ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗೆ ಪ್ರಧಾನಿ ಚಾಲನೆ! ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲು ಬದ್ಧ! ಬ್ಯಾಂಕಿಂಗ್ ಸೇವೆಯ ಸಂಪೂರ್ಣ ಲಭ ಪಡೆಯಲು ಮೋದಿ ಕರೆ
ನವದೆಹಲಿ(ಸೆ.1): ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಪ್ರಧಾನಿ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರತಿಯೊಬ್ಬ ನಾಗರಿಕನ ಮನೆ ಮನೆಗೆ ತಲುಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ದೇಶದ ಎಲ್ಲಾ ಜನರಿಗೆ ಬ್ಯಾಂಕಿಂಗ್ ಸೌಕರ್ಯ ಒದಗಿಸುವುದು ಐಪಿಪಿಬಿ ಯೋಜನೆಯ ಉದ್ದೇಶವಾಗಿದೆ."ಮನೆ ಮನೆಗೆ ನಮ್ಮ ಬ್ಯಾಂಕ್" ಎನ್ನುವ ದ್ಯೇಯದೊಡನೆ ಆರಂಭವಾಗಿರುವ ಸೇವೆಯು ಇದುವರೆಗೆ ಬ್ಯಾಂಕಿಂಗ್ ಸೇವೆಯ ಸಂಪೂಣ ಲಾಭ ಪಡೆಯಲಾರದವರನ್ನು ಸಹ ಈ ಸೇವೆಯೊಳಗೆ ಸೇರ್ಪಡೆ ಮಾಡಿಕೊಳ್ಳಲಿದೆ ಎಂದು ಮೋದಿ ಹೇಳಿದರು.
ಐಪಿಪಿಬಿ ಮೂಲಕ ಗ್ರಾಹಕರು ಬ್ಯಾಂಕ್ ಸೇವೆಯಲ್ಲಿ ಸಾಮಾನ್ಯವಾಗಿ ಲಭ್ಯವಾಗುವ ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣದ ವರ್ಗಾವಣೆ, ಬಿಲ್ ಪಾವತಿ ಸೇರಿ ಅನೇಕ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಅವಕಾಶವಿದೆ ಎಂದ ಪ್ರಧಾನಿ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಇದ್ದವರು ಯಾರೇ ಆದರೂ ಈ ಸೇವೆಗೆ ಸೇರಿಕೊಳ್ಳಲು ಅವಕಾಶವಿದೆ.ಕಾಗದ ರಹಿತ ಖಾತೆ, ವ್ಯವಹಾರ ನಡೆಸುವ ಬ್ಯಾಂಕ್ ಸೇವೆ ಇದಾಗಿದ್ದು ಇದರಲ್ಲಿ ಕನಿಷ್ಟ ಠೇವಣಿ ಎನ್ನುವ ಕಲ್ಪನೆ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದ ಮೋದಿ, ಈ ಹಿಂದಿನ ಸರ್ಕಾರಗಳು ಮಾಡಿದ ತಪ್ಪನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
