ಬೆಂಗಳೂರು(ಆ.21): ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಹತ್ವದ ಮಾಹಿತಿಗೆ ಕನ್ನ ಹಾಕಿರುವ ಮಾಜಿ ಸಿಬ್ಬಂದಿಯೋರ್ವ, ದಾಖಲೆ ಬಿಡುಗಡೆ ಮಾಡದಿರಲು 50 ಸಾವಿರ ಡಾಲರ್ ಬೇಡಿಕೆ ಇಟ್ಟಿರುವುದಾಗಿ ಹೇಳಲಾಗಿದೆ.

ಅರವಿಂದ್ ಈಶ್ವರ್‌ಲಾಲ್‌ ಎಂಬ ಆರೋಪಿ ತಾನು ಕೆಲಸ ಮಾಡುತ್ತಿದ್ದ ಪಿಲ್ವೋ ಕಮ್ಯೂನಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಉಪಾಧ್ಯಕ್ಷ ವೇಣುಮಾಧವ್ ಇಂದ್ರುತಿ ಅವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ತನ್ನ ಬಳಿ ಕಂಪನಿಯ ಹಲವು ರಹಸ್ಯ ಮಾಹಿತಿಗಳಿದ್ದು, ಅವುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡುವುದಾಗಿ ಅರವಿಂದ್ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.


ಕಂಪನಿಯ ಸಿಬ್ಬಂದಿಗೆ ಇ-ಮೇಲ್ ಮಾಡಿ ಕಂಪನಿಗೆ ಸಂಬಂಧಪಟ್ಟ ಕೆಲ ವಿಚಾರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದ ಅರವಿಂದ್, ಹೀಗೆ ಮಾಡದಿರಲು ತನಗೆ 35 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಳಿಕ ಕಂಪನಿ ಸಿಇಒ ವೆಂಕಟೇಶ್ ಅವರಿಗೂ ಮೇಲ್ ಮಾಡಿ ಬೆದರಿಕೆ ಹಾಕಿದ್ದ ಅರವಿಂದ್, ತನಗೆ ಹಣ ಕೊಡದಿದ್ದರೆ ಈ ರಹಸ್ಯ ಮಾಹಿತಿಗಳನ್ನು ಗ್ರಾಹಕರಿಗೆ ಮತ್ತು ಇತರ ಕಂಪನಿಗಳಿಗೆ ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ.

ಸದ್ಯ ಆರೋಪಿ ಅರವಿಂದ್ ಈಶ್ವರ್‌ಲಾಲ್‌ ನನ್ನು ವಶಕ್ಕೆ ಪಡೆದಿರುವ ಸೈಬರ್ ಪೊಲೀಸರು, ಆತನಿಂದ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.