Asianet Suvarna News Asianet Suvarna News

2030ರೊಳಗೆ ದೇಶದಲ್ಲಿ 6ಜಿ ಆರಂಭಕ್ಕೆ ತಯಾರಿ: 5ಜಿಗಿಂತ 1000 ಪಟ್ಟು ವೇಗದಲ್ಲಿ ಸಿಗಲಿದೆ ಇಂಟರ್ನೆಟ್‌

 ಆರು ತಿಂಗಳ ಹಿಂದಷ್ಟೇ 5ಜಿ ದೂರಸಂಪರ್ಕ ಸೇವೆಯನ್ನು ಆರಂಭಿಸಿದ್ದ ಭಾರತ ಇದೀಗ 6ಜಿ ಸೇವೆ ಪ್ರಾರಂಭಿಸಲು ಸದ್ದಿಲ್ಲದೆ ತಯಾರಿ ಆರಂಭಿಸಿದೆ.

Prime Minister released 6G vision record, Internet will be 1000 times faster than 5G akb
Author
First Published Mar 24, 2023, 11:31 AM IST

ನವದೆಹಲಿ:  ಆರು ತಿಂಗಳ ಹಿಂದಷ್ಟೇ 5ಜಿ ದೂರಸಂಪರ್ಕ ಸೇವೆಯನ್ನು ಆರಂಭಿಸಿದ್ದ ಭಾರತ ಇದೀಗ 6ಜಿ ಸೇವೆ ಪ್ರಾರಂಭಿಸಲು ಸದ್ದಿಲ್ಲದೆ ತಯಾರಿ ಆರಂಭಿಸಿದೆ. 2030ರೊಳಗೆ 6ಜಿ ತಂತ್ರಜ್ಞಾನವನ್ನು ಭಾರತದಲ್ಲಿ ಪರಿಚಯಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘6ಜಿ ದೂರದೃಷ್ಟಿದಾಖಲೆಯನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.

40 ರಿಂದ 1100 ಎಂಬಿಪಿಎಸ್‌ (MBPS) ವೇಗದಲ್ಲಿ ಇಂಟರ್ನೆಟ್‌ ಸಂಪರ್ಕ ಸಿಗುವ 5ಜಿಗಿಂತ 1000 ಪಟ್ಟು ವೇಗದಲ್ಲಿ ಇಂಟರ್ನೆಟ್‌ ನೀಡುವುದು 6ಜಿ ವಿಶೇಷತೆ. ಅತ್ಯಲ್ಪ ಲೇಟೆನ್ಸಿ ಹೊಂದಿರುವ ಇದು ಸೆಕೆಂಡಿಗೆ 1 ಟೆರಾಬೈಟ್‌ ವೇಗದಲ್ಲಿ ಇಂಟರ್ನೆಟ್‌ (Internet) ಸಂಪರ್ಕವನ್ನು ಒದಗಿಸಲಿದೆ. 2030ರ ಒಳಗೆ ಭಾರತದಲ್ಲಿ 6ಜಿ ತಂತ್ರಜ್ಞಾನ (6G Technology) ಅಳವಡಿಸಿಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ. ಸದ್ಯ ವಿಶ್ವದ ಎಲ್ಲೂ 6ಜಿ ಇಂಟರ್ನೆಟ್‌ ಇಲ್ಲ.

ದೂರದೃಷ್ಟಿ ದಾಖಲೆ (vision record) ಬಿಡುಗಡೆ ಬಳಿಕ ಮಾತನಾಡಿದ ಮೋದಿ ಅವರು, 5ಜಿ ಸೇವೆ ಆರಂಭವಾದ ಆರು ತಿಂಗಳ ಒಳಗಾಗಿ 6ಜಿ ಆರಂಭಕ್ಕೆ ಕ್ರಮ ಕೈಗೊಂಡಿರುವುದು ಭಾರತದ ವಿಶ್ವಾಸವನ್ನು ತೋರಿಸುತ್ತದೆ. 4ಜಿ ಆರಂಭಕ್ಕೂ ಮುನ್ನ ಭಾರತ ಮಾಹಿತಿ ತಂತ್ರಜ್ಞಾನದ (Information Technology) ಬಳಕೆದಾರ ಮಾತ್ರ ಆಗಿತ್ತು. ಈಗ ಟೆಲಿಕಾಂ ತಂತ್ರಜ್ಞಾನದ ಬೃಹತ್‌ ರಫ್ತುದಾರನಾಗಿ ದಾಪುಗಾಲು ಇಡುತ್ತಿದೆ ಎಂದು ಬಣ್ಣಿಸಿದರು.

ದೇಶದ 125 ನಗರಗಳಲ್ಲಿ 5G ಸೇವೆ ಪ್ರಾರಂಭಿಸಿದ ಏರ್ ಟೆಲ್; ಈಗ ಒಟ್ಟು 265 ನಗರಗಳಲ್ಲಿ ಲಭ್ಯ

100 ಕೋಟಿ ಮೊಬೈಲ್‌ ಫೋನ್‌ಗಳನ್ನು ಹೊಂದಿರುವ ಭಾರತ ವಿಶ್ವದಲ್ಲೇ ಅತ್ಯಂತ ಪರಸ್ಪರ ಸಂಪರ್ಕ ಹೊಂದಿರುವ ಪ್ರಜಾಪ್ರಭುತ್ವವಾಗಿದೆ. ಅಗ್ಗದ ಸ್ಮಾರ್ಟ್‌ಫೋನ್‌ಗಳು, ಅಗ್ಗದ ಡೇಟಾ ಭಾರತವನ್ನು ರೂಪಾಂತರಗೊಳಿಸಿವೆ. ಟೆಲಿಕಾಂ ತಂತಜ್ಞಾನ ಎಂಬುದು ಭಾರತದಲ್ಲಿ ಕೇವಲ ಅಧಿಕಾರ ಮಾತ್ರವಲ್ಲ. ಇದು ಸಬಲೀಕರಣ ಮಿಷನ್‌. 2014ರಲ್ಲಿ 24 ಕೋಟಿ ಇದ್ದ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ 85 ಕೋಟಿಗೆ ಏರಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌ (Communications Minister Ashwini Vaishnav) ಅವರು, 6ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತ ಈಗಾಗಲೇ 127 ಜಾಗತಿಕ ಪೇಟೆಂಟ್‌ಗಳನ್ನು ಹೊಂದಿದೆ ಎಂದು ಹೇಳಿದರು.

ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು, ಭಾರತದ 238 ನಗರದಲ್ಲಿ 5G ಸೇವೆ ಲಭ್ಯ!

ಏನಿದರ ಲಾಭ?

ಭಾರತದಲ್ಲಿ ಅತ್ಯಂತ ವೇಗವಾಗಿ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವ ಗುರಿಯೊಂದಿಗೆ 6ಜಿ ತಂತ್ರಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿಯ ಗುರಿಯೊಂದಿಗೆ ದೂರದೃಷ್ಟಿ ದಾಖಲೆ ಬಿಡುಗಡೆ ಮಾಡಲಾಗಿದೆ. ಸದ್ಯ 6ಜಿ ವಿಶ್ವದಲ್ಲಿ ಎಲ್ಲೂ ಇಲ್ಲ. ಆದರೆ ಇದು 5ಜಿಗಿಂತ ವೇಗದ, ಉತ್ಕೃಷ್ಟತಂತ್ರಜ್ಞಾನ ಎಂಬ ಪರಿಕಲ್ಪನೆ ಇದೆ. 6ಜಿ ಇಂಟರ್ನೆಟ್‌ ಇದ್ದರೆ 100 ಸಿನಿಮಾಗಳನ್ನು ಒಂದೇ ನಿಮಿಷದಲ್ಲಿ ಡೌನ್‌ಲೋಡ್‌ ಮಾಡಬಹುದು. ರಿಮೋಟ್‌ ಕಂಟ್ರೋಲ್‌ ಆಧರಿತ ಕೈಗಾರಿಕೆಗಳು, ಸ್ವಯಂ ಚಾಲಿತ ಕಾರುಗಳ ಜತೆ ನಿರಂತರ ಸಂವಹನದಂತಹ ಸೇವೆಗಳಿಗೆ 6ಜಿ ಸೇವೆ ಬಳಸುವ ಪ್ರಸ್ತಾಪ ದೂರದೃಷ್ಟಿ ದಾಖಲೆಯಲ್ಲಿದೆ.

Follow Us:
Download App:
  • android
  • ios