ನವದೆಹಲಿ(ಜೂ.14): ಆರ್ಥಿಕ ಕುಸಿತ ಮತ್ತು ಉದ್ಯೋಗಾವಕಾಶ ಕ್ಷೀಣಿಸಿರುವ ಪರಿಣಾಮ, ಇದೇ ಜೂ.22ರಂದು ಪ್ರಧಾನಿ ಮೋದಿ ಆರ್ಥಿಕ ತಜ್ಞರ ಅತ್ಯಂತ ಮಹತ್ವದ ಸಭೆ ಕರೆದಿದ್ದಾರೆ.

ತ್ವರಿತ ಗತಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಯೋಜನೆ ರೂಪಿಸಲು ಆರ್ಥಿಕ ತಜ್ಞರ ಸಭೆ ಕರೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ ಮಂಡನೆಗೂ ಎರಡು ವಾರಗಳ ಮೊದಲೇ ಪ್ರಧಾನಿ ಈ ಸಭೆ ಕರೆದಿದ್ದು, ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಣಯಗಳನ್ನು ಬಜೆಟ್'ನಲ್ಲಿ ಪೂರಕವಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.

ಕಳೆದ ಜನೆವರಿ-ಮಾರ್ಚ್ ಅವಧಿಯ ಜಡಿಪಿ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರ ಅಂಕಿ ಅಂಶ ಪ್ರಕಟಿಸಿದ್ದು, ಈ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಕೇವಲ ಶೇ. 5.8ರಷ್ಟು ದಾಖಲಾಗಿದೆ. 

ಕಳೆದ ಒಂದುವರೆ ವರ್ಷದಿಂದ ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿದ್ದ ಭಾರತ, ಇದೀಗ ಈ ಪಟ್ಟವನ್ನು ಚೀನಾಗೆ ಬಿಟ್ಟು ಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇದೇ ಜೂ.22ರಂದು ಕರೆದಿರುವ ಸಭೆಗೆ ಭಾರೀ ಮಹತ್ವ ಬಂದಿದ್ದು, ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಣಯಗಳ ಮೇಲೆ ದೇಶದ ಚಿತ್ತ ಹರಿದಿದೆ.