ನವದೆಹಲಿ[ಮೇ.02]: ಜಾಗತಿಕ ಮಟ್ಟದ ಬ್ಯಾಂಕ್‌ಗಳ ಸೃಷ್ಟಿಯ ತನ್ನ ಯೋಜನೆಯ ಭಾಗವಾಗಿ ಶೀಘ್ರವೇ ಮತ್ತಷ್ಟುಸರ್ಕಾರಿ ಬ್ಯಾಂಕ್‌ಗಳನ್ನು ಪರಸ್ಪರ ವಿಲೀನಗೊಳಿಸಿ, ದೊಡ್ಡ ಬ್ಯಾಂಕ್‌ ರಚನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮೂಲಗಳ ಪ್ರಕಾರ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬ್ಯಾಂಕ್‌ ಆಫ್‌ ಇಂಡಿಯಾಗಳನ್ನು ಪರಸ್ಪರ ವಿಲೀನಗೊಳಿಸುವ ಬಗ್ಗೆ ಸರ್ಕಾರ ಹೆಜ್ಜೆ ಇಟ್ಟಿದೆ.

ಒಂದು ವೇಳೆ ಬ್ಯಾಂಕ್‌ಗಳೇ ಸ್ವತಃ ಇಂಥ ಪ್ರಕ್ರಿಯೆಗೆ ಮುಂದಾಗದೇ ಇದ್ದಲ್ಲಿ, ಸರ್ಕಾರವೇ ಈ ಮೂರೂ ಬ್ಯಾಂಕ್‌ಗಳನ್ನು ಮಾತುಕತೆಗೆ ಆಹ್ವಾನಿಸಿ ವೇದಿಕೆ ಕಲ್ಪಿಸಲು ನಿರ್ಧರಿಸಿದೆ. ಜೊತೆಗೆ ಈ ವಿಲೀನ ಪ್ರಕ್ರಿಯೆಯನ್ನು ಈ ವರ್ಷಾಂತ್ಯದೊಳಗೇ ಪೂರ್ಣಗೊಳಿಸುವ ಇರಾದೆಯನ್ನೂ ಹೊಂದಿದೆ. ಆದರೆ ಹೊಸ ವಿಲೀನ ಪ್ರಕ್ರಿಯೆ ಕೇವಲ ಮೂರು ಬ್ಯಾಂಕ್‌ಗಳನ್ನೇ ಒಳಗೊಂಡಿರಬೇಕು ಎಂಬ ನಿಯಮವೇನೂ ಇಲ್ಲ. ಸರ್ಕಾರ ಎಲ್ಲಾ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಕೇಂದ್ರ ಸರ್ಕಾರವು, ಮೊದಲಿಗೆ ಸ್ಟೇಟ್‌ ಬ್ಯಾಂಕ್‌ ಇಂಡಿಯಾದಲ್ಲಿ ಅದರ 5 ಸಹಯೋಗಿ ಬ್ಯಾಂಕ್‌ಗಳನ್ನು ವಿಲೀನ ಮಾಡಿತ್ತು. ಬಳಿಕ ಇತ್ತೀಚೆಗಷ್ಟೇ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ದೇನಾ ಬ್ಯಾಂಕ್‌ ಮತ್ತು ಕರ್ನಾಟಕ ಮೂಲದ ವಿಜಯಾ ಬ್ಯಾಂಕ್‌ ವಿಲೀನಗೊಳಿಸಿತ್ತು.