು ಅತಿ ಅಗತ್ಯವಾಗಿತ್ತು. ಇದರಿಂದಾಗಿ ಆದಾಯ ಗಳಿಕೆ ಹೆಚ್ಚಾಗುವುದರೊಂದಿಗೆ, ಅರ್ಥಿಕ ಅಭಿವೃದ್ಧಿಯೂ ವೇಗ ಪಡೆದುಕೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ ಬಜೆಟ್‌ನಲ್ಲಿ ಮಾಡಿರುವ ಘೋಷಣೆಗಳು ಲೋಕಸಭಾ ಚುನಾವಣೆಯ ಲಾಭ ಪಡೆಯಲು ಮಾಡಲಾಗಿದೆ ಎಂದು ದೂರಿದವರಿಗೆ ಉತ್ತರಿಸಿದ ಜೇಟ್ಲಿ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳೆಲ್ಲವೂ ಸರ್ಕಾರ ಕಳೆದ 5 ವರ್ಷಗಳಿಂದ ಜಾರಿಗೊಳಿಸಿದ ಯೋಜನೆಗಳ ಪ್ರತಿಫಲ ಎಂದಿದ್ದಾರೆ.

ನ್ಯೂಯಾರ್ಕ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಸಚಿವ ಅರುಣ್ ಜೇಟ್ಲಿ "ನಾನು ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆಯ ನಡುವಿನ ಅಂತರವನ್ನು ತಳ್ಳಿ ಹಾಕುತ್ತೇನೆ. ಬಜೆಟ್ ಮೂಲಕ ತಂದಿರುವ ಬದಲಾವಣೆಯಿಂದ ಅರ್ಥ ವ್ಯವಸ್ಥೆಗೆ ಮತ್ತಷ್ಟು ಶಕ್ತಿ ಸಿಗಲಿದೆ. ಈ ಯೋಜನೆಗಳು ಜಾರಿಗೊಳಿಸುವ ಅಗತ್ಯವಿತ್ತು ಎಂದು ನಿಮಗನಿಸುವುದಿಲ್ಲವೇ? ಇದರಿಂದ ದೇಶಕ್ಕೆ ಲಾಭವಾಗುವುದರಲ್ಲಿ ಅನುಮಾನವೇ ಇಲ್ಲ. ಘೋಷಣೆಯಾಗಿರುವ ಯೋಜನೆಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಣ ಹಿಂತಿರುಗುವುದು ಖಚಿತ" ಎಂದಿದ್ದಾರೆ. 

ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಅಮೆರಿಕಾಗೆ ತೆರಳಿರುವ ಸಚಿವ ಅರುಣ್ ಜೇಟ್ಲಿ ಶಸ್ತ್ರಚಿಕಿತ್ಸೆ ಬಳಿಕ ಭಾರತಕ್ಕೆ ಮರಳಿದ್ದಾರೆನ್ನಲಾಗಿದೆ.