ನಿಮ್ಮ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ಕಂಪನಿ ಇಪಿಎಫ್ ಒಗೆ ಜಮೆ ಮಾಡಿಲ್ವಾ? ಹಾಗಾದ್ರೆ ಹೀಗೆ ಮಾಡಿ..
ಉದ್ಯೋಗದಾತ ಸಂಸ್ಥೆ ಉದ್ಯೋಗಿಯ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ಇಪಿಎಫ್ ಒಗೆ ಜಮೆ ಮಾಡದ ಸಂದರ್ಭದಲ್ಲಿ ಉದ್ಯೋಗಿ ದೂರು ದಾಖಲಿಸಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಉದ್ಯೋಗ ಹೊಂದಿರುವ ಪ್ರತಿಯೊಬ್ಬರು ಭವಿಷ್ಯ ನಿಧಿ ಖಾತೆ ಹೊಂದಿರುತ್ತಾರೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ನಿವೃತ್ತಿ ಜೀವನಕೋಸ್ಕರ ಇರುವ ಉಳಿತಾಯ ಯೋಜನೆಯಾಗಿದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಇಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಕೂಡ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67 ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ. ಆದರೆ, ಕೆಲವು ಉದ್ಯೋಗದಾತ ಸಂಸ್ಥೆಗಳು ಉದ್ಯೋಗಿಯ ಇಪಿಎಫ್ ಖಾತೆಗೆ ಹಣ ಜಮೆ ಮಾಡದೇ ಇರಬಹುದು. ಇದರಿಂದ ನಿಮ್ಮ ಖಾತೆ ಡೀಫಾಲ್ಟ್ ಆಗುವ ಸಾಧ್ಯತೆ ಇರುತ್ತದೆ.
ಉದ್ಯೋಗದಾತರಿಂದ ಪಿಎಫ್ ಡಿಫಾಲ್ಟ್ ಆದ್ರೆ?
ಇಪಿಎಫ್ ಒ ನಿಗದಿಪಡಿಸಿರುವ ದರಗಳ ಅನ್ವಯ ಇಪಿಎಫ್ ಖಾತೆಗೆ ಕೊಡುಗೆ ನೀಡಲು ವಿಫಲರಾದರೆ ಬಾಕಿ ಉಳಿದಿರುವ ಮೊತ್ತಕ್ಕೆ ಅವರು ಬಡ್ಡಿ ಹಾಗೂ ದಂಡ ಪಾವತಿಸಬೇಕಾಗುತ್ತದೆ. ದಂಡ ಹಾಗೂ ಬಡ್ಡಿ ದರವನ್ನು ಇಪಿಎಫ್ ಒ ನಿಗದಿಪಡಿಸಿರುತ್ತದೆ. ಒಂದು ವೇಳೆ ಉದ್ಯೋಗಿ ವೇತನದಿಂದ ಪಿಎಫ್ ಮೊತ್ತವನ್ನು ಕಡಿತಗೊಳಿಸಲಾಗಿದ್ದು, ಅದನ್ನು ಪಿಎಫ್ ಖಾತೆಗೆ ಜಮೆ ಮಾಡದಿದ್ರೆ ಈ ಬಗ್ಗೆ ಉದ್ಯೋಗಿ ಇಪಿಎಫ್ ಒಗೆ ದೂರು ನೀಡಬಹುದು. ಇನ್ನು ಉದ್ಯೋಗಿ ತನ್ನ ಇಪಿಎಫ್ ಖಾತೆಗೆ ಹಣ ಕ್ರೆಡಿಟ್ ಆಗಿದೆಯೋ ಇಲ್ಲವೋ ಎಂಬುದನ್ನು ಇಪಿಎಫ್ ಒ ಮೆಂಬರ್ ಪೋರ್ಟಲ್ ಅಥವಾ ಪಿಎಫ್ ಕಚೇರಿಯನ್ನು ಸಂಪರ್ಕಿಸುವ ಮೂಲಕ ತಿಳಿಯಬಹುದು.
EPF ಖಾತೆಯಿಂದ ಹಣ ವಿತ್ ಡ್ರಾ ಮಾಡೋ ಮುನ್ನ ತಿಳಿದಿರಲಿ ಈ ವಿಚಾರ;ಇಲ್ಲವಾದ್ರೆ ತೆರಿಗೆ ಕಟ್ಟಬೇಕಾಗುತ್ತದೆ ಎಚ್ಚರ!
ಇಪಿಎಫ್ ಒ ವಿಧಿಸುವ ದಂಡ ಹಾಗೂ ಬಡ್ಡಿ
ಎರಡು ವರ್ಷಗಳಿಗಿಂತ ಕಡಿಮೆ ಅವಧಿಯ ಪಿಎಫ್ ಖಾತೆಗಳಿಗೆ ಇಪಿಎಫ್ ಒ ವಾರ್ಷಿಕ ಶೇ.5ರಷ್ಟು ಬಡ್ಡಿ ವಿಧಿಸುತ್ತದೆ. ಇನ್ನು 2-4 ತಿಂಗಳ ಅವಧಿಯ ಪಿಎಫ್ ಖಾತೆಗಳಿಗೆ ವಾರ್ಷಿಕ ಶೇ.10ರಷ್ಟು, 4-6 ತಿಂಗಳ ಅವಧಿಯ ಪಿಎಫ್ ಖಾತೆಗಳಿಗೆ ವಾರ್ಷಿಕ ಶೇ.15ರಷ್ಟು ಹಾಗೂ ಆರು ತಿಂಗಳು ಮೇಲ್ಪಟ್ಟ ಪಿಎಫ್ ಖಾತೆಗಳಿಗೆ ವಾರ್ಷಿಕ ಶೇ.25ರಷ್ಟು ಬಡ್ಡಿ ವಿಧಿಸುತ್ತದೆ. ಹಾಗೆಯೇ ಬಾಕಿ ಉಳಿಸಿರುವ ಮೊತ್ತಕ್ಕೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.
ದೂರು ದಾಖಲಿಸೋದು ಹೇಗೆ?
ಒಂದು ವೇಳೆ ನಿಮ್ಮ ಉದ್ಯೋಗದಾತ ಸಂಸ್ಥೆ ನಿಮ್ಮ ಇಪಿಎಫ್ ಖಾತೆಗೆ ಹಣ ಜಮೆ ಮಾಡದಿದ್ರೆ ನೀವು ಇಪಿಎಫ್ ಒಗೆ ಆನ್ ಲೈನ್ ದೂರು ದಾಖಲಿಸಬಹುದು. ಇಲ್ಲವೇ ಲಿಖಿತ ದೂರು ಕೂಡ ನೀಡಬಹುದು. ಆನ್ ಲೈನ್ ದೂರು ಸಲ್ಲಿಕೆಗೆ ನೀವು EPFiGMS ಪೋರ್ಟಲ್ ಗೆ ಭೇಟಿ ನೀಡಬೇಕು. ಆನ್ ಲೈನ್ ದೂರು ಸಲ್ಲಿಕೆ ಸುಲಭ ವಿಧಾನವಾಗಿದೆ. ನಿಮ್ಮ ಯುಎಎನ್, ಉದ್ಯೋಗದಾತ ಸಂಸ್ಥೆ ಇಸ್ಟ್ಯಾಬ್ಲಿಷ್ ಮೆಂಟ್ ಕೋಡ್ ಹಾಗೂ ನಿಮ್ಮ ದೂರಿನ ಮಾಹಿತಿಗಳನ್ನು ಇದರಲ್ಲಿ ನೀಡಬೇಕು. ಒಂದು ವೇಳೆ ನಿಮಗೆ ಆನ್ ಲೈನ್ ನಲ್ಲಿ ದೂರು ಸಲ್ಲಿಸಲು ಸಾಧ್ಯವಾಗದಿದ್ರೆ ಲಿಖಿತ ದೂರು ನೀಡಬಹುದು. ಪಿಎಫ್ ಪ್ರಾದೇಶಿಕ ಕಚೇರಿಗೆ ದೂರು ಸಲ್ಲಿಸಬಹುದು.
ಎನ್‌ಪಿಎಸ್, ಪಿಪಿಎಫ್ ಅಥವಾ ವಿಪಿಎಫ್? ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಎಲ್ಲಿ ಹೂಡಿಕೆ ಮಾಡ್ಬೇಕು ನೋಡಿ..
ಒಮ್ಮೆ ನೀವು ದೂರು ಸಲ್ಲಿಸಿದ ಬಳಿಕ ಇಪಿಎಫ್ ಒ ಸಂಬಂಧಪಟ್ಟ ಅಧಿಕಾರಿಗಳಿಗೆ ಇದನ್ನು ಕಳುಹಿಸುತ್ತದೆ. ಇನ್ನು ಉಮಂಗ್ ಮೊಬೈಲ್ ಆಪ್ ಮೂಲಕ ಕೂಡ ನೀವು ದೂರು ದಾಖಲಿಸಬಹುದು. ಇನ್ನು ಒಮ್ಮೆ ನಿಮ್ಮ ದೂರು ದಾಖಲಾದ ಬಳಿಕ ವಿಧಿಷ್ಟ ನೋಂದಣಿ ಸಂಖ್ಯೆ ಹಾಗೂ ಅಟೋ ಜನರೇಟೆಡ್ ಸ್ವೀಕೃತಿಯನ್ನು ಎಸ್ ಎಂಎಸ್ ಹಾಗೂ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ. ಇನ್ನು ನಿಮಗೆ ಇಪಿಎಫ್ ಒ ನೀಡಿದ ಉತ್ತರದಿಂದ ತೃಪ್ತಿ ಸಿಗದಿದ್ದರೆ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯಕ್ಕೆ ದೂರು ಸಲ್ಲಿಸಬಹುದು.