ಹೈದರಾಬಾದ್ ಗ್ರಾಹಕರ ಆಯೋಗವು ಸಿನಿಮಾ ಪ್ರದರ್ಶನವನ್ನು ವಿಳಂಬ ಮಾಡಿ ಅತಿಯಾದ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಪಿವಿಆರ್ ಐನಾಕ್ಸ್‌ಗೆ ₹75,000 ದಂಡ ವಿಧಿಸಿದೆ. ಇದು ಸೇವೆಯಲ್ಲಿನ ನ್ಯೂನತೆ ಮತ್ತು ಅಕ್ರಮ ವ್ಯಾಪಾರ ಪದ್ಧತಿ ಎಂದು ಆಯೋಗ ತೀರ್ಪು ನೀಡಿದೆ.
ಹೈದರಾಬಾದ್ (ಅ.5): ಸಿನಿಮಾ ವೀಕ್ಷಣೆಗೆ ತೆರಳುವ ಪ್ರೇಕ್ಷಕರ ಸಮಯವನ್ನು ಅನಗತ್ಯವಾಗಿ ಪೋಲು ಮಾಡಿ, ನಿಗದಿತ ಸಮಯಕ್ಕಿಂತ ತಡವಾಗಿ ಸಿನಿಮಾ ಪ್ರದರ್ಶನ ಆರಂಭಿಸಿ ಅತಿಯಾದ ವಾಣಿಜ್ಯ ಜಾಹೀರಾತುಗಳು ಹಾಗೂ ಟ್ರೇಲರ್‌ಗಳನ್ನು ಪ್ರಸಾರ ಮಾಡುವುದು 'ಸೇವೆಯಲ್ಲಿನ ನ್ಯೂನತೆ' ಮತ್ತು 'ಅಕ್ರಮ ವ್ಯಾಪಾರ ಪದ್ಧತಿ' ಎಂದು ಹೈದರಾಬಾದ್ ಗ್ರಾಹಕರ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಸಿದ್ಧ ಮಲ್ಟಿಪ್ಲೆಕ್ಸ್ ಸಂಸ್ಥೆಯಾದ 'ಪಿವಿಆರ್ ಐನಾಕ್ಸ್'ಗೆ (PVR INOX) ಒಟ್ಟು ₹75,000 ದಂಡ ವಿಧಿಸಿ ಹೈದರಾಬಾದ್ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ-2 ಆದೇಶ ಹೊರಡಿಸಿದೆ.
ಪ್ರಕರಣದ ದೂರುದಾರರಾದ ವಕೀಲ ಚಂದಾ ಅತೀಶ್ ಕುಮಾರ್ ಅವರಿಗೆ ಆದ ಮಾನಸಿಕ ತೊಂದರೆಗಾಗಿ ₹20,000 ಪರಿಹಾರ ಮತ್ತು ಅವರ ವ್ಯಾಜ್ಯ ವೆಚ್ಚಕ್ಕಾಗಿ ₹5,000 ಪಾವತಿಸುವಂತೆ 'ಪಿವಿಆರ್ ಸಿಲಿಮಾಸ್' ಹಾಗೂ 'ಪಿವಿಆರ್ ಐನಾಕ್ಸ್' ಸಂಸ್ಥೆಗಳಿಗೆ ಆಯೋಗ ನಿರ್ದೇಶಿಸಿದೆ. ಇದರ ಜೊತೆಗೆ, ನಿಯಮ ಉಲ್ಲಂಘನೆಗಾಗಿ ₹50,000 ಶಿಕ್ಷಾರ್ಹ ದಂಡವನ್ನು (Punitive Damages) ಜಿಲ್ಲಾ ಗ್ರಾಹಕರ ಕಲ್ಯಾಣ ನಿಧಿಗೆ ಠೇವಣಿ ಮಾಡುವಂತೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಈ ಪ್ರಕರಣವು 2025 ರ ಜೂನ್ 20 ರಂದು ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ದೂರುದಾರ ವಕೀಲ ಅತೀಶ್ ಕುಮಾರ್ ಅವರು ಹೈದರಾಬಾದಿನ ಮೂಸಾರಾಂಬಾಗ್‌ನಲ್ಲಿರುವ ಪಿವಿಆರ್‌ನ 'ನೆಕ್ಸ್ಟ್ ಗ್ಯಾಲೇರಿಯಾ ಮಾಲ್'ನಲ್ಲಿ ತೆಲುಗಿನ 'ಕುಬೇರ' (Kubera) ಸಿನಿಮಾದ ರಾತ್ರಿ 10:35 ರ ಪ್ರದರ್ಶನಕ್ಕೆ ಎರಡು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು.
ಆದರೆ, ಸಿನಿಮಾ ನಿಗದಿತ ಸಮಯವಾದ ರಾತ್ರಿ 10:35 ಕ್ಕೆ ಪ್ರಾರಂಭವಾಗುವ ಬದಲಾಗಿ ವಾಣಿಜ್ಯ ಜಾಹೀರಾತುಗಳು ಮತ್ತು ಚಲನಚಿತ್ರಗಳ ಟ್ರೇಲರ್‌ಗಳು ರಾತ್ರಿ 10:52 ರವರೆಗೆ ನಿರಂತರವಾಗಿ ಪ್ರಸಾರವಾದವು. ತದನಂತರ ಸಾರ್ವಜನಿಕ ಜಾಗೃತಿ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಇದರಿಂದಾಗಿ ಸಿನಿಮಾ ಶುರುವಾಗುವುದು ಸುಮಾರು 22 ನಿಮಿಷಗಳ ಕಾಲ ವಿಳಂಬವಾಯಿತು. ಈ ತಡರಾತ್ರಿಯ ವಿಳಂಬದಿಂದಾಗಿ ತಾವು ಮನೆಗೆ ಮರಳುವುದು ತಡವಾಗಿ, ನಸುಕಿನ 3 ಗಂಟೆಯಾಯಿತು ಎಂದು ದೂರುದಾರರು ಆಯೋಗದ ಮೆಟ್ಟಿಲೇರಿದ್ದರು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಫೀಸ್ ಮೆಮೊರಾಂಡಮ್ ಅನ್ನು ನ್ಯಾಯಾಲಯದ ಗಮನಕ್ಕೆ ತಂದ ದೂರುದಾರರು, ಸಾರ್ವಜನಿಕ ಜಾಗೃತಿ ಚಿತ್ರಗಳ ಪ್ರಸಾರದ ಗರಿಷ್ಠ ಅವಧಿ ಕೇವಲ 2 ನಿಮಿಷಗಳು ಮಾತ್ರ. ಆದರೆ ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿಯು ವಾಣಿಜ್ಯ ಲಾಭಕ್ಕಾಗಿ ನಿಯಮ ಮೀರಿ ದೀರ್ಘಾವಧಿಯ ಜಾಹೀರಾತುಗಳನ್ನು ಪ್ರಸಾರ ಮಾಡಿ ಗ್ರಾಹಕರ ಹಕ್ಕನ್ನು ಕಸಿದುಕೊಂಡಿದೆ ಎಂದು ವಾದಿಸಿದ್ದರು.
ಪಿವಿಆರ್ ವಾದ ತಳ್ಳಿಹಾಕಿದ ಗ್ರಾಹಕರ ಕೋರ್ಟ್
ಪಿವಿಆರ್ ಐನಾಕ್ಸ್ ಸಂಸ್ಥೆಯು ಈ ದೂರನ್ನು ತೀವ್ರವಾಗಿ ವಿರೋಧಿಸಿ, "ಜಾಹೀರಾತುಗಳು, ಟ್ರೇಲರ್‌ಗಳು ಮತ್ತು ಸಾರ್ವಜನಿಕ ಜಾಗೃತಿ ಚಿತ್ರಗಳನ್ನು ಪ್ರದರ್ಶಿಸುವುದು ನಮ್ಮ ವಾಣಿಜ್ಯ ವ್ಯವಹಾರದ ಒಂದು ಭಾಗವಾಗಿದೆ" ಎಂದು ಸಮರ್ಥಿಸಿಕೊಂಡಿತ್ತು. ಅಲ್ಲದೆ, 'ಕೆ.ಸಿ. ಸಿನಿಮಾ ವರ್ಸಸ್ ಜಮ್ಮು ಮತ್ತು ಕಾಶ್ಮೀರ ಸರ್ಕಾರ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, "ಚಿತ್ರಮಂದಿರಗಳು ಖಾಸಗಿ ಸ್ವತ್ತಾಗಿದ್ದು, ಸಾಮಾಜಿಕ ಹಿತಾಸಕ್ತಿಯಿಂದ ನ್ಯಾಯಯುತ ನಿಯಮಗಳನ್ನು ವಿಧಿಸುವ ಹಕ್ಕು ನಮಗಿದೆ" ಎಂದು ವಾದಿಸಿತ್ತು.
ಆದರೆ ಗ್ರಾಹಕರ ಆಯೋಗವು ಪಿವಿಆರ್‌ನ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಸಿನಿಮಾ ನಿಗದಿತ ಸಮಯ ಮೀರಿದ ಮೇಲೆಯೂ ವಾಣಿಜ್ಯ ಜಾಹೀರಾತುಗಳು ಪ್ರಸಾರವಾಗುತ್ತಿದ್ದ ಕುರಿತು ದೂರುದಾರರು ಸಲ್ಲಿಸಿದ್ದ ಸಿಡಿ (CD) ಆಧಾರಿತ ಸಾಕ್ಷ್ಯಗಳನ್ನು ನಿರಾಕರಿಸಲು ಪಿವಿಆರ್ ವಿಫಲವಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ನಿಯಮಿತ ಅವಧಿಯನ್ನು ಮೀರಿ ಲಾಭಕ್ಕಾಗಿ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸುವುದು 'ಸೇವೆಯಲ್ಲಿನ ಸ್ಪಷ್ಟ ನ್ಯೂನತೆ' ಹಾಗೂ 'ಅಕ್ರಮ ವ್ಯಾಪಾರ ಪದ್ಧತಿ' ಎಂದು ಗರಂ ಆಯಿತು.
45 ದಿನಗಳ ಡೆಡ್‌ಲೈನ್ ಮತ್ತು ಶೇಕಡಾ 9 ರಷ್ಟು ಬಡ್ಡಿ
ಆಯೋಗ ನೀಡಿದ ತೀರ್ಪಿನ ಪ್ರಕಾರ PVR Cinemas ಹಾಗೂ PVR INOX ಸಂಸ್ಥೆಗಳು ದೂರುದಾರರಿಗೆ ₹20,000 ಪರಿಹಾರ ಹಾಗೂ ₹5,000 ವ್ಯಾಜ್ಯ ವೆಚ್ಚ ನೀಡಬೇಕು. ಜೊತೆಗೆ ₹50,000 ದಂಡದ ಮೊತ್ತವನ್ನು ಜಿಲ್ಲಾ ಗ್ರಾಹಕರ ಕಲ್ಯಾಣ ನಿಧಿಗೆ ಜಮಾ ಮಾಡಬೇಕು. ಈ ಆದೇಶವನ್ನು ಜಾರಿಗೊಳಿಸಲು ಆಯೋಗವು ಚಿತ್ರಮಂದಿರಗಳ ಆಡಳಿತ ಮಂಡಳಿಗೆ 45 ದಿನಗಳ ಕಾಲಾವಕಾಶ ನೀಡಿದೆ. ನಿಗದಿತ ಅವಧಿಯೊಳಗೆ ಹಣ ಪಾವತಿಸಲು ವಿಫಲವಾದರೆ, ಬಾಕಿ ಮೊತ್ತಕ್ಕೆ ನೀಡಬೇಕಾದ ದಿನಾಂಕದಿಂದ ವಾರ್ಷಿಕ ಶೇಕಡಾ 9 (9% p.a.) ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಅಲ್ಲದೆ, ಇನ್ಮುಂದೆ ಪ್ರೇಕ್ಷಕರನ್ನು ಕಾಯಿಸಿ ಇಂತಹ ಅನಗತ್ಯ ಹಾಗೂ ಅಕ್ರಮ ವಾಣಿಜ್ಯ ಜಾಹೀರಾತುಗಳ ಪ್ರಸಾರ ಮಾಡುವ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಇದನ್ನು ಪುನರಾವರ್ತಿಸಬಾರದು ಎಂದು ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಡರಾತ್ರಿ ಶೋಗಳಿಗೆ ಬರುವ ಸಾರ್ವಜನಿಕರ ಸಮಯಕ್ಕೂ ಬೆಲೆಯಿದೆ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ.


