ತಿರುವನಂತಪುರಂ[ಸೆ.19]: ಕೈದಿಗಳಿಂದ ರುಚಿಕರ ಆಹಾರ ತಯಾರಿಸಿ ಮಾರಾಟ ಮಾಡುವ ಯೋಜನೆ ಯಶಸ್ವಿಯಾದ ಬಳಿಕ, ಕೈದಿಗಳಿಂದಲೇ ಪೆಟ್ರೋಲ್‌ ಬಂಕ್‌ ನಡೆಸುವ ನೂತನ ಪ್ರಯತ್ನಕ್ಕೆ ಕೇರಳ ಸರ್ಕಾರ ಮುಂದಾಗಿದೆ. ಈಗಾಗಗಲೇ ತಮಿಳು ನಾಡು ಹಾಗೂ ಪಂಜಾಬ್‌ನಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್‌-ಡಿಸೆಂಬರ್‌ ವೇಳೆಗೆ ಕೇರಳದಲ್ಲಿ ಕೈದಿಗಳಿಂದಲೇ ನಡೆಸಲ್ಪಡುವ ಪೆಟ್ರೋಲ್‌ ಬಂಕ್‌ ಅಸಿತ್ವಕ್ಕೆ ಬರಲಿದೆ.

ತಿರುವನಂತಪುರಂನ ಪೂಜಪ್ಪುರ, ತ್ರಿಶ್ಶೂರ್‌ನ ವಿಯ್ಯೂರ್‌ ಹಾಗೂ ಕಣ್ಣೂರ್‌ ಕೇಂದ್ರ ಕಾರಾಗೃಹಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಕಾರಾಗೃಹ ಇಲಾಖೆ ಗೊತ್ತು ಪಡಿಸಿದ ಸ್ಥಳದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಬಂಕ್‌ಗಳನ್ನು ತೆರೆಯಲಿದೆ. ಪ್ರತೀ ಬಂಕ್‌ಗಳಲ್ಲಿ ವಿವಿಧ ಶಿಫ್ಟ್‌ಗಳಲ್ಲಿ 15 ಕೈದಿಗಳು ಕೆಲಸ ಮಾಡಲಿದ್ದಾರೆ. ಇದಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕಾರಾಗೃಹ ಇಲಾಖೆಯಡಿ ಈ ಬಂಕ್‌ಗಳು ಕಾರ್ಯ ನಿರ್ವಹಿಸಲಿದೆ. ಇದರಿಂದ ಹೆಚ್ಚಿನ ಆದಾಯದ ಜತೆಗೆ ಖೈದಿಗಳಿಗೆ ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡಂತೆಯೂ ಆಗುತ್ತದೆ.

ಕಾರಾಗೃಹ ನಿಯಮಾವಳಿಯಂತೆ ಅವರಿಗೆ ದಿನಗೂಲಿ ಕೂಡ ನೀಡಲಾಗುತ್ತದೆ ಎಂದು ಕಣ್ಣೂರು ಜಿಲ್ಲಾ ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕ ರಿಷಿರಾಜ್‌ ಸಿಂಗ್‌ ಹೇಳಿದ್ದಾರೆ. ಈ ಹಿಂದೆ ಕೈದಿಗಳೇ ತಯಾರಿಸಿದ ವಿವಿಧ ಭಕ್ಷ್ಯ ಭೋಜಗಳನ್ನು ಮಾರಾಟ ಮಾಡುವ ಯೋಜನೆ ಯಶಸ್ವಿಯಾಗಿತ್ತು. ಅಲ್ಲದೇ ಆನ್‌ಲೈನ್‌ ಮಾರಾಟಕ್ಕೆ ಸ್ವಿಗ್ಗಿ ಜತೆ ಕೂಡ ಒಪ್ಪಂದ ಮಾಡಿಕೊಳ್ಳಲಾಗಿತ್ತು.