ನವದೆಹಲಿ(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸುತ್ತಿದ್ದಾರೆ.

ಈ ವೇಳೆ ದೇಶದ ಕೃಷಿ ವಲಯಕ್ಕೆ ಅತ್ಯಂತ ಸಿಹಿ ಸುದ್ದಿ ನೀಡಿರುವ ಮೋದಿ ಸರ್ಕಾರ, ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಬಂಪರ್ ಕೊಡುಗೆ ಘೋಷಿಸಿದೆ.

ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ವರ್ಷಕ್ಕೆ 6000 ರೂ. ಸಹಾಯಧನ ಘೋಷಿಸಲಾಗಿದ್ದು, 2000 ರೂ.ನಂತೆ 3 ಕಂತುಗಳಲ್ಲಿ ಒಟ್ಟು 6000 ರೂ. ಸಹಾಯಧನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.

5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಈ ಯೋಜನೆ ಅನ್ವಯವಾಗಲಿದ್ದು, ಮೂರು ಕಂತುಗಳಲ್ಲಿ ವಾರ್ಷಿಕವಾಗಿ 6000 ರೂ. ನೀಡಲಾಗುವುದು ಎಂದು ಹೇಳಲಾಗಿದೆ. ಅಲ್ಲದೇ ಈ ಹಣವನ್ನು ನೇರವಾಗಿ ರೈತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದರಿಂದ ರೈತ ಮಧ್ಯವರ್ತಿಗಳ ಉಪಟಳದಿಂದಲೂ ಮುಕ್ತಿ ಪಡೆಯಲಿದ್ದಾನೆ.