ನವದೆಹಲಿ(ಮಾ.30): ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್‌) ಹಾಗೂ ರಾಷ್ಟ್ರೀಯ ಉಳಿತಾಯ ನಿಧಿ(ಎನ್‌ಎಸ್‌ಸಿ) ಸೇರಿದಂತೆ ಯಾವುದೇ ಸಣ್ಣ ಉಳಿತಾಯ ಯೋಜನೆಗಳ 2019-20ನೇ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

ಇದುವರೆಗೆ ನೀಡಲಾಗುತ್ತಿದ್ದ 8% ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಅಂತೆಯೇ ಕಿಸಾನ್‌ ವಿಕಾಸ ಪತ್ರ(ಕೆವಿಪಿ)ಕ್ಕೂ 112 ತಿಂಗಳು ಪೂರ್ಣವಾದ ಬಳಿಕ ಈವರೆಗೆ ನೀಡಲಾಗುತ್ತಿದ್ದ 7.7% ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ತ್ರೈಮಾಸಿಕ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗುತ್ತಾ ಬರಲಾಗಿದ್ದು, ಮುಂದಿನ ಏಪ್ರಿಲ್‌-ಜೂನ್‌ ಅವಧಿಯ ಅಂದರೆ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

ಹಿಂದಿನ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದ ಬಡ್ಡಿದರವೇ ಮುಂದುವರಿಯಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಉಳಿದಂತೆ ಹಿರಿಯ ನಾಗರಿಕರ ಉಳಿತಾಯ ನಿಧಿಯ ಬಡ್ಡಿದರ(8.7%)ದಲ್ಲಿಯೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯ ನಿಧಿಯ ಬಡ್ಡಿದರವನ್ನು 8.5%ಗೆ ನಿಗದಿಪಡಿಸಲಾಗಿದೆ.