ನವದೆಹಲಿ(ನ.24): ಕಾರ್ಪೋರೆಟ್‌ ಕಂಪನಿಗಳು ಬ್ಯಾಂಕಿಂಗ್‌ ವಲಯ ಪ್ರವೇಶಿಸಿ ಬ್ಯಾಂಕ್‌ಗಳನ್ನು ಸ್ಥಾಪಿಸಬಹುದು ಎಂಬ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಸಮಿತಿಯೊಂದರ ಪ್ರಸ್ತಾವಕ್ಕೆ ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಹಾಗೂ ಮಾಜಿ ಉಪ ಗವರ್ನರ್‌ ವಿರಳ್‌ ಆಚಾರ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಈ ಪ್ರಸ್ತಾವನೆ ಆಘಾತಕಾರಿ. ಈ ಸಂದರ್ಭದಲ್ಲಿ ಇಂತಹ ಪ್ರಸ್ತಾವನೆಗಳು ಉಚಿತವಲ್ಲ. ಹೀಗಾಗಿ ಇದನ್ನು ಕಪಾಟಿನಲ್ಲಿಯೇ ಭದ್ರವಾಗಿ ಇಡುವುದು ಉತ್ತಮ’ ಎಂದು ಜಂಟಿ ಲೇಖನವೊಂದರಲ್ಲಿ ರಾಜನ್‌ ಹಾಗೂ ವಿರಳ್‌ ಆಚಾರ್ಯ ಹೇಳಿದ್ದಾರೆ.

‘ಕಂಪನಿಗಳೇ ಸಾಲ ಮಾಡಿರುತ್ತವೆ. ಇಂಥ ಸಂದರ್ಭದಲ್ಲಿ ಸಾಲಗಾರನೇ ಬ್ಯಾಂಕ್‌ ಮಾಲೀಕನಾದರೆ ಹೇಗೆ? ಆತ ಹೇಗೆ ಉತ್ತಮ ಸಾಲ ವಿತರಿಸಬಲ್ಲ?’ ಎಂದು ಲೇಖನದಲ್ಲಿ ಪ್ರಶ್ನಿಸಲಾಗಿದೆ.

ಆರ್‌ಬಿಐನ ಆಂತರಿಕ ಕಾರ್ಯ ಸಮಿತಿಯು ಕಳೆದ ವಾರ ‘ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ದೊಡ್ಡ ಕಾರ್ಪೋರೆಟ್‌ ಸಮೂಹಗಳಿಗೆ ಬ್ಯಾಂಕಿಂಗ್‌ ವಲಯಕ್ಕೆ ಪ್ರವೇಶ ನೀಡಬಹುದು’ ಎಂದು ಹೇಳಿತ್ತು.