ಉತ್ತಮ ರಿಟರ್ನ್ಸ್ ನೀಡುವ ಅಂಚೆ ಇಲಾಖೆಯ 5 ಯೋಜನೆಗಳು ಇವೇ ನೋಡಿ
ಭಾರತದಲ್ಲಿ ಹೂಡಿಕೆಗೆ ಇಂದಿಗೂ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಇತ್ತೀಚೆಗೆ ಮಂಡನೆಯಾದ 2023-24ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಂಚೆ ಕಚೇರಿಯ ಎರಡು ಉಳಿತಾಯ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿದ್ದಾರೆ. ಹಾಗಾದ್ರೆ ಉತ್ತಮ ರಿಟರ್ನ್ಸ್ ನೀಡುವ ಅಂಚೆ ಇಲಾಖೆಯ 5 ಉಳಿತಾಯ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
Business Desk: ಹೂಡಿಕೆ ವಿಚಾರದಲ್ಲಿ ಭಾರತದ ಮಧ್ಯಮ ವರ್ಗದ ಜನರು ಹಾಗೂ ಹಿರಿಯ ನಾಗರಿಕರು ಮೊದಲು ಗಮನಿಸೋದು ಸುರಕ್ಷತೆಯನ್ನು. ಸುರಕ್ಷಿತ, ನಿರ್ದಿಷ್ಟ ರಿಟರ್ನ್ಸ್ ಭರವಸೆ ನೀಡುವ ಹಾಗೂ ಕಡಿಮೆ ಅಪಾಯದ ಹೂಡಿಕೆಗೆ ಇವರು ಹೆಚ್ಚಿನ ಒತ್ತು ನೀಡುತ್ತಾರೆ. ಇದೇ ಕಾರಣಕ್ಕೆ ಇಂದಿಗೂ ಅಂಚೆ ಕಚೇರಿ ಉಳಿತಾಯ ಯೋಜನೆಗಳೆಂದ್ರೆ ಜನರಿಗೆ ಅಚ್ಚುಮೆಚ್ಚು. ಅಂಚೆ ಕಚೇರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ ಕೂಡ ಒದಗಿಸುತ್ತದೆ. 2023-24ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಂಚೆ ಕಚೇರಿಯ ಕೆಲವು ಜನಪ್ರಿಯ ಯೋಜನೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ರೆಪೋ ದರ ಏರಿಕೆ ಬೆನ್ನಲ್ಲೇ 2023ನೇ ಸಾಲಿನ ಜನವರಿ-ಮಾರ್ಚ್ ಅವಧಿಗೆ ಅಂಚೆ ಕಚೇರಿಯ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಈ ಮೂಲಕ ಉಳಿತಾಯ ಹೆಚ್ಚಿಸಲು ನಾಗರಿಕರಿಗೆ ಉತ್ತೇಜನ ನೀಡಿದೆ. ಅಂಚೆ ಇಲಾಖೆ ಟರ್ಮ್ ಡೆಫಾಸಿಟ್, ನ್ಯಾಷನಲ್ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.
1.ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ (MIS): ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS)ಅಥವಾ ಖಾತೆ ಹೂಡಿಕೆದಾರರಿಗೆ (Investors) ನಿಗದಿತ ರಿಟರ್ನ್ ನೀಡುತ್ತದೆ. ಈ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಮಾಸಿಕ ಆದಾಯ (Monthly Income) ಸಿಗುತ್ತದೆ. ಈ ಯೋಜನೆಯ ಠೇವಣಿ ಮಿತಿಯನ್ನು ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದೇ ಖಾತೆ ಹೊಂದಿರೋರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5ಲಕ್ಷ ರೂ.ನಿಂದ 9ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಜಂಟಿ ಖಾತೆಗೆ 9ಲಕ್ಷ ರೂನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಎಂಐಎಸ್ ಅಡಿಯಲ್ಲಿನ ಠೇವಣಿಗೆ ಪ್ರಸ್ತುತ ವಾರ್ಷಿಕ ಶೇ.7.10 ಬಡ್ಡಿದರ (Interest rate) ಇದೆ.
EPFO ಪೋರ್ಟಲ್ ನಲ್ಲಿ KYC ನವೀಕರಿಸೋದು ಹೇಗೆ? ಇಲ್ಲಿದೆ ಮಾಹಿತಿ
2.ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS): 60 ವರ್ಷ ತುಂಬಿದ ಅಥವಾ 55ನೇ ವಯಸ್ಸಿಗೆ ಸ್ವಯಂ ನಿವೃತ್ತಿ ಪಡೆದವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದು 5 ವರ್ಷಗಳ ಅವಧಿಯದ್ದಾಗಿದೆ. ಈ ಯೋಜನೆ ಹೂಡಿಕೆ ಮಿತಿಯನ್ನು ಸರ್ಕಾರ 15 ಲಕ್ಷ ರೂ.ನಿಂದ 30ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈ ಖಾತೆಗೆ ವಾರ್ಷಿಕ ಶೇ. 8 ಬಡ್ಡಿ ನೀಡಲಾಗುತ್ತಿದೆ.
3.ಸುಕನ್ಯಾ ಸಮೃದ್ಧಿ ಯೋಜನೆ (SSY): ಇದು ಹೆಣ್ಣುಮಗುವಿಗಾಗಿಯೇ ರೂಪಿಸಲ್ಪಟ್ಟಿರುವ ಉಳಿತಾಯ ಯೋಜನೆ. 10 ವರ್ಷ ವಯಸ್ಸಿನೊಳಗಿನ ಯಾವುದೇ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆ ಖಾತೆ ತೆರೆಯಬಹುದು. ಒಂದು ಕುಟುಂಬದ ಗರಿಷ್ಠ ಎರಡು ಹೆಣ್ಣುಮಕ್ಕಳ ಹೆಸರಲ್ಲಿ ಪ್ರತ್ಯೇಕ ಖಾತೆ ತೆರೆಯಲು ಅವಕಾಶವಿದೆ. ಖಾತೆ ತೆರೆದ 15 ವರ್ಷಗಳ ತನಕ ಈ ಖಾತೆಗೆ ಹಣ ಜಮಾ ಮಾಡಿದರೆ ಸಾಕು. ವಾರ್ಷಿಕ ಕನಿಷ್ಠ 250 ರೂ. ನಿಂದ ಗರಿಷ್ಠ 1,50,000ರೂ. ತನಕ ಈ ಖಾತೆಯಲ್ಲಿ ಜಮಾ ಮಾಡಬಹುದು. ಪ್ರಸ್ತುತ ಈ ಖಾತೆಯಲ್ಲಿರೋ ಹಣಕ್ಕೆ ವಾರ್ಷಿಕ ಶೇ. 7.6 ಬಡ್ಡಿ ವಿಧಿಸಲಾಗುತ್ತಿದೆ. ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ ಹಣ120 ತಿಂಗಳುಗಳಲ್ಲಿ ದುಪ್ಪಟ್ಟಾಗುತ್ತದೆ.
ಇನ್ಮುಂದೆ ನಾಣ್ಯಗಳು ಬೇಕಾದ್ರೆ ಬ್ಯಾಂಕಿಗೆ ಹೋಗ್ಬೇಕಾಗಿಲ್ಲ, ವೆಂಡಿಂಗ್ ಮಷಿನ್ ನಲ್ಲೇ ಪಡೆಯಬಹುದು!
4.ಕಿಸಾನ್ ವಿಕಾಸ್ ಪತ್ರ (KVP): ಅಂಚೆ ಇಲಾಖೆ 1988ರಲ್ಲಿ ಈ ಯೋಜನೆಯನ್ನು ಪರಿಚಯಿಸಿತು. ಪ್ರಸ್ತುತ ಕೆವಿಪಿ ಹೂಡಿಕೆ ಮೇಲೆ ವಾರ್ಷಿಕ ಶೇ.7.2 ಬಡ್ಡಿದರವಿದೆ. ಈ ಯೋಜನೆ ಮೆಚ್ಯುರಿಟಿ ಅವಧಿ 10 ವರ್ಷ 4 ತಿಂಗಳು. ಭಾರತದ ಯಾವುದೇ ವಯಸ್ಕ ವ್ಯಕ್ತಿ ಕೆವಿಪಿಯಲ್ಲಿ ತನ್ನ ಹೆಸರಿನಲ್ಲಿ ಅಥವಾ ಅಪ್ರಾಪ್ತರ ಪರವಾಗಿ ಹೂಡಿಕೆ ಮಾಡಬಹುದು. ಮೂವರು ವಯಸ್ಕರು ಜಂಟಿಯಾಗಿ ಕೂಡ ಕೆವಿಪಿಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಹೂಡಿಕೆದಾರರು ಕನಿಷ್ಠ 1,000ರೂ. ಅನ್ನು ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಬೇಕು. ಆದರೆ, ಹೂಡಿಕೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ
5.ರಾಷ್ಟ್ರೀಯ ಉಳಿತಾಯ ಪತ್ರ (NSC): ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ ಎನ್ ಎಸ್ ಸಿ 5 ವರ್ಷ ಅವಧಿಯ ಹೂಡಿಕೆಯಾಗಿದೆ. ಕೇವಲ100 ರೂ. ಜಮೆ ಮಾಡೋ ಮೂಲಕ NSCಯಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಪ್ರಸ್ತುತ NSCಗೆ ವಾರ್ಷಿಕ ಶೇ.7 ಬಡ್ಡಿ ಸಿಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಎನ್ಎಸ್ ಸಿಯಲ್ಲಿ ಹೂಡಿಕೆ ಮಾಡಿರೋ ಮೊತ್ತಕ್ಕೆ ಗರಿಷ್ಠ 1.50 ಲಕ್ಷ ರೂ. ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.