Asianet Suvarna News Asianet Suvarna News

ಇನ್ಮುಂದೆ ನಾಣ್ಯಗಳು ಬೇಕಾದ್ರೆ ಬ್ಯಾಂಕಿಗೆ ಹೋಗ್ಬೇಕಾಗಿಲ್ಲ, ವೆಂಡಿಂಗ್ ಮಷಿನ್ ನಲ್ಲೇ ಪಡೆಯಬಹುದು!

ನಾಣ್ಯಗಳು ಜನರಿಗೆ ಸುಲಭ ಹಾಗೂ ಸರಳವಾಗಿ ಲಭ್ಯವಾಗಬೇಕೆಂಬ ಉದ್ದೇಶದಿಂದ ಆರ್ ಬಿಐ ಕಾಯಿನ್ ವೆಂಡಿಂಗ್ ಮಷಿನ್ ಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಈ ಬಗ್ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್‌  ದಾಸ್ ಮಾಹಿತಿ ನೀಡಿದ್ದಾರೆ ಕೂಡ. ಮೊದಲ ಹಂತದಲ್ಲಿ ಆರ್ ಬಿಐ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್ ಅನ್ನು ದೇಶದ 12 ನಗರಗಳಲ್ಲಿ ಪ್ರಾರಂಭಿಸಲಾಗುವುದು. 
 

RBI to Launch QR Code Based Coin Vending Machine How Will This Work
Author
First Published Feb 8, 2023, 6:02 PM IST

ಮುಂಬೈ (ಫೆ.8): ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್ ಪೈಲಟ್ ಯೋಜನೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಚಾಲನೆ ನೀಡಲಿದೆ. ಈ ಬಗ್ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್ ಬುಧವಾರ ಘೋಷಣೆ ಮಾಡಿದ್ದಾರೆ. ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ  ಬಳಿಕ ಗವರ್ನರ್ ಶಕ್ತಿಕಾಂತ್‌  ದಾಸ್ ಈ ಮಾಹಿತಿ ನೀಡಿದ್ದಾರೆ. ನಾಣ್ಯಗಳ ಲಭ್ಯತೆ ಹಾಗೂ ವಿತರಣೆಯನ್ನು ಉತ್ತೇಜಿಸುವ ಗುರಿಯೊಂದಿಗೆ ವೆಂಡಿಂಗ್ ಮಷಿನ್ ಗಳನ್ನು ಪ್ರಾರಂಭಿಸುತ್ತಿರೋದಾಗಿ ಆರ್ ಬಿಐ ತಿಳಿಸಿದೆ. ಈ ವೆಂಡಿಂಗ್ ಮಷಿನ್ ನಿಂದಾಗಿ ಜನರು ನಾಣ್ಯಗಳನ್ನು ಪಡೆಯಲು ಪ್ರತಿ ಬಾರಿ ಬ್ಯಾಂಕಿಗೆ ಭೇಟಿ ನೀಡುವುದು ತಪ್ಪುತ್ತದೆ. ಪ್ರಸ್ತುತ ನೋಟುಗಳನ್ನು ನೀಡಿ ಅದಕ್ಕೆ ಪ್ರತಿಯಾಗಿ ಅಷ್ಟೇ ಮೊತ್ತದ ನಾಣ್ಯಗಳನ್ನು ಬ್ಯಾಂಕಿನಿಂದ ಪಡೆಯುತ್ತೇವೆ. ಆದರೆ, ವೆಂಡಿಂಗ್ ಮಷಿನ್ ನಿಂದ ನಾಣ್ಯಗಳನ್ನು ಪಡೆಯಲು ಯುಪಿಐ ಮೂಲಕ ಗ್ರಾಹಕರ ಬ್ಯಾಂಕ್ ಖಾತೆಯಿಂದ ಅಷ್ಟು ಮೊತ್ತದ ಹಣವನ್ನು ಕಡಿತ ಮಾಡಲಾಗುತ್ತದೆ. ಕಾಯಿನ್ ವೆಂಡಿಂಗ್ ಮಷಿನ್ ನಿಂದ ನಾಣ್ಯಗಳು ಸುಲಭವಾಗಿ ಸಿಗಲಿವೆ. ಆರ್ ಬಿಐ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್ ಅನ್ನು ದೇಶದ 12 ನಗರಗಳಲ್ಲಿ ಪ್ರಾರಂಭಿಸಲಿದೆ. 

ವೆಂಡಿಂಗ್ ಮಷಿನ್ ಮುಖ್ಯಾಂಶಗಳು
-ಭಾರತೀಯ ರಿಸರ್ವ್ ಬ್ಯಾಂಕ್ ಕ್ಯುಆರ್ ಕೋಡ್ ಆಧಾರಿತ ವೆಂಡಿಂಗ್ ಮಷಿನ್ ಪೈಲಟ್ ಪ್ರಾಜೆಕ್ಟ್ ಗಳನ್ನು 12 ನಗರಗಳಲ್ಲಿ ಪ್ರಾರಂಭಿಸಲಿದೆ.
*ಗ್ರಾಹಕರ ಖಾತೆಯಿಂದ ಹಣ ಕಡಿತ ಮಾಡುವ ಮೂಲಕ ಅಷ್ಟೇ ಮೊತ್ತದ ನಾಣ್ಯಗಳನ್ನು ವೆಂಡಿಂಗ್ ಮಷಿನ್ ಮೂಲಕ ನೀಡಲಾಗುತ್ತದೆ.
*ಯುಪಿಐ ಬಳಸಿಕೊಂಡು ಈ ವೆಂಡಿಂಗ್ ಮಷಿನ್ ನಾಣ್ಯಗಳನ್ನು ನೀಡುತ್ತದೆ.
*ಇದು ನಾಣ್ಯಗಳು ಸುಲಭವಾಗಿ ಗ್ರಾಹಕರಿಗೆ ಲಭಿಸುವಂತೆ ಮಾಡುತ್ತದೆ.
*ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಅದರ ಯಶಸ್ಸನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರ್ ಬಿಐ ಗವರ್ನರ್ ತಿಳಿಸಿದ್ದಾರೆ.

ಬ್ಯಾಂಕ್ ಖಾತೆ ತೆರೆಯಲು ವಿಡಿಯೋ ಕೆವೈಸಿ; ಯಾವೆಲ್ಲ ಬ್ಯಾಂಕ್ ಗಳಲ್ಲಿ ಲಭ್ಯ?

ವಿದೇಶಿ ಪ್ರವಾಸಿಗರಿಗೆ ಯುಪಿಐ ಬಳಕೆಗೆ ಅವಕಾಶ
ಇನ್ನು ಮುಂದೆ ಭಾರತಕ್ಕೆ ಭೇಟಿ ನೀಡುವ ಎಲ್ಲ ವಿದೇಶಿ ಪ್ರವಾಸಿಗರು ಪಾವತಿಗೆ ಯುಪಿಐ ಬಳಸಲು ಅನುಮತಿ ನೀಡುವ ಬಗ್ಗೆ ಆರ್ ಬಿಐ ಯೋಚಿಸಿದೆ. ಇದರ ಭಾಗವಾಗಿಯೇ ಪ್ರಾರಂಭಿಕ ಹಂತದಲ್ಲಿ ಈ ಸೌಲಭ್ಯವನ್ನು ಆಯ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ G-20 ದೇಶಗಳ ಪ್ರಯಾಣಿಕರಿಗೆ ನೀಡಲಾಗುವುದು ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್ ತಿಳಿಸಿದ್ದಾರೆ.ಹಾಗೆಯೇ 10 ದೇಶಗಳಲ್ಲಿನ ಅನಿವಾಸಿ ಭಾರತೀಯರು (NRIಗಳು) ತಮ್ಮ ಭಾರತದ ಫೋನ್ ಸಂಖ್ಯೆಯನ್ನು ಅವಲಂಬಿಸದೆಯೇ ವಹಿವಾಟುಗಳಿಗಾಗಿ ಯುಪಿಐ ಸೇವೆಗಳನ್ನು ಬಳಸಬಹುದು. ಸಿಂಗಾಪುರ, ಅಮೆರಿಕ (ಯುಎಸ್), ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ಸೇರಿ 10 ದೇಶಗಳಿಗೆ ಅವಕಾಶ ನೀಡಲಾಗಿದೆ. 

ಸತತ 6ನೇ ಬಾರಿಗೆ ಬಡ್ಡಿ ಏರಿಕೆ ಬರೆ: ರೆಪೋ ದರ ಶೇ. 6.5ಕ್ಕೆ ಹೆಚ್ಚಿಸಿದ ಆರ್‌ಬಿಐ

ವಿದೇಶಗಳಲ್ಲೂ ಫೋನ್ ಪೇ ಪಾವತಿ
ಭಾರತದಲ್ಲಿ ಫೋನ್ ಪೇ ಯುಪಿಐ ವಹಿವಾಟುಗಳಲ್ಲಿ ಅತೀದೊಡ್ಡ ಪಾಲನ್ನು ಹೊಂದಿರುವ ಮೂಲಕ ದೇಶದ ಅತೀದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿ ಗುರುತಿಸಿಕೊಂಡಿದೆ. ಇದೀಗ ಫೋನ್ ಪೇ ಬಳಸಿ ವಿದೇಶಗಳಲ್ಲೂ ಪಾವತಿ ಮಾಡಬಹುದಾಗಿದೆ. ಈ ಮೂಲಕ ವಿದೇಶಗಳಿಗೂ ತನ್ನ ಸೇವೆ ವಿಸ್ತರಿಸಿದ ಭಾರತದ ಮೊದಲ ಫಿನ್ ಟೆಕ್ ಆಪ್ ಎಂಬ ಹೆಗ್ಗಳಿಕೆಗೆ ಫೋನ್ ಪೇ ಪಾತ್ರವಾಗಿದೆ. ವಿದೇಶಕ್ಕೆ ಪ್ರಯಾಣಿಸುವ ಭಾರತೀಯರು ಈಗ ಫೋನ್ ಪೇ ಮೂಲಕ ಅಲ್ಲಿನ ವ್ಯಾಪಾರಿಗಳಿಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಇದು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಮಾದರಿಯಲ್ಲೇ ಕಾರ್ಯನಿರ್ವಹಿಸಲಿದೆ. ಅಂದರೆ ಭಾರತೀಯ ತಾನು ಭೇಟಿ ನೀಡಿದ ದೇಶದಲ್ಲಿ ಫೋನ್ ಪೇ ಮೂಲಕ ಅಲ್ಲಿನ ವರ್ತಕನಿಗೆ ಪಾವತಿಸಿದಾಗ ಆತನ ಬ್ಯಾಂಕ್ ಖಾತೆಯಿಂದ ಆ ದೇಶದ ಕರೆನ್ಸಿ ಮೌಲ್ಯದ ಹಣ ಕಡಿತವಾಗುತ್ತದೆ. ಆರಂಭಿಕ ಹಂತದಲ್ಲಿ ಈ ಸೌಲಭ್ಯ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್ ನಲ್ಲಿ ಲಭಿಸಲಿದೆ. ಈ ರಾಷ್ಟ್ರಗಳಲ್ಲಿ ಸ್ಥಳೀಯ ಕ್ಯುಆರ್ ಕೋಡ್ ಲಭ್ಯವಿದ್ದು, ಫೋನ್ ಪೇ ಪಾವತಿಗೆ ಬೆಂಬಲ ನೀಡಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರಗಳಿಗೆ ಫೋನ್ ಪೇ ತನ್ನ ಸೇವೆ ವಿಸ್ತರಿಸಲಿದೆ.

Follow Us:
Download App:
  • android
  • ios