ಮುಂಬೈ[ಸೆ.30]: ಹಣಕಾಸು ಅವ್ಯವಹಾರದ ಆರೋಪಕ್ಕಾಗಿ ಇತ್ತೀಚೆಗಷ್ಟೇ ಭಾರತೀಯ ರಿಸವ್‌ರ್‍ ಬ್ಯಾಂಕ್‌ನಿಂದ ಹಲವು ನಿರ್ಬಂಧಗಳಿಗೆ ಒಳಪಟ್ಟಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೋಆಪರೇಟಿವ್‌ ಬ್ಯಾಂಕ್‌ (ಪಿಎಂಸಿ)ನ ಮತ್ತಷ್ಟುಕರ್ಮಕಾಂಡ ಬೆಳಕಿಗೆ ಬಂದಿದೆ.

ಪಿಎಂಸಿ ತಾನು ನೀಡಿರುವ ಒಟ್ಟು 8800 ಕೋಟಿ ರು. ಸಾಲದಲ್ಲಿ ಭರ್ಜರಿ 6500 ಕೋಟಿ ರು.ಗಳಷ್ಟು ಸಾಲವನ್ನು, ಇತ್ತೀಚೆಗೆ ದಿವಾಳಿಯಾಗಿರುವ ಎಚ್‌ಡಿಐಎಲ್‌ ಎಂಬ ರಿಯಲ್‌ ಎಸ್ಟೇಟ್‌ ಕಂಪನಿಯೊಂದಕ್ಕೇ ನೀಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಮೊತ್ತವು, ಯಾವುದೇ ಒಂದು ಕಂಪನಿಗೆ ಪಿಎಂಸಿ ನೀಡಬಹುದಾದ ಸಾಲದ ಮೊತ್ತದ ನಾಲ್ಕು ಪಟ್ಟಾಗಿದೆ. ಈ ಮೊದಲು ಎಚ್‌ಡಿಐಎಲ್‌ಗೆ ತಾನು 1000 ಕೋಟಿ ರು. ಸಾಲ ನೀಡಿದ್ದಾಗಿ ಪಿಎಂಸಿ ಆರ್‌ಬಿಐಗೆ ಸುಳ್ಳು ಮಾಹಿತಿ ನೀಡಿತ್ತು.

ಎಚ್‌ಡಿಐಎಲ್‌ ದಿವಾಳಿಯಾದ ಬಳಿಕವೂ, ಇಷ್ಟುಸಾಲದ ಮೊತ್ತದ ಸಂಕಷ್ಟದಲ್ಲಿದೆ. ಆ ಹಣ ವಸೂಲಿಯಾಗಿಲ್ಲ ಎಂಬ ವಿಷಯವನ್ನು ಆರ್‌ಬಿಐನೊಂದಿಗೆ ಪಿಎಂಸಿಯ ಆಡಳಿತ ಮಂಡಳಿ ಹಂಚಿಕೊಂಡಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಬ್ಯಾಂಕ್‌ನ ಸ್ವತಂತ್ರ ನಿರ್ದೇಶಕರೊಬ್ಬರು, ಈ ಹಗರಣದ ಕುರಿತು ಆರ್‌ಬಿಐಗೆ ಮಾಹಿತಿ ನೀಡಿದ ಮೇಲೆ ಪಿಎಂಸಿಯ ಅಧ್ಯಕ್ಷರಾಗಿದ್ದ ಜೋಯ್‌ ಥಾಮಸ್‌ ಅವರು ಈ ಮಾಹಿತಿಯನ್ನು ಆರ್‌ಬಿಐನೊಂದಿಗೆ ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ. ಈ ವಿಷಯ ಖಚಿತವಾದ ಬಳಿಕವಷ್ಟೇ ಪಿಎಂಸಿಯ ದೈನಂದಿನ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿತು ಎಂದು ಮೂಲಗಳು ತಿಳಿಸಿವೆ.