'ಭಾರತ ಉದ್ಯಮ ಮತ್ತು ವಹಿವಾಟಿಗೆ ಪ್ರಶಸ್ತ ದೇಶ'| ವೈಬ್ರೆಂಟ್ ಗುಜರಾತ್ ಸಮಾವೇಶದಲ್ಲಿ ಪ್ರಧಾನಿ ಅಭಿಮತ| ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಉದ್ಘಾಟಿಸಿದ ಮೋದಿ| ಹೂಡಿಕೆಯ ಆಕರ್ಷಣೆಗೆ ತೆಗೆದುಕೊಂಡಿರುವ ಕ್ರಮಗಳ ಸಮರ್ಥನೆ| ಉದ್ಯಮ ಸುಗಮ ವರದಿಯಲ್ಲಿ ಭಾರತ ರ್ಯಾಕಿಂಗ್ ಪಟ್ಟಿ ಏರಿಕೆ|
ಗಾಂಧಿನಗರ(ಜ.18): ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲಿ ಭಾರತ ಉದ್ಯಮ ಮತ್ತು ವಹಿವಾಟುಗಳಿಗೆ ಪ್ರಶಸ್ತ ದೇಶವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ 'ವೈಬ್ರೆಂಟ್ ಗುಜರಾತ್' ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿ, ತಮ್ಮ ಸರ್ಕಾರ ಹೂಡಿಕೆಯ ಆಕರ್ಷಣೆಗೆ ತೆಗೆದುಕೊಂಡಿರುವ ಕೆಲವು ಕ್ರಮಗಳಿಂದಾಗಿ ಉದ್ಯಮ ಸುಗಮವಾಗಿ ನಡೆಸುವ ವಾತಾವರಣ ಸೃಷ್ಟಿಯಾಗಿದೆ ಎಂದರು.
ವಿಶ್ವ ಬ್ಯಾಂಕ್‌ನ ಉದ್ಯಮ ಸುಗಮ ವರದಿಯಲ್ಲಿ ಭಾರತ ರ್ಯಾಕಿಂಗ್ ಪಟ್ಟಿಯಲ್ಲಿ 65ನೇ ಸ್ಥಾನಕ್ಕೆ ಏರಿಕೆಯಾಗಿದ್ದು, ಉದ್ಯಮ ವಲಯದಲ್ಲಿ ಭಾರತ ಹೂಡಿಕೆಗೆ ಪ್ರಶಸ್ತ ದೇಶ ಎನಿಸಿಕೊಂಡಿದೆ. ಶ್ರಮಪಟ್ಟು ಕೆಲಸ ಮಾಡಿದರೆ ಮುಂದಿನ 50 ವರ್ಷಗಳಲ್ಲಿ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಇನ್ನಷ್ಟು ಮುಂದೆ ಸಾಗಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಂತಹ ಅನೇಕ ಹಣಕಾಸು ಸಂಸ್ಥೆಗಳು ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿವೆ. ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಲು ಮತ್ತು ಸಾಧಿಸುವುದಕ್ಕೆ ಇರುವ ಅಡೆತಡೆಗಳನ್ನು ತೊಡೆದು ಹಾಕುವಲ್ಲಿ ನಾವು ಗಮನ ಹರಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ಸರಕು ಮತ್ತು ಸೇವಾ ತೆರಿಗೆ ಜಾರಿ, ತೆರಿಗೆ ವಿಧಾನ ಸರಳಗೊಳಿಸಿದ್ದು ವಹಿವಾಟುಗಳ ವೆಚ್ಚವನ್ನು ಕಡಿಮೆ ಮಾಡಿ ಪ್ರಕ್ರಿಯೆಗಳನ್ನು ಹೆಚ್ಚು ದಕ್ಷವನ್ನಾಗಿಸಿವೆ. ಉದ್ಯಮ, ವಹಿವಾಟುಗಳ ವಿಧಾನ ಸರಳವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
