* ಕೊರೋನಾದಿಂದ ಕಳೆದೆರಡು ವರ್ಷಗಳಿಂದ ಕುಂಠಿತಗೊಂಡಿದ್ದ ಆರ್ಥಿಕ ಚಟುವಟಿಕೆ* ಮನೆ, ನಿವೇಶನ, ಫ್ಲಾಟ್, ಭೂಮಿ ಮೇಲೆ ಹೂಡಿಕೆ ಮಾಡಲು ಜನ ಉತ್ಸಾಹ* ಹೊರ ವಲಯದಲ್ಲಿ ತಲೆ ಎತ್ತುತ್ತಿವೆ ಹೊಸ ಲೇಔಟ್
ಬೆಂಗಳೂರು(ಏ.16): ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್, ಕಬ್ಬಿಣ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ(Price Hike) ನಡುವೆಯೂ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ(Real Estate Business) ಚೇತರಿಸಿಕೊಂಡಿದ್ದು, ಹೊಸ ಬಡಾವಣೆಗಳು, ಮನೆ, ಅಪಾರ್ಚ್‌ಮೆಂಟ್‌ಗಳ ನಿರ್ಮಾಣ ಕಾಮಗಾರಿ ಹೆಚ್ಚುತ್ತಿವೆ.
2019ರಿಂದ 2021ರವರೆಗೆ ಎಲ್ಲೆಡೆ ಕೊರೋನಾ(Coronavirus) ಕರಿಛಾಯೆಯಿಂದ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಇದೀಗ ಕೊರೋನಾ ಸೋಂಕು ಕಡಿಮೆಯಾಗಿದ್ದು, ಎಲ್ಲ ರೀತಿಯ ಚಟುವಟಿಕೆಗಳು ಪುನರಾಂಭಗೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮವೂ ಚುರುಕುಗೊಂಡಿದೆ. ನಗರದ ಸುತ್ತಮುತ್ತ ಸ್ಥಿರಾಸ್ತಿ ಮೇಲೆ ಬಂಡವಾಳ ಹೂಡಲು ಪೈಪೋಟಿ ನಡೆಯುತ್ತಿದ್ದು, ಐಟಿ-ಬಿಟಿ(IT-BT) ಸೇರಿದಂತೆ ಇನ್ನಿತರ ವಲಯಗಳ ಜನರು ಮನೆ, ನಿವೇಶನ, ಅಪಾರ್ಟ್‌ಮೆಂಟ್ ಮತ್ತು ಭೂಮಿ ಮೇಲೆ ಹೂಡಿಕೆ(Investment) ಮಾಡಲು ಉತ್ಸುಕರಾಗಿದ್ದಾರೆ.
ರಿಯಲ್ ಎಸ್ಟೇಟ್ ಕಂಪನಿ ಸೂಪರ್‌ಟೆಕ್ ದಿವಾಳಿ ಘೋಷಣೆ: 25,000 ಮನೆ ಖರೀದಿದಾರರಿಗೆ ಸಂಕಷ್ಟ
ಸ್ಮಾರ್ಟ್‌ಸಿಟಿ, ಮೆಟ್ರೋ ಮತ್ತು ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳ ಸೇರ್ಪಡೆ, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ಸೇರಿದಂತೆ ಇತರ ಕಾರಣಗಳಿಂದ ನಗರದ ಹೊರ ವಲಯದ ಭೂಮಿ ಬೆಲೆ ಗಗನಕ್ಕೇರಿದೆ. ಹೊರ ರಾಜ್ಯ, ವಿದೇಶದವರೂ ನಗರದಲ್ಲಿ ನಿವೇಶನ, ಮನೆ, ಆಸ್ತಿಯ ಮೇಲೆ ಬಂಡವಾಳ ಹೂಡಿಕೆ ಮಾಡಲಾರಂಭಿಸಿದ್ದಾರೆ. ಹಾಗಾಗಿ ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಹೊಸ ಬಡಾವಣೆಗಳು ತಲೆ ಎತ್ತಲಾರಂಭಿಸಿವೆ.
ಹಲವು ಗೃಹ ನಿರ್ಮಾಣ ಸಹಕಾರ ಸಂಘಗಳು, ನೌಕರರ ಸಂಘಗಳು ಬಡಾವಣೆ ರಚನೆ ಮಾಡಿ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದು, ಭೂಮಿ(Land) ಖರೀದಿಯಲ್ಲಿ ತೊಡಗಿವೆ. ಹಾಗೆಯೇ ಜಮೀನುಗಳ ಭೂ ಪರಿವರ್ತನೆ ಮಾಡಿಸುವ ಪ್ರಕ್ರಿಯೆ ಕೂಡ ಏರುಗತಿಯಲ್ಲಿದ್ದು, ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಕೋವಿಡ್ ನಂತರ ಈಗ ರಿಯಲ್ ಎಸ್ಟೇಟ್ ಉದ್ಯಮ ಸುಧಾರಣೆ ಕಾರಣಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಭೂಮಿ ಮೇಲೆ ಬಂಡವಾಳ ಹೂಡಿಕೆ ಪ್ರಮಾಣ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ರೀಟೇಲ್‌ನಲ್ಲಿ ಸಿಮೆಂಟ್ ದುಬಾರಿ
ಮಾರುಕಟ್ಟೆಯಲ್ಲಿ ನಿರ್ಮಾಣ ವಸ್ತುಗಳ ಬೆಲೆ ಏರಿಕೆಯಾಗಿದೆ. 50 ಕೆ.ಜಿ.ಯ ಸಿಮೆಂಟ್ ಮೂಟೆ ಬಿರ್ಲಾ ಸಿಮೆಂಟ್ 53 ಗ್ರೇಡ್ .380, ಕೋರಮಂಡಲ್ ಸಿಮೆಂಟ್ .430, ದಾಲ್ಮಿಯ ಸಿಮೆಂಟ್ .440, ಆಲ್ಟಾ್ರಟೆಕ್ .450, ರಿಯಾ ಸಿಮೆಂಟ್ 53 ಗ್ರೇಡ್ .400, ಭಾರತಿ ಸಿಮೆಂಟ್ .374, ಜವಾರಿ .380, ಪೆನ್ನಾ ಸಿಮೆಂಟ್ .375 ಇದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಸಾರಿಗೆ ವೆಚ್ಚವೂ ಸೇರಿದಂತೆ ಇತರೆ ವೆಚ್ಚಗಳನ್ನು ಸೇರ್ಪಡೆಗೊಳಿಸಿ ಪ್ರತಿ ಮೂಟೆ ಸಿಮೆಂಟ್‌ಗೆ .50ರಿಂದ .100 ಹೆಚ್ಚಳ ಮಾಡಲಾಗಿದೆ. ಆದರೂ ಹೊಸ ಕಟ್ಟಡಗಳು, ಅಪಾರ್ಚ್‌ಮೆಂಟ್‌ಗಳ ನಿರ್ಮಾಣ ನಿಂತಿಲ್ಲ ಎನ್ನುತ್ತಾರೆ ವೈದೇಹಿ ಡೆವಲಪರ್ಸ್ ಸಂಸ್ಥೆಯ ಚಿನ್ನದೊರೆ.
ಕೆ.ಜಿ. ಕಬ್ಬಿಣಕ್ಕೆ 10 ಹೆಚ್ಚಳ
ಇನ್ನು ಪ್ರತಿ ಕೆ.ಜಿ. ಕಬ್ಬಿಣಕ್ಕೆ ಈ ಹಿಂದೆ .65ರಿಂದ 70 ಇತ್ತು. ಪ್ರಸ್ತುತ ಪ್ರತಿ ಕೆ.ಜಿ. ಕಬ್ಬಿಣಕ್ಕೆ .80 ರಷ್ಟಾಗಿದೆ. ಒಂದು ಟನ್‌ಗೆ .80 ಸಾವಿರದಿಂದ .96 ಸಾವಿರದ ವರೆಗೂ ದರ ನಿಗದಿಪಡಿಸಲಾಗಿದೆ. ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಹೆಚ್ಚಳದಿಂದ ಅನಿವಾರ್ಯವಾಗಿ ಕಬ್ಬಿಣದ ದರವೂ ಜಾಸ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನಿರ್ಮಾಣದ ಕೆಲಸ ಕಡಿಮೆಯಾಗಿದೆ. ಆದರೂ ಸರಕಿನ ಮೇಲಿನ ಬೆಲೆ ಕಡಿಮೆಯಾಗಿಲ್ಲ ಎಂದು ಸ್ಟೀಲ್ ಮಾರಾಟ ಕಂಪನಿಯಾದ ಸತ್ಯಸಾಯಿ ಟ್ರೇಡರ್ಸ್ ಮಾಲೀಕ ನಾರಾಯಣ ರೆಡ್ಡಿ ತಿಳಿಸಿದರು.
ಎಂ.ಸ್ಯಾಂಡ್ ಬೆಲೆ ಏರಿಕೆ ಇಲ್ಲ
ಪ್ರತಿ ಟನ್ ಡ್ರೈ ಸ್ಯಾಂಡ್‌ಗೆ .400 ಮತ್ತು ವಾಷಿಂಗ್ ಸ್ಯಾಂಡ್‌ಗೆ .800 ಇದೆ. ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಹೊರತುಪಡಿಸಿದರೆ ಇತರೆ ಜಿಲ್ಲೆಗಳಲ್ಲಿ ಎಂ ಸ್ಯಾಂಡ್ ದರ .900 ರಿಂದ .1200 ರವರೆಗೂ ಇದೆ. ಸರ್ಕಾರಿ ಕಾಮಗಾರಿಗಳು ನಡೆಯದಿದ್ದರೂ ಖಾಸಗಿಯವರ ನಿರ್ಮಾಣ ಉದ್ಯಮ ಉತ್ತಮವಾಗಿದೆ ಎಂದು ರಾಜ್ಯ ಕಲ್ಲುಕ್ವಾರಿ ಮಾಲಿಕರ ಸಂಘದ ಸಿದ್ದರಾಜು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
