ಪಿಪಿಎಫ್, ಎಸ್ ಸಿಎಸ್ಎಸ್, ಅಂಚೆ ಕಚೇರಿ ಉಳಿತಾಯ ಖಾತೆ ನಿಯಮ ಸಡಿಲಿಸಿದ ಸರ್ಕಾರ; ಏನೆಲ್ಲ ಬದಲಾಗಿದೆ?
ಪಿಪಿಎಫ್, ಎಸ್ ಸಿಎಸ್ಎಸ್, ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರ ಇತ್ತೀಚೆಗೆ ಸಡಿಲಿಸಿದೆ. ಹಾಗಾದ್ರೆ ಸರ್ಕಾರ ಏನೆಲ್ಲ ಬದಲಾವಣೆಗಳನ್ನು ಮಾಡಿದೆ? ಇಲ್ಲಿದೆ ಮಾಹಿತಿ.
ನವದೆಹಲಿ (ನ.21): ದುಡಿದ ಹಣದಲ್ಲಿ ಒಂದಿಷ್ಟನ್ನು ಉಳಿತಾಯ ಮಾಡಲು ಪ್ರತಿಯೊಬ್ಬರೂ ಬಯಸುತ್ತಾರೆ. ಉಳಿತಾಯದ ವಿಷಯ ಬಂದಾಗ ಮೊದಲು ನೆನಪಾಗೋದು ಅಂಚೆ ಕಚೇರಿ ಉಳಿತಾಯ ಯೋಜನೆಗಳು. ಅಂಚೆ ಕಚೇರಿಯಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳು ಲಭ್ಯವಿವೆ. ಸರ್ಕಾರಿ ಬೆಂಬಲಿತ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಆದಾಯ ಸಿಗುವ ಜೊತೆಗೆ ಹಣ ಕೂಡ ಸುರಕ್ಷಿತವಾಗಿರುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿ ಎಸ್ ಎಸ್) ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ಇತ್ತೀಚೆಗೆ ನಿಯಮಗಳನ್ನು ಸಡಿಲಗೊಳಿಸಿದೆ. ಹಣಕಾಸು ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿ ನಿಯಮಗಳನ್ನು ರೂಪಿಸುತ್ತದೆ. ಪ್ರಸ್ತುತ ಸರ್ಕಾರ 9 ವಿಧದ ಸಣ್ಣ ಉಳಿತಾಯ ಯೋಜನೆಗಳನ್ನು ಒದಗಿಸುತ್ತದೆ. ಇದರಲ್ಲಿ ಆರ್ ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ), ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ)ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದೆ.
ಏನೆಲ್ಲ ಬದಲಾವಣೆಯಾಗಿದೆ?
ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್)
ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ (ಎಸ್ ಸಿಎಸ್ ಎಸ್) ಹೊಸ ನಿಯಮಗಳು ಖಾತೆ ತೆರೆಯಲು ಪ್ರಸ್ತುತವಿರು ಒಂದು ತಿಂಗಳ ಅವಧಿಗೆ ಬದಲು ಮೂರು ತಿಂಗಳ ಕಾಲಾವಕಾಶ ನೀಡಿದೆ. 2023ರ ನವೆಂಬರ್ 9ರ ಗಜೆಟ್ ಅಧಿಸೂಚನೆ ಅನ್ವಯ ಒಬ್ಬ ವ್ಯಕ್ತಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿಯಲ್ಲಿ ನಿವೃತ್ತಿ ಪ್ರಯೋಜನಗಳನ್ನು ಪಡೆದ ಮೂರು ತಿಂಗಳೊಳಗೆ ಈ ಖಾತೆ ತೆರೆಯಬಹುದು. ಇನ್ನು ಈ ಅಧಿಸೂಚನೆ ಅನ್ವಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿಯಲ್ಲಿ ತೆರೆದ ಖಾತೆಯಲ್ಲಿನ ಠೇವಣಿ ಬಡ್ಡಿಯನ್ನು ಮೆಚ್ಯುರಿಟಿ ದಿನಾಂಕ ಅಥವಾ ವಿಸ್ತರಣೆಗೊಂಡ ಮೆಚ್ಯುರಿಟಿ ದಿನಾಂಕದ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ.
ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್‌ಗಳಿಗೆ ಆರ್‌ಬಿಐ ನಿಯಮ ಇನ್ನಷ್ಟು ಬಿಗಿ!
ಸಾರ್ವಜನಿಕರ ಭವಿಷ್ಯ ನಿಧಿ (ಪಿಪಿಎಫ್)
ಪಿಪಿಎಫ್ ಖಾತೆಗಳನ್ನು ಅವಧಿಗೂ ಮುನ್ನ ಕ್ಲೋಸ್ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (ತಿದ್ದುಪಡಿ) ಯೋಜನೆ 2023 ಎಂಬ ಹೆಸರಿನ ಅಧಿಸೂಚನೆ ಮೂಲಕ ಪಿಪಿಎಫ್ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಅವಧಿಗೂ ಮುನ್ನ ವಿತ್ ಡ್ರಾ ಮಾಡುವ ಕುರಿತ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.
ಅಂಚೆ ಕಚೇರಿ ಉಳಿತಾಯ ಖಾತೆ
ಖಾತೆ ತೆರೆದ ದಿನಾಂಕದಿಂದ 4 ವರ್ಷಗಳ ಬಳಿಕ ಐದು ವರ್ಷಗಳ ಅವಧಿಯ ಠೇವಣಿಯಿಂದ ಹಣ ವಿತ್ ಡ್ರಾ ಮಾಇದರೆ ಅದಕ್ಕೆ ಅಂಚೆ ಕಚೇರಿ ಉಳಿತಾಯ ಖಾತೆಗೆ ಅನ್ವಯಿಸುವ ಬಡ್ಡಿಯನ್ನೇ ನೀಡಲಾಗುತ್ತದೆ. ಪ್ರಸ್ತುತವಿರುವ ನಿಯಮಗಳ ಅಡಿಯಲ್ಲಿ ಒಂದು ವೇಳೆ ಐದು ವರ್ಷಗಳ ಅವಧಿಯ ಖಾತೆಯನ್ನು ನಾಲ್ಕು ವರ್ಷಗಳಲ್ಲಿ ಕ್ಲೋಸ್ ಮಾಡಿದರೆ ಆಗ ಬಡ್ಡಿಯನ್ನು ಮೂರು ವರ್ಷಗಳ ಅವಧಿ ಠೇವಣಿ ಖಾತೆಗೆ ಅನ್ವಯಿಸುವಂತೆ ಲೆಕ್ಕ ಹಾಕಲಾಗುತ್ತಿದೆ.
ನಿಮ್ಮ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ಕಂಪನಿ ಇಪಿಎಫ್ ಒಗೆ ಜಮೆ ಮಾಡಿಲ್ವಾ? ಹಾಗಾದ್ರೆ ಹೀಗೆ ಮಾಡಿ..
ಜಂಟಿ ಖಾತೆ ಹೊಂದಿರೋರ ಸಂಖ್ಯೆ ಮಿತಿ, ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬದಲಾವಣೆ, ಬಡ್ಡಿ ಲೆಕ್ಕಾಚಾರ ಹಾಗೂ ಕ್ರೆಡಿಟಿಂಗ್ ನಲ್ಲಿ ಪರಿಷ್ಕರಣೆ ಸೇರಿದಂತೆ ಮೂರು ನಿಯಮಗಳಲ್ಲಿ 2023ರ ಜುಲೈ 3ರಂದು ಇ-ಗಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ. ಈ ಬದಲಾವಣೆಗಳನ್ನು ಒಟ್ಟಾಗಿ ಅಂಚೆ ಕಚೇರಿ ಉಳಿತಾಯ ಖಾತೆ (ತಿದ್ದುಪಡಿ) ಯೋಜನೆ 2023 ಎಂದು ಕರೆಯಲಾಗುತ್ತದೆ.