ಆರೋಗ್ಯ ವಿಮಾ ಪಾಲಿಸಿಗಳನ್ನು ಹೊಸದಾಗಿ ಪಡೆಯಲು ಅಥವಾ ನವೀಕರಿಸಲು ಶೀಘ್ರದಲ್ಲೇ ಆಭಾ ಐಡಿಗಳನ್ನು ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಹೊಸ ಹಾಗೂ ಪ್ರಸಕ್ತ ಇರುವ ಪಾಲಿಸಿದಾರರಿಗೆ ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಸಂಖ್ಯೆ (ಐಡಿ) ಪಡೆಯುವಂತೆ ಎಲ್ಲ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಈಗಾಗಲೇ ನಿರ್ದೇಶನ ನೀಡಿದೆ. 

ನವದೆಹಲಿ (ಜೂ.13): ಹೊಸ ಹಾಗೂ ಈಗಾಗಲೇ ಇರುವ ಪಾಲಿಸಿದಾರರಿಗೆ ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಸಂಖ್ಯೆ (ಐಡಿ) ಪಡೆಯುವಂತೆ ಎಲ್ಲ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ನಿರ್ದೇಶನ ನೀಡಿದೆ. ಈ ಯೋಜನೆಯಡಿಯಲ್ಲಿ ಸರ್ಕಾರ ಪಾಲಿಸಿದಾರರ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಕಲೆ ಹಾಕಲಿದೆ ಹಾಗೂ ಅದನ್ನು ವಿಶಿಷ್ಟ ಆಭಾ ಐಡಿ ಅಡಿಯಲ್ಲಿ ಸಂಗ್ರಹಿಸಲಿದೆ. ಈ ಐಡಿ ಆರೋಗ್ಯ ಸಂಬಂಧಿ ಎಲ್ಲ ಮಾಹಿತಿಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿಡಲು ನೆರವು ನೀಡುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಂದೇ ಕಡೆ ಸಂಗ್ರಹಿಸಿಡೋದ್ರಿಂದ ಪಾರದರ್ಶಕತೆ ಜೊತೆಗೆ ಆಸ್ಪತ್ರೆಗಳಿಗೆ ರೋಗಿಗಳ ಆರೋಗ್ಯ ಮಾಹಿತಿಗಳನ್ನು ಸುಲಭ ಹಾಗೂ ತ್ವರಿತವಾಗಿ ಪಡೆಯಲು ನೆರವಾಗಲಿದೆ. ಜನರು ತಮ್ಮ ಆರೋಗ್ಯ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಹಾಗೂ ದೇಶಾದ್ಯಂತ ಆರೋಗ್ಯ ಸೇವೆಗಳನ್ನು ಪಡೆಯಬಹುದು. ಇದು ಆರೋಗ್ಯ ಸೇವೆ ನೀಡುವ ಸಂಸ್ಥೆಗಳಿಗೆ ಸಾಕಷ್ಟು ನೆರವು ನೀಡಲಿದೆ. ಇನ್ನು ಆಭಾ ಐಡಿ ಪಾಲಿಸಿದಾರರನ್ನು ಡಿಜಿಟಲಿ ಪತ್ತೆ ಹಚ್ಚಲು ನೆರವು ನೀಡುತ್ತದೆ. ಹಾಗೆಯೇ ಇದು ಎಲ್ಲ ನಾಗರಿಕರಿಗೆ ಉತ್ತಮ ಆರೋಗ್ಯ ಸೇವಾ ಪ್ರಯೋಜನಗಳನ್ನು ಒದಗಿಸುತ್ತದೆ. 

ಆಭಾ ಐಡಿ ಸಂಖ್ಯೆ ಸೃಷ್ಟಿಸೋದು ಹೇಗೆ?
ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಐಡಿಯನ್ನು ನೀವು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅಧಿಕೃತ ವೆಬ್‌ಸೈಟ್ ( https://ndhm.gov.in) ಮೂಲಕ ಪಡೆಯಬಹುದು. ಇನ್ನು ABHA ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡ ಪಡೆಯಬಹುದು. ಹಾಗೆಯೇ Paytm ಮಾದರಿಯ ಇತರ ಥರ್ಡ್ ಪಾರ್ಟಿ ಅಪ್ಲಿಕೇಷನ್ ಗಳ ಮೂಲಕ ಪಡೆಯಲು ಕೂಡ ಅವಕಾಶವಿದೆ. ಇನ್ನು ಕೆಲವು ಆರೋಗ್ಯ ಕೇಂದ್ರಗಳು ಆನ್ ಲೈನ್ ನೋಂದಣಿಗೆ ಸೌಲಭ್ಯ ಹಾಗೂ ಸಹಾಯ ನೀಡಬಲ್ಲವು.

ಆಯುಷ್ಮಾನ್ ಯೋಜನೆ ಶೀಘ್ರದಲ್ಲಿ ಮಧ್ಯಮ ವರ್ಗಕ್ಕೂ ವಿಸ್ತರಣೆ ಸಾಧ್ಯತೆ; ವಿಮಾ ಕವರೇಜ್ ಎಷ್ಟು?

ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಐಡಿ ಪಡೆಯಲು ಹೀಗೆ ಮಾಡಿ:
ಹಂತ 1: ಎನ್ ಡಿಎಚ್ಎಂ ಅಧಿಕೃತ ವೆಬ್ ಸೈಟ್ https://ndhm.gov.in ಭೇಟಿ ನೀಡಿ ಅಥವಾ ABHA ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ತೆರೆಯಿರಿ.
ಹಂತ 2: Create ABHA number ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಥವಾ https://abha.abdm.gov.in/register ಇಲ್ಲಿಗೆ ಹೋಗಿ.
ಹಂತ 3: ಈಗ ನಿಮಗೆ ಆಧಾರ್ ಅಥವಾ ಡ್ರೈವಿಂಗ್ ಲೈಸೆನ್ಸ್ ಬಳಸಿ ಆಭಾ ಸಂಖ್ಯೆ ಸೃಷ್ಟಿಸುವ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ.
ಹಂತ 4: ಈಗ ನಿಮ್ಮ ಆಯ್ಕೆ ಆಧಾರ್ ಆಗಿದ್ದರೆ ಅದರ ಸಂಖ್ಯೆ ನಮೂದಿಸಿ. ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಆಗಿದ್ದರೆ ಷರತ್ತುಗಳಿಗೆ ಒಪ್ಪಿಗೆ ನೀಡುವ I Agree ಆಯ್ಕೆ ಟಿಕ್ ಮಾಡಿ.
ಹಂತ 5: ಆ ಬಳಿಕ ಮೊಬೈಲ್ ಸಂಖ್ಯೆ ನಮೂದಿಸಿ. ಅದನ್ನು ದೃಢೀಕರಿಸಲು ನಿಮ್ಮ ಮೊಬೈಲ್ ಗೆ OTP ಕಳುಹಿಸಲಾಗುತ್ತದೆ.
ಹಂತ 6: ಈಗ ನಿಮ್ಮ ಮೊಬೈಲ್ ಸಂಖ್ಯೆ ದೃಢೀಕರಿಸಿದ ಬಳಿಕ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅರ್ಜಿ ಪುಟ ಲೋಡ್ ಆಗುತ್ತದೆ. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಲಿಂಗ, ಇ-ಮೇಲ್ ಐಡಿ ಮುಂತಾದ ಮಾಹಿತಿಗಳನ್ನು ಭರ್ತಿ ಮಾಡಿ.
ಹಂತ 7:  ಈ ಎಲ್ಲ ಮಾಹಿತಿಗಳ ಸಲ್ಲಿಕೆ ಬಳಿಕ ನಿಮಗೆ ABHA ID ಡೌನ್ ಲೋಡ್ ಮಾಡಲು ಲಭಿಸುತ್ತದೆ.

ಅಮ್ಮಂದಿರ ದಿನಕ್ಕೆ ಗುಡ್‌ ನ್ಯೂಸ್‌, ಇನ್ಮುಂದೆ ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಕವರ್‌ ಆಗಲಿದೆ 'ಬಾಡಿಗೆ ತಾಯ್ತನ'!

ಆಭಾ ಐಡಿ ಬಳಸಿ ನೀವು ಹೊಸ ವಿಮೆ ಖರೀದಿಸಬಹುದು ಅಥವಾ ವಿಮೆ ನವೀಕರಣದ ಸಮಯದಲ್ಲಿ ಇದನ್ನು ನಿಮ್ಮ ವಿಮಾ ಕಂಪನಿಗೆ ನೀಡಬಹುದು. ಇನ್ನು ಈ ಐಡಿ ಪಡೆಯಲು ಯಾವುದೇ ಅರ್ಹತಾ ಮಾನದಂಡವಿಲ್ಲ.

ಪಾಲಿಸಿದಾರರಿಗೆ ಈ ವಿಚಾರ ತಿಳಿದಿರಲಿ
ಆಭಾ ಐಡಿ ಮೂಲಕ ಸರ್ಕಾರ ಪ್ರತಿ ವ್ಯಕ್ತಿಯ ಆರೋಗ್ಯ ಸಂಬಂಧಿ ಮಾಹಿತಿಗಳ ದಾಖಲೆಗಳನ್ನು ನಿರ್ವಹಣೆ ಮಾಡುತ್ತದೆ. ಆಭಾ ಐಡಿ ಆಸ್ಪತ್ರೆಗೆ ಸೇರಿಸುವ ಪ್ರಕ್ರಿಯೆ ಹಾಗೂ ಆರೋಗ್ಯ ವಿಮಾ ಕ್ಲೇಮ್ ಗಳನ್ನು ಪಡೆಯುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ.